ಮೂಡುಬಿದಿರೆ: ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಅವರ ಮಹಾಕಾವ್ಯ ‘ಚಾರುವಸಂತ’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಂಗರೂಪಕ್ಕೆ ತರುತ್ತಿದ್ದು, ಇದರ ಪ್ರಥಮ ಪ್ರಯೋಗವು ದಿನಾಂಕ 29-10-2023ರ ಸಂಜೆ 6.15ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಕಾಣಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಡಾ. ಹಂ.ಪ. ನಾಗರಾಜಯ್ಯ ಚಾರು ವಸಂತ ರಂಗ ಪಯಣವನ್ನು ಉದ್ಘಾಟಿಸಲಿರುವರು. ಡಾ.ನಾ. ದಾಮೋದರ ಶೆಟ್ಟಿ, ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್, ಪಿ.ಯು ಕಾಲೇಜು ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಉಪಸ್ಥಿತರಿರುವರು.
ಹಂಪನಾ ರಚಿಸಿದ ದೇಸೀ ಕಾವ್ಯವನ್ನು ರಂಗಕರ್ಮಿ ಹಾಗೂ ಸಾಹಿತಿ ಡಾ. ನಾ.ದಾ. ಶೆಟ್ಟಿ ನಾಟಕವನ್ನಾಗಿಸಿದ್ದಾರೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಬಳಿಕ ರಾಜ್ಯದ ವಿವಿಧೆಡೆ ತಂಡದ ರಂಗಪಯಣ ನಡೆಯಲಿದೆ. ಮೂಡಬಿದಿರೆಯ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.
ಡಾ. ಹಂ.ಪ. ನಾಗರಾಜಯ್ಯ :
ಹಂಪನಾ ಎಂದೇ ಪ್ರಸಿದ್ಧರಾಗಿರುವ ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ ಇವರು ಇಪ್ಪತ್ತೊಂದನೆಯ ಶತಮಾನದ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು. ಸಾಹಿತ್ಯಾಸಕ್ತ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಹಂಪನಾ ಅವರು ತಮ್ಮ ಪ್ರತಿಭೆಗೆ ತಕ್ಕಂತೆ ಅನೇಕ ಗೌರವದ ಸ್ಥಾನಮಾನಗಳನ್ನು ಅಲಂಕರಿಸಿದವರು. ಸಾಹಿತ್ಯ – ಸಂಸ್ಕೃತಿಯ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ಇವರು ‘ದ್ರಾವಿಡ ಭಾಷಾ ವಿಜ್ಞಾನ’, ‘ಭಾರತದ ಭಾಷಾ ಸಮಸ್ಯೆ’ ಮುಂತಾದ ಆರು ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು, ‘ಅಪ್ರತಿಮ ವೀರ ಚರಿತೆ’, ‘ಭರತೇಶ ವೈಭವ’ ಮುಂತಾದ ಹದಿಮೂರು ಗ್ರಂಥ, ‘ನಾಗಶ್ರೀ’ ಮತ್ತು ‘ಸವ್ಯಸಾಚಿ ಪಂಪ’ ಎಂಬ ಕಾದಂಬರಿ, ಅಲ್ಲದೆ ಎರಡು ಪ್ರಬಂಧ ಸಂಕಲನ, ‘ಅತ್ತಿಮಬ್ಬೆ’, ಗಡಿನಾಡು ಗಾಂಧಿ’, ‘ಮಹಾವೀರ’ ಮುಂತಾದ ಎಂಟು ಜೀವನ ಚರಿತ್ರೆ, ‘ಅನನ್ಯ’, ‘ಕವಿವರ ಕಾಮಧೇನು’, ‘ ಗೊಮ್ಮಟ ಬಾಹುಬಲಿ’ ಇತ್ಯಾದಿ ಏಳು ಸಂಶೋಧನೆಗಳು, ‘ಆಕಾಶ ಜಾನಪದ’, ಕರ್ನಾಟಕ ಜಾತ್ರೆಗಳು’, ಮುಂತಾದ ಜಾನಪದ, ‘ವಡ್ಡಾರಾಧನೆ’ ಸೇರಿದಂತೆ ನಾಲ್ಕು ಪ್ರಚಾರೋಪನ್ಯಾಸ ಮಾಲೆಗಳು, ‘ಕೃಷ್ಣ ಪಾಂಡವರು’, ‘ವೀರಜೀನೇಂದ್ರ’ ಮುಂತಾದ 4 ಅನುವಾದ ಕೃತಿಗಳು, ‘ಮಹಾಕವಿ ರನ್ನ’ ‘ನಾಡೋಜ ಪಂಪ’ ಸೇರಿದಂತೆ 6 ಶಿಶು ಸಾಹಿತ್ಯಗಳು, ಹಾಗೂ ಚಾರುವಸಂತ ಎಂಬ ದೇಸಿ ಮಹಾಕಾವ್ಯ, ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಹಂಪನಾ ಅವರ ಕನ್ನಡ ನಾಡು ನುಡಿಯ ಸೇವೆಗೆ ಭಾಷಾಭೂಷಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಜ್ಞಾನಭಾಸ್ಕರ ಬಿರುದು, ಚಿ.