ಮಂಗಳೂರು : ಉರ್ವ ಹೊಯಿಗೆಬೈಲಿನಲ್ಲಿರುವ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಸುಮಾರು 2013ರಲ್ಲಿ ಹರಕೆಗಾಗಿ ಬಂದ ಚೆಂಡೆ ಮತ್ತು ಮದ್ದಳೆಗಳನ್ನು ತಾಳಮದ್ದಳೆಯಲ್ಲಿ ಉಪಯೋಗಿಸಿಕೊಳ್ಳಲಾಯಿತು. ವಾರದಲ್ಲಿ ಒಂದು ದಿನದಂತೆ ಪ್ರತೀ ವಾರ ತಾಳಮದ್ದಳೆಯ ಸೇವೆ ದೇವರಿಗೆ ನಡೆಯುತಿತ್ತು. ಸುಮಾರು 2016ರಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭವಾಗಿ ಪರಿಸರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಶ್ರೀಕೃಷ್ಣ ಲೀಲೆ, ಕಂಸ ವಧೆ, ಮಹಿಷ ಮರ್ಧಿನಿ, ಸುದರ್ಶನ ವಿಜಯ, ಏಕಾದಶಿ ದೇವಿ ಮಹಾತ್ಮೆ ಇವುಗಳ ಯಶಸ್ವೀ ಪ್ರದರ್ಶನ ಹಾಗೂ ಮತ್ತೊಂದು ಬಾರಿ ಹರಕೆ ರೂಪದಲ್ಲಿ ‘ಸುದರ್ಶನ ವಿಜಯ’ ರಂಗಸ್ಥಳದಲ್ಲಿ ಪ್ರದರ್ಶಿಸಿ ಜನಮೆಚ್ಚುಗೆ ಪಡೆಯಿತು. ಇವು ಈವರೆಗೂ ನಡೆದ ಪ್ರದರ್ಶನಗಳು. ಈ ರೀತಿ ಅಭಿವೃದ್ಧಿ ಹೊಂದಿ ಈಗ ಸ್ವಂತ ರಂಗಸ್ಥಳದ ವ್ಯವಸ್ಥೆಯೊಂದಿಗೆ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ಹೆಸರಿನಲ್ಲಿ ನೂತನ ಹವ್ಯಾಸಿ ಯಕ್ಷಗಾನ ಮೇಳ ದಿನಾಂಕ 22-10-2023ರಂದು ಆರಂಭಗೊಂಡಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಶೋಕನಗರ-ಉರ್ವ ಬಂಟರ ಸಂಘದ ಅಧ್ಯಕ್ಷ ರವಿಚಂದ್ರ ಶೆಟ್ಟಿ ಅಶೋಕನಗರ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಎಚ್.ಆರ್. ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಮಾತನಾಡಿದರು.
ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಆಡಳಿತ ಮೊಕ್ತಸರ ಆನಂದ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್ ಗಣೇಶ್ ಕುಲಾಲ್, ಬರ್ಕೆ ಫ್ರೆಂಡ್ಸ್ ಇದರ ಸ್ಥಾಪಕ ಅಧ್ಯಕ್ಷ ಯಜ್ಞೇಶ್ವರ ಬರ್ಕೆ, ಮಾಜಿ ಅಧ್ಯಕ್ಷ ಸುಚೀಂದ್ರ ಅಮೀನ್, ಉರ್ವ ಕುಲಾಲರ ಸಂಘದ ಅಧ್ಯಕ್ಷ ಆನಂದ ಉರ್ವ, ಉದ್ಯಮಿಗಳಾದ ಉದಯ್ ಕುಮಾರ್ ಶೆಟ್ಟಿ, ಸುಧಾಕರ್ ಆಳ್ವ ಇಂಜಿನಿಯರ್ ಬಾಬಾ ಅಲಂಕಾರ್, ಕಂಟ್ರ್ಯಾಕ್ಟರ್ ಶೇಖರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಮನಮೋಹನ್ ದೇವಾಡಿಗ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಚಾಮುಂಡೇಶ್ವರಿ ಕ್ಷೇತ್ರದ ದೀಪಕ್ ಕುಲಾಲ್, ರವಿ, ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅಕ್ಷತಾ ಜೆ. ಬೈಕಾಡಿ ನಿರೂಪಿಸಿ, ಜ್ಯೋತಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮೇಳದ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.