ಮೂಡುಬಿದಿರೆ : ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಆಯೋಜಿಸಿದ್ದ ಸುಮ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದ ಲೇಖಕಿ ಸುರೇಖಾ ಭೀಮಗುಳಿಯವರ ಕೃತಿ “ತಲ್ಲಣ” ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 08-10-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಮಾಡಿದ ನಿವೃತ್ತ ಕನ್ನಡ ಉಪನ್ಯಾಸಕ, ಪುಸ್ತಕ ವಿಮರ್ಶಕ ಎಸ್.ಪಿ. ಅಜಿತ್ ಪ್ರಸಾದ್ ಇವರು ಮಾತಾನಾಡುತ್ತಾ “ಯಾವುದೇ ಕತೆ, ಕಾವ್ಯದಲ್ಲಿನ ವ್ಯಕ್ತಿಯನ್ನು ಬೇರೆ ಸಾಹಿತ್ಯಕ್ಕೆ ಪರಿಚಯಿಸುವಾಗ ಅಥವಾ ವಿಮರ್ಶಿಸುವಾಗ ಅಲ್ಲೊಂದು ಹೀಗೆಯೇ,ಇಷ್ಟು ಮಾತ್ರ ಎನ್ನುವ ಹಾಗೆ ನಿರ್ಧಿಷ್ಟ ಚೌಕಟ್ಚು ನಿರ್ಮಿಸಿಕೊಳ್ಳಬಾರದು. ಆತ ಅಥವಾ ಆಕೆ ಅಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲರ ದೃಷ್ಠಿಕೋನವೂ ಒಂದೇ ಆಗಿರುವುದಿಲ್ಲವಾಗಿರುವಾಗ ವಿವಿಧ ಆಯಾಮಗಳಲ್ಲಿ ಕಾಣಬೇಕು. ಪೌರಾಣಿಕ ಕಥಾನಕಗಳಿಗೆ ಹೊಸ ಸಾಹಿತ್ಯಿಕ ಲೇಪನ ಕೊಟ್ಟು ಕತೆಯಲ್ಲಿನ ಪಾತ್ರಧಾರಿಗಳನ್ನು ತನ್ನ ಬರಹದಲ್ಲಿ ಮಾತನಾಡಿಸುವ ಬರವಣಿಗೆಯಲ್ಲಿ ನಿಷ್ಣಾತರಾಗಿರುವ ಸುರೇಖಾ ಭೀಮಗುಳಿಯವರ ಬರವಣಿಗೆ ಶೈಲಿ ಚೆನ್ನಾಗಿದೆ. ಮಹಾಭಾರತದ ಕತೆಯಲ್ಲಿನ ಏಳು ಪಾತ್ರಗಳ ಬಗ್ಗೆ, ಅಲ್ಲಿ ಬರುವ ಪಾತ್ರಧಾರಿಗಳ ಸಂಕಟಗಳು, ಅಸಾಹಯಕತೆಗಳನ್ನು ಉಲ್ಲೇಖಿಸಿ ಬರೆದಿರುವ ಕೃತಿಯ ಏಳು ಕತೆಗಳು ಒಂದು ಬಗೆಯ ಧಾರಾವಾಹಿ ಕಂತಿನ ರೂಪದಲ್ಲಿ ಇದೆ. ಕಚ, ದೇವಸಾನಿಯ ಕತೆ ತುಂಬಾ ಸಂಕೀರ್ಣವಾದುದು. ಆ ಕತೆಯ ಪಾತ್ರವನ್ನು ಲೇಖಕಿಯವರು ಇಲ್ಲಿ ಬಳಸಿಕೊಂಡಿರುವುದು ಶ್ಲಾಘನೀಯ ಕೆಲಸ. ಲೇಖಕಿ ಸುರೇಖಾ ಭೀಮಗುಳಿಯವರ ಬರವಣಿಗೆ ತುಂಬಾ ಮೆಚ್ಚುಗೆಯಾಗಿದೆ” ಎಂದು ಹರ್ಷ ವ್ಯಕ್ತ ಪಡಿಸಿದರು.
ಕೃತಿ ಪರಿಚಯ ಮಾಡಿದ ಮೂಡುಬಿದಿರೆ ಧವಳಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಮಲ್ಲಿಕಾ ರಾವ್ ಮಾತನ್ನಾಡಿ, “ಮಹಾಕಾವ್ಯವಾದ ಮಹಾಭಾರತದಲ್ಲಿನ ಅನೇಕ ಸಣ್ಣ ಪುಟ್ಟ ಪಾತ್ರಗಳು ಇನ್ನೂ ಕೂಡ ಅಪರಿಚಿತವಾಗಿಯೇ ಇರುವಾಗ ಅಂಥದ್ದನ್ನು ಆಯ್ದು ಆ ಪಾತ್ರಧಾರಿಗಳ ಸಂಕಟ ಹಾಗೂ ತಲ್ಲಣಗಳನ್ನು ಓದುಗರ ಮನಗೆಲ್ಲುವ ರೀತಿಯಲ್ಲಿ ಬರೆದ ಈ ಕೃತಿ ತುಂಬಾ ಅದ್ಭುತವಾಗಿ ಹೊರಬಂದಿದೆ. ಓದುಗರನ್ನು ಬಹಳ ಕುತೂಹಲಕರವಾದ ರೀತಿಯಲ್ಲಿ ಓದಿಸಬಲ್ಲ ಕೃತಿಯಾಗಿದೆ” ಎಂದು ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿ ಲೇಖಕಿ ಸುರೇಖಾ ಭೀಮಗುಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನ್ನಾಡಿದ ಲೇಖಕಿಯವರು, ತಾನು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅರ್ಥಧಾರಿಯಾಗಿ ಪಾತ್ರ ವಹಿಸಿದ್ದು, ಬಾಲ್ಯದಿಂದಲೇ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯವನ್ನು ಓದುವ ಅಭ್ಯಾಸ ಮಾಡಿಕೊಂಡದ್ದರಿಂದ ಬರವಣಿಗೆಯನ್ನು ಆರಂಭಿಸುವುದಕ್ಕೆ ಸಹಕಾರಿಯಾಯಿತು. ಬರಹಗಳಿಗೆ ಪತ್ರಿಕೆಗಳು ಬೆಂಬಲ ಕೊಡುತ್ತ ಬಂದಿರುವ, ಹಿಂದಿನ ಎರಡು ಪ್ರಕಟಣೆಗಳು ಹೊರ ಬಂದಿರುವ ಮತ್ತು ಈ ಕೃತಿಯ ಪ್ರಕಟಣೆವರೆಗಿನ ಎಲ್ಲ ಸಂಗತಿಗಳನ್ನೂ ವಿವರಿಸಿ ಅಭಿವಂದಿಸಿದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್ ಅವರು ಸ್ವಾಗತಿಸಿ, ಚೈತ್ರ ಕಬ್ಬಿನಾಲೆ ನಿರೂಪಿಸಿದರು.