ನ. ಮಂಗಳ ಅತ್ತಿಮಬ್ಬೆ ಪ್ರಶಸ್ತಿ, ಶಂಭಾಜೋಶಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕನ್ನಡ ಕುಲತಿಲಕ ಪ್ರಶಸ್ತಿ, ಪಂಡಿತರತ್ನ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಜೈನ ಜಗತ್ತಿನ ರತ್ನ (ಅಮೇರಿಕಾ) ಪ್ರಶಸ್ತಿ, ಪಂಪ ಪ್ರಶಸ್ತಿ, ಸೇರಿದಂತೆ ನೂರಾರು ಪ್ರಶಸ್ತಿ ಸಮ್ಮಾನಗಳು ಸಂದಿವೆ. ಹಂಪನಾ ಅವರು ಸೇಂಟ್ ಲೂಯಿಸ್ ಮತ್ತು ಲಾಸ್ ಏಂಜಲೀಸ್ ನ (ಅಮೇರಿಕಾ) ಸಾಹಿತ್ಯ ಗೋಷ್ಠಿ, ಶ್ರವಣಬೆಳಗೊಳ ಜೈನ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ ಸಮ್ಮೇಳನ, ಬೌದ್ಧ ಧರ್ಮ ಪ್ರಸರಣ – ರಾಷ್ಟ್ರೀಯ ಸಮಾವೇಶ, ಮುಂತಾದ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದವರು. ಜೊತೆಗೆ ಟೊರೊಂಟೊ (ಕೆನಡ), ಬುಡಾಪೆಸ್ಟ್ (ಹಂಗೇರಿ), ಮಾಂಟ್ರಿಯಲ್ (ಕೆನಡ), ಲಂಡನ್ (ಗ್ರೇಟ್ ಬ್ರಿಟನ್), ದೆಹಲಿ (ಮೂರು ಸಮಾವೇಶಗಳು) ಕೋಲ್ಕತ್ತ, ಮುಂತಾದ ನಗರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಡಾ. ನಾ. ದಾಮೋದರ ಶೆಟ್ಟಿ
ಗಡಿನಾಡು ಕುಂಬಳೆಯ ನಾಯ್ಕಾಪಿನಲ್ಲಿ ಜನಿಸಿದ ನಾ.ದಾ.ರವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕರಾಗಿ 36 ವರ್ಷ ಸೇವೆ ಸಲ್ಲಿಸಿದವರು. ‘ಮುದ್ದಣ್ಣನ ಶಬ್ದಪ್ರತಿಭೆ’ ಇವರ ಸಂಶೋಧನಾ ಪ್ರಬಂಧ. ಕವನ ಸಂಕಲನಗಳು, ಬದುಕು ಬರಹಗಳು, ಕಾದಂಬರಿಗಳು, ವಿಮರ್ಶಾ ಕೃತಿಗಳು, ನಾಟಕಗಳು, ಅನುವಾದಿತ ಗ್ರಂಥಗಳು, ಸಂಪಾದಿತ ಗ್ರಂಥಗಳು, ಹಾಡುಗಳ ಧ್ವನಿಮುದ್ರಿಕೆ…ಇತ್ಯಾದಿ ಇವರ ಲೇಖನಿಯಿಂದ ಬಂದ ಬರಹಗಳು. ಸಾಂಸ್ಕೃತಿಕ ವೇದಿಕೆಗಳ ಉತ್ತಮ ನಿರ್ದೇಶಕ ಮತ್ತು ನಟ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಶಿಪ್’, ‘ಭಾಷಾಭಾರತಿ ಸನ್ಮಾನ್’ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ದುಬಾಯಿಯಲ್ಲಿ ‘ಶ್ರೀರಂಗ ರಂಗ ಪ್ರಶಸ್ತಿ’, ಬೆಂಗಳೂರಿನ ನಾಡಚೇತನ ಪ್ರಶಸ್ತಿ, ರಂಗೋತ್ರಿ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್, ಕಂಡೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ, ಡಿ. ಕೆ.ಚೌಕ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಇವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿದ ಸೇವೆಗೆ ಸಂದ ಗೌರವ.
