ಕಾಸರಗೋಡು : ರಂಗಚಿನ್ನಾರಿ, ಕಾಸರಗೋಡು (ರಿ.) ಇದರ ಸಂಗೀತ ಘಟಕ ಸ್ವರ ಚಿನ್ನಾರಿಯ 1ನೇ ಸರಣಿ ಕಾರ್ಯಕ್ರಮ
‘ಸ್ವರ ಸಂಚಾರ’ ಸಂಗೀತ ಸ್ವರಗಳ ಕಲಿಕೆಯ ಒಂದು ದಿನದ ಶಿಬಿರವು ದಿನಾಂಕ 28.10.2023 ನೇ ಶನಿವಾರ ಬೆಳಿಗ್ಗೆ 9.30 ರಿಂದ ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು ಹಾಗೂ ಸಂಗೀತ ಗುರುಗಳಾದ ಗಾನಪ್ರವೀಣ ವಿದ್ವಾನ್ ಶ್ರೀ ಯೋಗೀಶ್ ಶರ್ಮ ಬಳ್ಳಪದವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸ್ವರಚಿನ್ನಾರಿಯ ಗೌರವಾಧ್ಯಕ್ಷರು ಹಾಗೂ ಖ್ಯಾತ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಮಣಿಪಾಲ ಇದರ ನಿರ್ದೇಶಕಿಯಾದ ವಿದುಷಿ ಶ್ರೀಮತಿ ಉಮಾ ಶಂಕರಿ ಪಾಲ್ಗೊಳ್ಳಲಿದ್ದಾರೆ.
ಸಂಜೆ ಗಂಟೆ 4.00ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವದಿಸಲಿದ್ದು, ಖ್ಯಾತ ನೇತ್ರ ತಜ್ಞ ಹಾಗೂ ಸಮಾಜ ಸೇವಕರಾದ ಡಾ. ಅನಂತ್ ಕಾಮತ್ ಉಪಸ್ಥಿತರಿರುವರು.
ಈ ಕಾರ್ಯಕ್ರಮಕ್ಕೆ ಸ್ವರಚಿನ್ನಾರಿಯ ಗೌರವಾಧ್ಯಕ್ಷರಾದ ಶ್ರೀಕೃಷ್ಣಯ್ಯ ಅನಂತಪುರ, ಕಾರ್ಯಾಧ್ಯಕ್ಷರಾದ ಪುರುಷೋತ್ತಮ್ ಕೊಪ್ಪಲ್, ಪ್ರಧಾನ ಕಾರ್ಯದರ್ಶಿ ಕಿಶೋರ್ ಪೆರ್ಲ, ಸಹ ಕಾರ್ಯದರ್ಶಿ ಪ್ರತಿಜ್ಞಾ ರಂಜಿತ್ ಹಾಗೂ ರಂಗ ಚಿನ್ನಾರಿಯ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ., ಕೆ. ಸತೀಶ್ಚಂದ್ರ ಭಂಡಾರಿ ಹಾಗೂ ಮನೋಹರ ಶೆಟ್ಟಿ ಎಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ.
ಸ್ವರ ಚಿನ್ನಾರಿ
ಕಾಸರಗೋಡಿನ ಸುಗಮ ಸಂಗೀತ ಹಾಡುಗಾರರು, ರಚನೆಕಾರರು ಮತ್ತು ವಾದ್ಯ ಸಂಗೀತ ಕಲಾವಿದರನ್ನು ಒಟ್ಟು ಸೇರಿಸುವ ಧ್ಯೇಯದಲ್ಲಿ ಕಟ್ಟಿರುವ ಘಟಕ “ಸ್ವರಚಿನ್ನಾರಿ”. ಇದರ ಮೊದಲನೇ ಸರಣಿಯ ಕಾರ್ಯಕ್ರಮವನ್ನು ಮುಖ್ಯವಾಗಿ ಕಲಿಕೆಗೆ ಒತ್ತಿಟ್ಟು, ಹಾಡುಗಾರರಿಗೆ ಸಂಗೀತದಲ್ಲಿ ಸ್ವರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತು ಅದರ ನಾನಾ ಪ್ರಕಾರ ಸಂಚಾರಗಳನ್ನು ಕಲಿಸುವ ನಿಟ್ಟಿನಲ್ಲಿ ಆಯೋಜಿಸುತ್ತಿರುವ ಒಂದು ದಿನದ ಸ್ವರ ಸಂಗೀತ ಶಿಬಿರ “ಸ್ವರ ಸಂಚಾರ”.
ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ, ಹಲವಾರು ಪ್ರಸಿದ್ಧ ಗಾಯಕರು ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿರುವ, ಸಾವಿರಾರು ಪುರಸ್ಕಾರಗಳನ್ನು ಪ್ರಪಂಚದಾದ್ಯಂತ ತಮ್ಮ ಮುಡಿಗೇರಿಸಿಕೊಂಡ, ಖ್ಯಾತ ಮ್ಯಾಂಡೋಲಿನ್ ವಾದಕರು, ರಾಗಶ್ರೀ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕರು ಹಾಗೂ ಸಂಗೀತ ನಿರ್ದೇಶಕರು ಆಗಿರುವ ‘ಎನ್.ಎಸ್.ಪ್ರಸಾದ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ.