ಮಂಗಳೂರು : ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಪ್ರಕಟಣೆಗೊಂಡ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಚಂದ್ರಶೇಖರ ಶೆಟ್ಟಿ ಅವರು ರಚಿಸಿದ ‘ಹುಲಿವೇಷ’ ಕೃತಿಯ ಲೋಕಾರ್ಪಣೆ ಸಮಾರಂಭ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ದಿನಾಂಕ 18-10-2023ರಂದು ನಡೆಯಿತು. ಖ್ಯಾತ ರಂಗಕರ್ಮಿ, ನಾಟಕಗಾರ ಹಾಗೂ ಸಾಹಿತಿ ಡಾ. ನಾ.ದಾಮೋದರ ಶೆಟ್ಟಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ, “ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯದಲ್ಲಿ ಇಂತಹ ಪುಸ್ತಕಗಳು ಅನಿವಾರ್ಯ” ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ಪುಸ್ತಕದ ಕುರಿತಾಗಿ ಮಾತನಾಡಿ, “ಈ ಕೃತಿ ಈಗಿನ ಕಾಲದ ಅನಿವಾರ್ಯತೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳ ವರಿಷ್ಠ ವಂ.ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ತನ್ನ ಬಾಲ್ಯ ಜೀವನವನ್ನು ನೆನಪು ಮಾಡಿಕೊಂಡು ಹುಲಿವೇಷ ಕೊಡುತ್ತಿದ್ದ ಉತ್ಸಾಹವನ್ನು ನೆನಪಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಇಂತಹ ಕೃತಿಗಳು ಇನ್ನೂ ಮೂಡಿಬರಲಿ ಎಂದು ತಿಳಿಸಿ ಲೇಖಕರನ್ನು ಅಭಿನಂದಿಸಿದರು. ಹಿರಿಯ ಹುಲಿವೇಷ ಕಲಾವಿದ ಕದ್ರಿ ಗಂಗಾಧರ ದೇವಾಡಿಗ, ತಾಸೆ ಕಲಾವಿದ ಸಂತು, ಡೋಲು ಕಲಾವಿದ ರಮೇಶ್ ಮತ್ತು ಹುಲಿವೇಷ ಕಲಾಪೋಷಕ ಮೊಹಮ್ಮದ್ ಆಸಿಫ್ ಇವರುಗಳನ್ನು ಈ ಸಂದರ್ಭದಲ್ಲಿ ಅಭಿನ೦ದಿಸಿ ಸನ್ಮಾನಿಸಲಾಯಿತು. ಲೇಖಕ ಡಾ. ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂತ ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ಡಾ. ವಿದ್ಯಾವಿನುತಾ ಡಿ’ಸೋಜಾ ವಂದಿಸಿದರು.