ಡಾ. ಜೀವನ್‌ರಾಂ ಸುಳ್ಯ
ಕರ್ನಾಟಕದ ಸೃಜನಶೀಲ ರಂಗನಿರ್ದೇಶಕರ ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಜೀವನ್ ರಾಂ ಸುಳ್ಯ. ನೀನಾಸಂ ಪದವೀಧರ ಹಾಗೂ ನೀನಾಸಂ ತಿರುಗಾಟದಲ್ಲಿ 5 ವರ್ಷ ನಟನಾಗಿ, ತಂತ್ರಜ್ಞನಾಗಿ ದುಡಿಮೆ. ಉತ್ತಮ ನಿರ್ದೇಶಕರಾದ ಇವರು ಜನಜಾಗೃತಿಗಾಗಿ ತಾವೇ ರಚಿಸಿ, ನಿರ್ದೇಶಿಸಿ, ಅಭಿನಯಿಸಿದ ಬೀದಿ ನಾಟಕ ಪ್ರದರ್ಶನಗಳ ಸಂಖ್ಯೆ ಮೂರು ಸಾವಿರಕ್ಕಿಂತಲೂ ಅಧಿಕ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, ರಂಗದಶಾವತಾರಿ, ರಂಗಮಾಂತ್ರಿಕ ಬಿರುದು, ಸರಸ್ವತಿ ಪುರಸ್ಕಾರ, ಉಪಾಧ್ಯಾಯ ಸಮ್ಮಾನ್, ಕಲಾ ಸಿಂಧು ಪುರಸ್ಕಾರ, ಅಳ್ವಾಸ್ ಮಕ್ಕಳ ಸಿರಿ ಪ್ರಶಸ್ತಿ, ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅರೆಹೊಳೆ ರಂಗಭೂಮಿ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸತತ 11 ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿ ದೊರೆತಿದೆ. ಸಿಕ್ಕ ಸನ್ಮಾನಗಳು ನೂರಾರು.
ತನ್ನ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಅಪರೂಪದ ರಂಗಕರ್ಮಿ. ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ, ಸುಜನಾ ಯಕ್ಷ ಶಿಕ್ಷಣ ಕೇಂದ್ರ ಇದರ ಸ್ಥಾಪಕರು. ಎರಡು ಸುಸಜ್ಜಿತ ಯಕ್ಷಗಾನ ಮ್ಯೂಸಿಯಂಗಳ ನಿರ್ಮಾತೃ, ವಿಶ್ವತುಳು ಸಮ್ಮೇಳನದ ತುಳುಗ್ರಾಮ ಮತ್ತು ಧರ್ಮಸ್ಥಳದಲ್ಲಿ ನಡೆದ ಬಾಹುಬಲಿ ಪಂಚ ಮಹಾ ವೈಭವ ದೃಶ್ಯ ರೂಪಕದ ನಿರ್ದೇಶಕರಾಗಿ ದುಡಿದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಕಾರ್ಕಳದ ಯಕ್ಷ ರಂಗಾಯಣದ ಪ್ರಥಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 25 ವರ್ಷಗಳಿಂದ ಅಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.
‘ಚಾರುವಸಂತ’ವು 31-10-2023ರಂದು ಮೈಸೂರಿನ ಕಲಾಮಂದಿರ, 02-11-2023ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ, 04-11-2023ರಂದು ಗೌರಿಬಿದನೂರಿನ ಡಾ. ಎಚ್.ಎನ್. ಕಲಾಮಂದಿರ, 06-11-2023ರಂದು ತುಮಕೂರು ಗುಬ್ಬಿ ವೀರಣ್ಣ ಕಲಾ ಮಂದಿರ, 08-11-2023ರಂದು ಚಿತ್ರದುರ್ಗ ತ.ರಾ.ಸು. ರಂಗಮಂದಿರ, 10-11-2023ರಂದು ದಾವಣಗೆರೆಯ ಮಲ್ಲಿಕಾರ್ಜುನ ರಂಗಮಂದಿರ, 12-11-2023ರಂದು ಧಾರವಾಡದ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನ, 15-11-2023ರಂದು ಸುಳ್ಯ ರಂಗ ಮನೆಯಲ್ಲಿ ಪ್ರದರ್ಶನಗೊಳ್ಳಲಿದೆ.