ಬೆಂಗಳೂರು : ಬೆಂಗಳೂರಿನ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಡಾ.ನರಹಳ್ಳಿ ಪ್ರತಿಷ್ಠಾನ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ‘ನರಹಳ್ಳಿ ಪ್ರಶಸ್ತಿ’ ಮತ್ತು ‘ನರಹಳ್ಳಿ ದಶಮಾನ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 08-10-2023ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿಯವರು ಮಾತನಾಡುತ್ತಾ “ಕನ್ನಡ ಸಾಹಿತ್ಯ ಯಾವತ್ತೂ ನಿಂತ ನೀರಾಗಿಲ್ಲ. ಸದಾ ಹರಿಯುವ ಕಾವೇರಿ ನದಿಯಂತೆ. ಹಳೆ ಲೇಖಕರು ಬರೆಯುತ್ತಿರುವಾಗಲೇ ಹೊಸ ಲೇಖಕರು ಹುಟ್ಟುತ್ತಿರುತ್ತಾರೆ. ಈ ಕನ್ನಡ ಸಾಹಿತ್ಯ ಪರಂಪರೆಯನ್ನು ಮುಂದುವರಿಸುವವರೇ ಯುವ ಪೀಳಿಗೆ. ಕನ್ನಡ ಕಾವ್ಯ ಪರಂಪರೆ ಯುವ ಸಮೂಹದ ಬರಹ, ಲೇಖನಗಳ ಮೂಲಕ ನಿತ್ಯ ನಿರಂತರವಾಗಿ ಮುಂದುವರಿಯಬೇಕು. ಇಂತಹ ಬೆಳವಣಿಗೆ ಸಾಧ್ಯವಾದಾಗ ಕನ್ನಡ ಸಾಹಿತ್ಯ ಇನ್ನಷ್ಟು ಪರಿಪಕ್ವತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ನಾವುಗಳೆಲ್ಲರೂ ಗಮನಿಸುತ್ತಿದ್ದೇವೆ ಹೊಸ ಕವಿಗಳು, ಕಥೆಗಾರರು, ಭಿನ್ನ ಭಿನ್ನ ವಿಮರ್ಶಕರು ಹುಟ್ಟುತ್ತಿರುವಂತಹ ಕನ್ನಡ ಸಾಹಿತ್ಯಕ್ಕೆ ಕೊನೆಯೆಂಬುದು ಇಲ್ಲ ಎಂದು ಭಾವಿಸುವೆ. ಇಂತಹ ಸಾಹಿತ್ಯವನ್ನು ಎಚ್ಚರ, ಜಾಗೃತಿಗೊಳಿಸಲು ನಾಡಿನೆಲ್ಲೆಡೆ ಹಲವು ಸಂಸ್ಥೆಗಳು, ಪ್ರತಿಷ್ಠಾನಗಳು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಲೇಖಕ ಚ.ಹ.ರಘುನಾಥ ಅವರಿಗೆ ‘ನರಹಳ್ಳಿ ಪ್ರಶಸ್ತಿ’ ನೀಡಿ ಸತ್ಕರಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರಿಗೆ ‘ನರಹಳ್ಳಿ ದಶಮಾನ ಪುರಸ್ಕಾರ’ ಪ್ರದಾನ ಮಾಡಿದರು. ‘ನರಹಳ್ಳಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಚ.ಹ. ರಘುನಾಥ್, “ಸಾಹಿತ್ಯವನ್ನು ಲಾಭದ ದೃಷ್ಟಿಯಲ್ಲಿ ನೋಡಲಾರೆ. ಈ ಪ್ರಶಸ್ತಿಯು ಪ್ರೇಮದ ಅಭಿವ್ಯಕ್ತಿ ಎಂದು ತಿಳಿದಿರುವೆ. ನರಹಳ್ಳಿ ಅವರು ನಮ್ಮ ಜೊತೆ ವರ್ತಿಸುವ ರೀತಿ ಅದು ಮಾತೃ ವಾತ್ಸಲ್ಯದಂತೆ ಎಂದು ತಿಳಿದಿರುವೆ. ನರಹಳ್ಳಿ ಅವರು ನಡೆದು ಬಂದ ದಾರಿಯೇ ವಿಶೇಷ. ಹೊಸದಾಗಿ ಕನ್ನಡ ಸಾಹಿತ್ಯವನ್ನು ತಿಳಿಯಬೇಕು ಎನ್ನುವವರಿಗೆ ಅವರು ಕನ್ನಡ ಸಾಹಿತ್ಯವನ್ನು ಕಟ್ಟಿಕೊಡುವ ಬಗೆಯೇ ವಿಭಿನ್ನತೆಯಿಂದ ಕೂಡಿರುತ್ತದೆ” ಎಂದರು.
ನರಹಳ್ಳಿ ದಶಮಾನ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಜೋಗಿ, “ನನಗೆ ಪ್ರಶಸ್ತಿ ಸ್ವೀಕರಿಸುವ ಆಸಕ್ತಿಯೂ ಇಲ್ಲ, ಪ್ರಶಸ್ತಿಗೆ ಮಸ್ತಕಗಳನ್ನು ಕಳುಹಿಸುವ ಒಲವೂ ಇಲ್ಲ. ಆದರೆ ಕನ್ನಡ ಸಾಹಿತ್ಯ ಕುರಿತಾದ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕೆನ್ನುವ ಹಂಬಲವಿದೆ. ಯುವಕರು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನನ್ನ ಕಿರಿಯ ಸಹಪಾಠಿ ಒಬ್ಬ ಯಾವ ತರಹ ಕನ್ನಡ ಪುಸ್ತಕಗಳನ್ನು ಓದುತ್ತಾನೆ ಎಂದರೆ, ಆತನಿಂದ ನಾನು ಸ್ಫೂರ್ತಿ ಪಡೆದಿರುವೆ” ಎಂದು ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ಡಾ.ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಆನಂದರಾಮ ಉಪಾಧ್ಯ, ಸಾಹಿತಿಗಳಾದ ಲಕ್ಷ್ಮಣ ಕೊಡಸೆ, ಸೀತಾರಾಮ್, ರಜನಿ ನರಹಳ್ಳಿ ಉಪಸ್ಥಿತರಿದ್ದರು.
ಚ.ಹ. ರಘುನಾಥ : ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಪುರದವರಾದ ಶ್ರೀ ಚ.ಹ.ರಘುನಾಥ್‌ರವರು ಜನಿಸಿದ್ದು 1974ರ ನವೆಂಬರ್ 1ರಂದು. ಇವರು ಪ್ರತಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುತ್ತಾರೆ. ಹೊಳೆಯಲ್ಲಿ ಹರಿದ ನೀರು (ಕಏತೆಗಳು), ಹೊರಗು ಮಳೆ ಒಳಗು ಮಳೆ (ಕತೆಗಳು), ರಾಗಿ ಮುದ್ದೆ (ಪ್ರಬಂಧ ಸಂಕಲನ), ಚೆಲ್ಲಾ ಪಿಲ್ಲ (ಲೇಖನಗಳು), ವ್ಯಂಗ್ಯ ಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ. ದೇವಿ ಶೆಟ್ಟಿ, ಬಿಲ್‌ಗೇಟ್ಸ್, ಅಣ್ಣ ಹಜಾರೆ (ಜೀವನ ಚಿತ್ರಗಳು) ಸತಿಸುಲೋಚನಾ, ಚಂದನವನದ ಚಿನ್ನದ ಹೂಗಳು, ಬೆಳ್ಳಿ ತೊರೆ, ಪುಟ್ಟ ಲಕ್ಷ್ಮಿಯ ಕತೆಗಳು (ಮಕ್ಕಳ ಕತೆಗಳು) ಅಂಕಣ ವ್ಯಾಯೋಗ ಇವರ ಪ್ರಮುಖ ಕೃತಿಗಳು. ರಘುನಾಥರವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ದತ್ತಿ ನಿಧಿ ಬಹುಮಾನ ಹಾಗೂ ಚಿನ್ನದ ಪದಕ, ಕಥಾ ರಂಗ ಪ್ರಶಸ್ತಿ, ಭೂಪಾಲಂ ದತ್ತಿ ನಿಧಿ ಬಹುಮಾನ, ವರ್ಧಮಾನ ಪ್ರಶಸ್ತಿ ಅನೇಕ ಪುಸ್ತಕ ಬಹುಮಾನಗಳು ಬಂದಿವೆ. 2019ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವು ಬೆಟ್ಟ ತೊರೆ ಕೃತಿಗೆ ಬಂದಿದೆ. ಇದೀಗ ‘ನರಹಳ್ಳಿ ಪ್ರಶಸ್ತಿ’ಯ ಗರಿ.
ಶ್ರೀ ಜೋಗಿ (ಗಿರೀಶ್‌ರಾವ್ ಹತ್ವಾರ್) – ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಗಿರೀಶ್‌ರಾವ್ ಹತ್ವಾರ್‌ರವರಿಗೆ ಜೋಗಿ, ಜಾನಕಿ, ಸತ್ಯವ್ರತ ಮುಂತಾದ ಅಂಕಿತ ನಾಮಗಳಿವೆ. ಇವರು ಜನಿಸಿದ್ದು 1965ರ ನವೆಂಬರ್ 16ರಂದು. ‘ಹಾಯ್ ಬೆಂಗಳೂರು’ ವಾರ ಪತ್ರಿಕೆಯಲ್ಲಿ ‘ರವಿ ಕಾಣದ್ದು’ ಮತ್ತು ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಿತರಾದ ಜೋಗಿಯವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿರುತ್ತಾರೆ. ಪತ್ರಿಕೋದ್ಯಮ ವೃತ್ತಿ ಜೊತೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ನದಿಯ ನೆನಪಿನ ಹಂಗು, ಯಾಮಿನಿ, ಚೋಗಿ ಮನೆ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಯಾಕಿನ್ನಲಿ, ಗುರುವಾಯನ ಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ಸೀಳು ನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ಕಥಾಸಮಯ, ಆಸ್ಕ್ ಮಿಸ್ಟರ್, ನೋಟ್ ಬುಕ್, ಅಶ್ವತ್ಥಾಮನ್, ಹಸ್ತಿನಾವತಿ ಮುಂತಾಗಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ, ಸಾಹಿತ್ಯ ರತ್ನ, ಸಾಹಿತ್ಯ ಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ಇದೀಗ ಇವರಿಗೆ ‘ನರಹಳ್ಳಿ ದಶಮಾನ ಪುರಸ್ಕಾರ’ದ ಗೌರವ.