ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯದ ರಜತ ಸಂಭ್ರಮದಲ್ಲಿ ದಿನಾಂಕ 24-10-2023ರಂದು ವೈವಿದ್ಯಮಯ ಸಂಗೀತ ನೃತ್ಯ ಉತ್ಸವದೊಂದಿಗೆ ‘ವಿಜಯದಶಮಿ ಸಂಗೀತೋತ್ಸವ-2023’ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಪ್ಟನ್ ಶ್ರೀ ಗಣೇಶ್ ಕಾರ್ಣಿಕ್ ಇವರು ಮಾತನಾಡುತ್ತಾ “ನಮ್ಮೊಳಗಿನ ಭಗವಂತನನ್ನು ಹೊರ ಜಗತ್ತಿನ ಭಗವಂತನೊಂದಿಗೆ ಲೀನಗೊಳಿಸಿದಾಗ ನಮ್ಮ ಬದುಕು ಸುಂದರವಾಗುತ್ತದೆ’ ಸಂಗೀತದ ಎಲ್ಲ ಪರಿಕರಗಳು ಒಂದೇ ಶ್ರುತಿಯಲ್ಲಿ ಲೀನವಾದಾಗ ಹೇಗೆ ಅದ್ಭುತ ಸಂಗೀತ ಸೃಷ್ಟಿಯಾಗುತ್ತದೋ, ಹಾಗೆಯೇ ನಮ್ಮೊಳಗಿನ ಭಗವಂತನನ್ನು ಪ್ರಕೃತಿಯಲ್ಲಿನ ಭಗವಂತನ ಶಕ್ತಿಯೊಂದಿಗೆ ಲೀನಗೊಳಿಸಿದಾಗ ಬದುಕು ಸುಮಧುರವಾಗುತ್ತದೆ. ಈ ಲೀನತೆ ತಪ್ಪಿದಾಗ ಸಮಾಜದಲ್ಲಿ ರಾಕ್ಷಸೀ ಪ್ರವೃತ್ತಿ ಪ್ರತಿಬಿಂಬಿತವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ. ನಮ್ಮ ಸನಾತನ ಸಂಸ್ಕೃತಿಯ ಪರಂಪರೆಯನ್ನು ಅರಿತು ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ಕಳೆದ ಇಪ್ಪತ್ತೈದು ವರ್ಷಗಳಿಂದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಇಂತಹ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಉದ್ಯಮಿ ಮಂಜುನಾಥ ಉಪಾಧ್ಯ ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಪಾಡಿಗಾರು ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಬೆಳಿಗ್ಗೆ 8.30ರಿಂದ ಪಿಳ್ಳಾರಿ ಗೀತೆಗಳು, ಗುರು ಉಮಾಶಂಕರಿಯವರಿಂದ ಮಕ್ಕಳಿಗೆ ಹೊಸ ಸಂಗೀತ ಪಾಠದ ವಿದ್ಯಾರಂಭ ನಡೆಯಿತು. ನಂತರ ಮುದ್ರಾಡಿ ಲಕ್ಷ್ಮೀನಾರಾಯಣ ಉಪಾಧ್ಯ ಸಂಸ್ಮರಣಾ ಕಛೇರಿಯನ್ನು ಹಿಂದುಸ್ತಾನಿ ಗಾಯನದ ಮೂಲಕ ಕು.ನೀಹಾರಿಕಾ ದೇರಾಜೆ ಅವರು ನಡೆಸಿಕೊಟ್ಟರು. ಇವರಿಗೆ ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂ ಆದಿತ್ಯ ಭಟ್ ಪಾಣೆಮಂಗಳೂರು ಸಹಕರಿಸಿದರು. ಮುಂದೆ ವೀಣಾ ವಿದುಷಿ ಲಕ್ಷ್ಮೀ ಅಯ್ಯಂಗಾರ್ ಅವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಮಣಿಪಾಲದ ‘ಕೃಷ್ಣ ಗಾನ ಸುಧಾ’ದ ಉಷಾ ಹೆಬ್ಬಾರ್ ಮತ್ತು ಶಿಷ್ಯರಿಂದ ಭಕ್ತಿ ಸಂಗೀತ ನಡೆಯಿತು. ವೇದ ಪಾಠಕರಿಂದ ವೇದಘೋಷ, ಸರಸ್ವತಿ ಪೂಜೆ ನಡೆಯಿತು.
ಅಪರಾಹ್ನ ರೋಶ್ನಿ, ಕಶಿಕ, ಅಚಲ, ಮನಸ್ವಿನಿ, ಕ್ಷಿತಿಜ್, ತೀಕ್ಷಣ್, ಸ್ವಸ್ತಿ ಎಂ.ಭಟ್, ಅನುಶ್ರೀ ಮಳಿ, ಮನ್ವಿ ಇವರಿಂದ ಸಂಗೀತ ಕೃತಿಗಳ ಪ್ರಸ್ತುತಿ ನಡೆಯಿತು. ಇವರಿಗೆ ವಯೊಲಿನ್ ನಲ್ಲಿ ಅನುಶ್ರೀ ಮಳಿ, ಮಹತೀ ಕೆ. ಕಾರ್ಕಳ, ವೈಭವ್ ಪೈ, ಮೃದಂಗದಲ್ಲಿ ಪ್ರಣವ್, ವರ್ಚಸ್, ಶಾಶ್ವತ್ ಕೆ.ಭಟ್ ಸಹಕರಿಸಿದರು. ನಂತರ ಎಲ್ಲಾ ಕಲಾವಿದರಿಂದ ಪಂಚರತ್ನ ಗೋಷ್ಠಿ ಗಾಯನ ನಡೆಯಿತು. ಕು.ಆತ್ರೇಯೀ ಕೃಷ್ಣಾ ‘ಕಲಾವಿಹಾರಿ ಈಶ್ವರಯ್ಯ ಸಂಸ್ಮರಣಾ ಕಛೇರಿ’ಯನ್ನು ನೀಡಿದರು. ವಯೊಲಿನ್ ನಲ್ಲಿ ಪೃಥ್ವಿ ಭಾಸ್ಕರ್, ಮೃದಂಗದಲ್ಲಿ ನಂದನ್ ಕಶ್ಯಪ್, ಮೋರ್ಸಿಂಗ್ ನಲ್ಲಿ ಲಿಖಿತ್ ಮೈಸೂರು ಸಹಕರಿಸಿದರು. ನಂತರ ‘ನಾಟ್ಯವಸಂತ’ ಕುಂದಾಪುರದ ಪ್ರವಿತಾ ಅಶೋಕ್ ಅವರ ಶಿಷ್ಯರಿಂದ ಹಾಗೂ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ದೀಪಕ್ ಕುಮಾರ್ ಹಾಗೂ ಪ್ರೀತಿಕಲಾ ದೀಪಕ್ ಅವರಿಂದ ಭರತನಾಟ್ಯ ಕಾರ್ಯಕ್ರಮದೊಂದಿಗೆ ವಿದುಷಿ ಬದನಾಜೆ ಪಾರ್ವತಿ ಅಮ್ಮ ಸಂಸ್ಮರಣೆಯೊಂದಿಗೆ ಸಂಪನ್ನವಾಯಿತು. ಡಾ.ಉದಯಶಂಕರ್ ಸ್ವಾಗತಿಸಿ, ನಿರ್ದೇಶಕಿ ಉಮಾಶಂಕರಿ ವಂದಿಸಿದರು. ರಾಜೇಶ್ವರಿ ಅನಂತ್ ರಾವ್ ಕಾರ್ಯಕ್ರಮ ನಿರೂಪಿಸಿದರು.