ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಪ್ರಚಾರೋಪನ್ಯಾಸ ಮಾಲಿಕೆಯಡಿ ಕನ್ನಡ ಸಾಹಿತ್ಯ ಚರಿತ್ರೆ ರಚನೆ ಪ್ರಾರಂಭಿಕ ಪ್ರಯತ್ನಗಳು ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 18-10-2023ರ ಬುಧವಾರದಂದು ಮಂಗಳೂರು ವಿವಿ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ವಿದ್ವಾಂಸ ಪ್ರೊ. ಎ.ವಿ. ನಾವಡ ಮಾತನಾಡಿ “ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸಿದ ಆರಂಭದ ದಿನಗಳಲ್ಲಿ ವಿದೇಶಿ ವಿದ್ವಾಂಸರುಗಳಾದ ವೈಗ್ಲೆ, ಕಿಟ್ಟೆಲ್, ಇ.ಪಿ. ರೈಸ್, ಮೋಗ್ಲಿಂಗ್ ಮೊದಲಾದವರ ಕೊಡುಗೆ ಅಪಾರ. ಆರ್. ನರಸಿಂಹಾಚಾರ್, ಕನ್ನಡವಕ್ಕಿ, ಮುಗಳಿ, ಮರಿಯಪ್ಪ ಭಟ್ಟರಂತಹ ದೇಶೀ ವಿದ್ವಾಂಸರು ಸೇರಿಕೊಂಡು ಸಾಹಿತ್ಯ ಚರಿತ್ರೆ ನಿರ್ಮಾಣದ ಪ್ರಕ್ರಿಯೆ ಹುಲುಸಾಗಿ ಬೆಳೆಯಿತು. ವಿದೇಶದಿಂದ ಬಂದು ಇಲ್ಲಿನ ಸಂಸ್ಕೃತ, ಕನ್ನಡ ಭಾಷೆಗಳನ್ನು ಕಲಿತು ಇಲ್ಲಿನ ಲಿಖಿತ ಮತ್ತು ಮೌಖಿಕ ಸಾಹಿತ್ಯ ಸಂಗ್ರಹ ಮತ್ತು ಗ್ರಂಥ ಸಂಪಾದನೆಯನ್ನು ಮಾಡಿದ ವಿದ್ವಾಂಸರ ಶ್ರಮ, ವಿನಯ ಮತ್ತು ವಿದ್ವತ್ತು ಬೆರಗು ಹುಟ್ಟಿಸುವಂತದ್ದು. ಸಾಹಿತ್ಯ ಚರಿತ್ರೆಯಲ್ಲಿ ಮೌಖಿಕ ಸಾಹಿತ್ಯವನ್ನು ಆಕರ ಸಾಮಗ್ರಿಯಾಗಿ ಪರಿಗಣಿಸುವಾಗ ಎಚ್ಚರ ಅಗತ್ಯ. ಪಾಡ್ದನಗಳಂತಹ ಮೌಖಿಕ ಪರಂಪರೆ ನಿತ್ಯ ಹೊಸತಾಗುತ್ತಿರುತ್ತವೆ. ಅವುಗಳಿಗೆ ಕಾಲದ ಸೂತಕ ಸಲ್ಲದು. ಆದ್ದರಿಂದ ಚಾರಿತ್ರಿಕ ಆಕರವಾಗಿ ಅವುಗಳನ್ನು ವಿವೇಚನೆಯಿಂದ ಬಳಸಬೇಕು.” ಎಂದರು.
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎನ್.ಎಂ. ತಳವಾರ ಮಾತನಾಡಿ, ”ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಪರಂಪರೆಯ ಅರಿವು ಬೇಕು. ಈ ಹಿನ್ನೆಲೆಯಿಂದ ಕೇಂದ್ರವು ಶಾಸ್ತ್ರೀಯ ವಿಚಾರಗಳ ಆರಂಭಿಕ ಪ್ರಯತ್ನಗಳನ್ನು ಕುರಿತು ಅಧ್ಯಯನಶೀಲರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.” ಎಂದರು.
ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಸೋಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ, ಮೈಸೂರು ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯ ಚಿತ್ರಾ, ಡಾ. ಗಣೇಶ್ ಅಮೀನ್ ಸಂಕಮಾರ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಮಂಜಪ್ಪ, ಚಂದ್ರಶೇಖರ ಎಂ.ಬಿ. ಭಾಗವಹಿಸಿದ್ದರು. ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ವಿದ್ಯಾರ್ಥಿನಿ ವೀಕ್ಷಿತ ನಿರೂಪಿಸಿ, ಸಂಶೋಧನಾರ್ಥಿ ಆರತಿ ವಂದಿಸಿದರು.