ಕೋಟ : ಸಾಲಿಗ್ರಾಮ ಕಾರ್ಕಡದ ಗೆಳೆಯರ ಬಳಗದ ವತಿಯಿಂದ ದಿನಾಂಕ 14-10-2023ರ ಶನಿವಾರ ನಡೆದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಕಾರಂತ ಸಂಸ್ಮರಣೆ, ಕಾರಂತ ಪುರಸ್ಕಾರ ಸಮಾರಂಭದಲ್ಲಿ ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ವನ್ನು ಸ್ವೀಕರಿಸಿದ ಸಾಹಿತಿ ವೈದೇಹಿಯವರು ಮಾತನಾಡುತ್ತಾ “ಪ್ರಾಮಾಣಿಕವಾಗಿ, ಅನುಭವಕ್ಕೆ ಸರಿಯಾಗಿ ಬರೆಯುವ ಸ್ವಭಾವದರಾಗಿದ್ದ ಕಾರಂತರು ನನ್ನ ಸಾಹಿತ್ಯ ಕ್ಷೇತ್ರಕ್ಕೆ ದೀಕ್ಷೆ, ಬರಹಕ್ಕೆ ಶಕ್ತಿ ನೀಡಿದವರು. ಕಾರಂತರು ಸ್ತ್ರೀಯರ ಜೀವನ, ಸಂವೇದನೆಯನ್ನು ತಮ್ಮ ಕಾದಂಬರಿಗಳ ಮೂಲಕ ಎಲ್ಲರಿಗೂ ತಿಳಿಸುವ ಪ್ರಯತ್ನವನ್ನು ಮಾಡಿರುವ ನೋಬೆಲ್ ಪುರಸ್ಕಾರಕ್ಕೂ ಅರ್ಹರಾಗಿದ್ದರು. ಕಾರಂತರ ಈ ಪುರಸ್ಕಾರ ಸ್ತ್ರೀ ಕುಲಕ್ಕೆ ನೀಡಿರುವ ಪುರಸ್ಕಾರ” ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉದ್ಘಾಟಿಸಿ ಕಾರಂತರ ವ್ಯಕ್ತಿತ್ವವನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೆನಪಿಸುತ್ತಿರುವುದು ಶ್ಲಾಘನೀಯ ಎಂದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಕಾರಂತರ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರಂತರ ಸಂಸ್ಮರಣೆ ಮಾಡಿದರು.
ಕರ್ಣಾಟಕ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ಎ.ಜಿ.ಎಂ ರಾಜಗೋಪಾಲ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ. ಕುಂದರ್, ಕೋಟ ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ರಮಾನಂದ ಭಟ್, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ರಾಜು ಪೂಜಾರಿ ಕಾರ್ಕಡ, ಕಲಾ ಸಾಹಿತಿ ಮಂಗಳೂರಿನ ಎಚ್. ಜನಾರ್ದನ ಹಂದೆ ಇದ್ದರು.
ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ಕೆ.ಶೀನ ವರದಿ ವಾಚಿಸಿದರು. ಮಂಜುನಾಥ ಉಪಾಧ್ಯ ಸನ್ಮಾನಿತರ ಪರಿಚಯಿಸಿ, ಉಪಾಧ್ಯಕ್ಷ ಕೆ.ಶಶಿಧರ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ಕೆ.ಚಂದ್ರಕಾಂತ ನಾಯರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಗಾನ ನಮನ, ಕಾರ್ಕಳ ಶಶಿಕಾಂತ ಶೆಟ್ಟಿ ತಂಡದವರಿಂದ ಬಡಗು ಶೈಲಿಯ ‘ದ್ರೌಪದಿ ಪ್ರತಾಪ’ ಯಕ್ಷಗಾನ ನಡೆಯಿತು.