ಮುಂಬೈ : ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ಇದರ ಚತುರ್ಥ ವಾರ್ಷಿಕ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2023’ ಇದಕ್ಕೆ ಹಿರಿಯ ಭಾಗವತ ಶ್ರೀ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮವು ದಿನಾಂಕ 29-10-2023ನೇ ಆದಿತ್ಯವಾರ ಅಪರಾಹ್ನ ಗಂಟೆ 2-00 ರಿಂದ ಮುಂಬೈನ ಗೋರೆಗಾಂವ್ (ಪಶ್ಚಿಮ)ದ ಆರೇ ರೋಡ್ ನಲ್ಲಿರುವ ಅಂಬಾಬಾಯಿ ದೇವಸ್ಥಾನದ ಹತ್ತಿರದ ಕೇಶವಗೋರೆ ಸಭಾಗೃಹದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀನಿವಾಸ ಒರ್ನಮೆಂಟ್ ಮುಂಬೈ ಇದರ ಶ್ರೀ ಶ್ರೀಧರ ವಿ. ಆಚಾರ್ಯ ಉದ್ಘಾಟಿಸಲಿದ್ದು, ಮಂಗಳೂರಿನ ರಥಬೀದಿಯ ಕಡಬ ಸಂಸ್ಕರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಎನ್. ಆಚಾರ್ಯ ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಖ್ಯಾತ ಕನ್ನಡ ಕೊಂಕಣಿ ರಂಗನಟರಾದ ಶ್ರೀ ಕಮಲಾಕ್ಷ ಸರಾಫ್ ಹಾಗೂ ಉದ್ಯಮಿ ಮತ್ತು ಯಕ್ಷಗಾನ ಕಲಾವಿದರಾದ ಶ್ರೀ ವಾಸುದೇವ ಮಾರ್ನಾಡ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಡಬ ಸಂಸ್ಕರಣಾ ಸಮಿತಿ, ರಥಬೀದಿ, ಮಂಗಳೂರು ಇದರ ಗೌರವಾಧ್ಯಕ್ಷರಾದ ಶ್ರೀ ಜಿ. ಟಿ. ಆಚಾರ್ಯ, ಮುಂಬೈ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ‘ಯಕ್ಷ – ಗಾನ – ನಾಟ್ಯ ವೈಭವ’ ಹಾಗೂ ಪ್ರಸಿದ್ಧ ಕಲಾವಿದರಿಂದ ‘ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಶ್ರೀ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ :
ಯಕ್ಷಗಾನದ ಪರಿಸರದಲ್ಲಿ ಹುಟ್ಟಿ ಬೆಳೆದು ಶಾಲಾ ಕಾಲೇಜುಗಳಲ್ಲಿ ಓರ್ವ ಸಮರ್ಥ ವೇಷಧಾರಿಯಾಗಿ ಉಭಯ ತಿಟ್ಟುಗಳ ಪ್ರತಿಭಾವಂತ ಭಾಗವತರಾಗಿ ತನ್ನನ್ನು ತಾನು ಈ ಕಲೆಗೆ ಅರ್ಪಿಸಿಕೊಂಡವರು. ಉದ್ಯೋಗ ನಿಮಿತ್ತ ಮುಂಬಯಿಯನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡು ಸುಮಾರು ಮೂರುವರೆ ದಶಕಗಳಿಂದ ಹೆಚ್ಚಿನ ಎಲ್ಲಾ ಯಕ್ಷಗಾನ ಮಂಡಳಿಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸಿ ಆಟಕೂಟಗಳೆರಡರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿ ಯಕ್ಷರಂಗದಲ್ಲಿ ಒಂದು ಕ್ರಾಂತಿಯನ್ನುಂಟುಮಾಡಿ ತಾರಾಮೌಲ್ಯವನ್ನು ತಂದುಕೊಟ್ಟವರು. ಯಕ್ಷಗಾನವನ್ನು ಮುಂಬಯಿಯಲ್ಲಿ ಉಳಿಸಿ ಬೆಳೆಸುವಲ್ಲಿ ಅವಿರತವಾಗಿ ದುಡಿಯುತ್ತಾ ಯಕ್ಷಗಾನದ ವಿಮಾನ ಭಾಗವತರೆಂದೇ ಪ್ರಸಿದ್ಧಿಯಾಗಿದ್ದಾರೆ.
ಕಡಬದ್ವಯರು :
ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಕ್ಷೇತ್ರದ ತೆಂಕುತಿಟ್ಟಿನ ಆಗಿನ ಕಾಲದಲ್ಲಿ ವಿಜೃಂಭಿಸುತ್ತಿದ್ದ ಸುರತ್ಕಲ್ ಮೇಳದಲ್ಲಿ ಹೆಸರಾಂತ ಹಿಮ್ಮೇಳ ವಾದಕರಾದ ಕಡಬ ನಾರಾಯಣ ಆಚಾರ್ಯರು ಸುಮಾರು ಮೂರು ದಶಕಗಳ ಕಾಲ ಕಲಾ ಸೇವೆಗೆೃದು 2008ನೇ ಇಸವಿಯಲ್ಲಿ ತನ್ನ 51 ನೇ ವಯಸ್ಸಿನಲ್ಲಿ ದಿವಂಗತರಾಗಿರುವರು. ತದನಂತರ ತಂದೆಯಷ್ಟೇ ಪ್ರತಿಭಾನ್ವಿತರಾಗಿದ್ದ ಅವರ ಸುಪುತ್ರ ಕಡಬ ವಿನಯ ಆಚಾರ್ಯರು ಅತೀ ಕಿರಿಯ ವಯಸ್ಸಿನಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಹಿರಿಯ ಕಲಾವಿದರೊಡಗೂಡಿ ಉತ್ತಮ ಮದ್ದಳೆಗಾರನಾಗಿ ಜನಮೆಚ್ಚುಗೆ ಗಳಿಸುತ್ತಿರುವ ಸಂದರ್ಭ ತನ್ನ 34ನೇ ಇಳಿ ವಯಸ್ಸಿನಲ್ಲಿ ಕಳೆದ 2019ನೇ ಇಸವಿಯಲ್ಲಿ ಅನಾರೋಗ್ಯದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿರುವರು.