ಬಂಟ್ವಾಳ : ‘ಮಕ್ಕಳ ಕಲಾ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ನಿರ್ವಹಿಸುವ 17ನೇ ವರ್ಷದ ‘ಮಕ್ಕಳ ಸಾಹಿತ್ಯ ಸಮ್ಮೇಳನ’ವು ಕಡೇಶ್ವಾಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 06-12-2023ರಂದು ಜರಗಲಿದೆ. ಮಕ್ಕಳಿಂದಲೇ ವೇದಿಕೆ ನಿರ್ವಹಣೆ, ಅಧ್ಯಕ್ಷ, ಅತಿಥಿ, ಉದ್ಘಾಟಕರು ಎಲ್ಲ ಸ್ಥಾನವನ್ನೂ ಅವರೇ ನಿರ್ವಹಿಸಲಿದ್ದಾರೆ. ಹಿರಿಯರು ಹಿನ್ನೆಲೆಯಲ್ಲಿ ಅಗತ್ಯ ಬಂದಾಗ ಮಾರ್ಗದರ್ಶನ ಮಾಡುವರು. 18 ವಯೋಮಾನದವರೆಗಿನ ಮಕ್ಕಳು ಭಾಗವಹಿಸಬಹುದು. ಯಾವುದೇ ನಿರ್ಬಂಧಗಳಿರುವುದಿಲ್ಲ, ಶಾಲೆಗೆ ಸಂಖ್ಯಾ ಮಿತಿ ಇರುವುದಿಲ್ಲ. ಸ್ಪರ್ಧೆ ಮತ್ತು ಬಹುಮಾನ ಇಲ್ಲ. ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ಸ್ಮರಣಿಕೆ ನೀಡಲಾಗುತ್ತದೆ. ಮಕ್ಕಳಿಗೆ ಸಾಹಿತ್ಯ ಮತ್ತು ಕಲೆಗಳಲ್ಲಿ ತೊಡಗಲು ಪ್ರೇರಣೆ ಕೊಡುವ ಮತ್ತು ಸಂಕೋಚ, ಭಯ, ಕೀಳರಿಮೆ ತೊಲಗಿಸುವ ವಿಶೇಷ ಪ್ರಯತ್ನ.
• ಚಿತ್ತ ಚಿತ್ತಾರ-ಹಾಡು ನೃತ್ಯ ಮತ್ತು ಚಿತ್ರ ಏಕಕಾಲದಲ್ಲಿ 10 ಮಕ್ಕಳು ಸೇರಿ ಪ್ರದರ್ಶನ ಮಾಡಬೇಕು.
• ಕಿರು ನಾಟಕ- 10 ನಿಮಿಷ- ಸರಳ ವೇಷ ಭೂಷಣ – ಸಂಖ್ಯಾ ಮಿತಿಯಿಲ್ಲ.
• ಮಾತುಕತೆ- ಆಶು ಭಾಷಣ- ಭಾಗವಹಿಸಿದವರಲ್ಲಿ ಕೆಲವು ಉತ್ತಮಗಳನ್ನು ಸಾಹಿತ್ಯ ಗೋಷ್ಠಿಯ ಜೊತೆಗೆ ಸಂಯೋಜಿಸಿ ಭಾಷಣ ಕೊಡಿಸಲಾಗುವುದು.
• ಸ್ವ ಸಾಹಿತ್ಯ ರಚನೆ – ಸ್ಥಳದಲ್ಲಿಯೇ 10 ವಿಷಯ ನೀಡಲಾಗುತ್ತದೆ. ಮಕ್ಕಳು ತಮ್ಮ ಆಸಕ್ತ ಕ್ಷೇತ್ರದಲ್ಲಿ ಸಾಹಿತ್ಯ ಸ್ವರಚನೆ ಮಾಡಬಹುದು. ಭಾಗವಹಿಸಿದವರಲ್ಲಿ 15ರ ತನಕದ ಪ್ರತಿಭೆಗಳನ್ನು ಆಯ್ದು ಗೋಷ್ಠಿಯ ವೇದಿಕೆಗೆ ತರಲಾಗುವುದು.
ಸಾಹಿತ್ಯ ಗೋಷ್ಠಿಯು ಭಾಗವಹಿಸಿದ ಎಲ್ಲ ಮಕ್ಕಳಿಗೆ ಅವರ ಯೋಚನೆಯ ಒರೆಯನ್ನು ವಿಸ್ತರಿಸಲು ಒಂದು ಸದವಕಾಶ ನೀಡುವ ಉದ್ದೇಶ. ಅವರು ಇನ್ನೂ ಉತ್ತಮ ಹಂತಕ್ಕೆ ಯೋಚನೆ ಮಾಡಲು ಪ್ರೇರಣೆ. ನಾವು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಒಂದು ದಿನದ ಸ್ವ ಸಾಹಿತ್ಯ ಪ್ರೇರಣಾ ಕಮ್ಮಟಗಳನ್ನು ಮಾಡುತ್ತಿದ್ದೇವೆ. (ಗರಿಷ್ಠ ಸಂಖ್ಯೆ 20ರಿಂದ 25) ಕಮ್ಮಟದ ಮುಕ್ತಾಯದಲ್ಲಿ ಒಂದು ಸಾಹಿತ್ಯ ಸ್ವರಚನೆಯ ಹಸ್ತ ಪತ್ರಿಕೆ ಬಿಡುಗಡೆಯಾಗುತ್ತದೆ.
