ಮುಂಬೈ : ಮುಂಬೈ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾ ರಾಮಕೃಷ್ಣ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.
ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ಉಪಕ್ರಮ ಆರಂಭವಾಗಿದ್ದು ಪ್ರಸ್ತುತ ಸಾಲಿನ ಈ ಪುರಸ್ಕಾರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ವಿದ್ಯಾ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ತಾಂತ್ರಿಕ ಪದವಿ ಪಡೆದು ಸುಮಾರು ಎರಡು ದಶಕಗಳ ಕಾಲ ಐ.ಟಿ ಕ್ಷೇತ್ರದಲ್ಲಿ ವಿವಿಧೆಡೆ ಕಾರ್ಯ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಾಹಿತ್ಯಾಸಕ್ತಿಯಿಂದ ಇದೀಗ ಕನ್ನಡ ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿಕೊಂಡ ಇವರು, ‘ಶಿವರಾಮ ