ವಾಮನರೂಪ ವಿಶ್ವವನ್ನೇ ವ್ಯಾಪಿಸಿದಂತೆ ಚಿಕ್ಕ ರೂಪಕ್ಕೆ ಇರುವ ಶಕ್ತಿ ಅಗಾಧವಾದದ್ದು. ದೊಡ್ಡ ಆಲದ ಮರವನ್ನು ಬೋನ್ಸಾಯ್ ಮರದ ರೂಪದಲ್ಲಿ ನೋಡಿದಂತೆ, ಸೇಬುಹಣ್ಣಿನಿಂದ ತುಂಬಿದ ಮರವನ್ನು ಚಿಕ್ಕ ಹೂದಾನಿಯಲ್ಲಿ ನೋಡಿದಾಗ ಸಿಗುವ ಸಂತೋಷವೇ ಬೇರೆ. ಅದು ಮಿನಿಯೇಚರ್ ಅಂಚೆ ಮತ್ತು ಸ್ಟಾಂಪ್ ಮೇರುಕೃತಿಗಳ ಕಲಾಪ್ರದರ್ಶನ ನೋಡಿದಾಗ ಆದ ಅನುಭವ. ಮೊದಲೆಲ್ಲಾ ಅಂಚೆ ಚೀಟಿಗಳನ್ನು ಸಂಗ್ರಹಿಸುವುದೇ ಒಂದು ದೊಡ್ಡ ಹವ್ಯಾಸವಾಗಿತ್ತು. ಗ್ರಾಫ್ ಪೇಪರ್ಗಳಲ್ಲಿ ಅದನ್ನು ಅಂಟಿಸಿ ಆಲ್ಬಂ ಮಾಡಿ ಇಡುತ್ತಿದ್ದರು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಿಶೇಷ ಸಂದೇಶ ಸ್ವೀಕರಿಸಿದಂತೆ, ಒಳ್ಳೆಯ ಕಲಾಪ್ರದರ್ಶನ ನೋಡಿದ ಅನುಭವ. ಕಲಾಪ್ರಿಯರನ್ನು, ಕಲಾವಿದರನ್ನು ಆಕರ್ಷಿಸುವಲ್ಲಿ, ಹೊಸತನವನ್ನು ಪರಿಚಯಿಸಿ, ಪ್ರೇರೇಪಿಸುವದರಲ್ಲಿ ಇದೊಂದು ಉತ್ತಮ ಪ್ರದರ್ಶನ.
ದೊಡ್ಡ, ದೊಡ್ಡ ಕಲಾಕೃತಿಗಳನ್ನು ಚಿಕ್ಕ ಸ್ಟಾಂಪ್ ಸೈಜ್ನಲ್ಲಿ ಮೂಲರೂಪದಲ್ಲಿ ನೋಡುವ ಅವಕಾಶ. ಚಿತ್ರಗಳ ಗುಣಮಟ್ಟ ಅದನ್ನು ಪ್ರದರ್ಶಿಸಿದ ರೀತಿ ಅದರ ಹಿಂದಿರುವ ಪ್ರಯತ್ನ ಎಲ್ಲವೂ ಶ್ಲಾಘನೀಯವಾದದ್ದು. ಶೆಣೈ ಆರ್ಟ್ ಫೌಂಡೇಷನ್ ಇದನ್ನು ಆಯೋಜನೆ ಮಾಡಲಾಗಿತ್ತು. 20-10-2023ರಂದು ಬೆಂಗಳೂರಿನ ವಿಜಯನಗರದ ಶೆಣೈ ಡಿಸೈನ್ ಸ್ಟುಡಿಯೋದಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಸುಮಾರು ಇನ್ನೂರಕ್ಕೂ ಹೆಚ್ಚು ಕಲಾವಿದರ ಸ್ಟಾಂಪ್ ಅಳತೆಯ ಎರಡು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬಿಂದು ಸಿಂಧುವಾಗುವ ಹಾಗೆ ಚಿಕ್ಕ ಚಿತ್ರಗಳಲ್ಲೇ ಅಗಾಧತೆಯನ್ನು ಕಾಣಬಹುದು. ನಿಲೇಶ್ ಕಿಂಕಲೆ ಅವರ ನಿಪ್ಪೊನ್ ಆರ್ಟ್ ಗ್ಯಾಲರಿ ಮತ್ತು ಅರ್ಕ ಆರ್ಟ್ ಟ್ರಸ್ಟ್ ಇದನ್ನು ಸಂಯೋಜನೆ ಮಾಡಿದೆ. 2023ರ ನೆನಪಿನಲ್ಲಿ ಉಳಿಯುವ ಈ ಕಲಾಪ್ರದರ್ಶನವು ದಿನಾಂಕ 02-11-2023ರ ತನಕ ನಡೆಯಲಿದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಇದು ಪ್ರದರ್ಶನಗೊಳ್ಳಲಿದೆ.
- ಗಣಪತಿ ಎಸ್. ಹೆಗಡೆ, ಕಲಾವಿದರು/ಕಲಾವಿಮರ್ಶಕರು