ಸಂದರ್ಶನ, ಪರಾತ್ಮಕತೆ, ವ್ಯಕ್ತಿ ಪರಿಚಯ, ಕಥೆ, ಕಥನ ಕವನ, ಚುಟುಕು, ಲೇಖನ ಹೀಗೆ ನಮ್ಮ ವಿಷಯ ವ್ಯಾಪ್ತಿಯಿರುತ್ತದೆ. ಕನಿಷ್ಠ 4ನ್ನು ಒಂದು ದಿನದಲ್ಲಿ ನೀಡುವ ಆಶಯವಿರುತ್ತದೆ. ನಮ್ಮದು ಸಮಯಾಧಾರಿತ ಕಾರ್ಯಕ್ರಮಗಳು. ಆರಂಭ ಮುಕ್ತಾಯ ಎಲ್ಲವೂ ಕ್ಲಪ್ತವೇ ಇರುತ್ತದೆ. ಸಮಯದ ಸದ್ಬಳಕೆಯೇ ಪ್ರಮುಖ ಗುರಿ. ಕೊರೊನಾ ಕಾಲದಲ್ಲಿ ಆನ್ ಲೈನ್ ಕಮ್ಮಟ ಪ್ರತೀ ರವಿವಾರ 5.00ರಿಂದ 6.00 (ಒಂದು ಘಂಟೆ) ಸಂಘಟಿಸಿದ್ದೇವೆ. ವರ್ಷವೂ ಜುಲಾಯಿಯಿಂದ ದಶಂಬರ್ ತನಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಮತ್ತೆ ಮಕ್ಕಳ ಪರೀಕ್ಷಾ ದೃಷ್ಟಿಯಿಂದ ಕಮ್ಮಟ ಇರುವುದಿಲ್ಲ. ದಶಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ ಮಾಡುತ್ತಾ ಇದ್ದೇವೆ. ಸಾರ್ವಜನಿಕರಿಗೆ ಬಂದು ಸಾಕ್ಷೀಕರಿಸಲು ಅವಕಾಶವಿದೆ. ಬೆಳಗ್ಗೆ ಮರವಣಿಗೆ, ಧ್ವಜಾರೋಹಣದಿಂದ ತೊಡಗಿ ಸಂಜೆ 4.00ರ ತನಕ ಕಾರ್ಯಕ್ರಮಗಳು.
ಬಂದವರಿಗೆ ಹೊಟ್ಟೆಯ ಹಸಿವೆ ನೀಗಿಸುವ ವ್ಯವಸ್ಥೆ ಮತ್ತು ಭಾವನಾತ್ಮಕವಾಗಿ ಮಕ್ಕಳೊಡನೆ ಜೋಡಣೆಯಾಗುವ ಅವಕಾಶಗಳಿವೆ.
ಮಕ್ಕಳ ಸ್ವರಚಿತ ಮುದ್ರಿತ ಕೃತಿಗಳ ಬಿಡುಗಡೆಯಿರುತ್ತದೆ. ತಾಲೂಕಿನ ಸ್ವರಚಿತ ಸಾಹಿತ್ಯ ಕೃತಿಯೊಂದಕ್ಕೆ ಮಕ್ಕಳ ಕಲಾಲೋಕ ಸಣ್ಣ ಮೊಬಲಗಿನ ನೆರವು ನೀಡುತ್ತದೆ. ಈ ನೆರವಿನಲ್ಲಿ ತಮ್ಮಂತಹವರು ಕೈ ಜೋಡಿಸುತ್ತಾರೆ. ಸರಕಾರದ ಸಹಾಯವಿರುವುದಿಲ್ಲ. ಸಾರ್ವಜನಿಕರ ಸಹಕಾರ ಇರುತ್ತದೆ. ಮಕ್ಕಳ ಕಲಾ ಲೋಕದ ಸಮ್ಮೇಳನವನ್ನು ಊರವರೇ ನಡೆಸಿಕೊಡುತ್ತಾ ಬರುವಷ್ಟರ ತನಕ ನಾವು ಪಾರದರ್ಶಕರಾಗಿರುವುದು ನಮ್ಮ ಹೆಗ್ಗಳಿಕೆ.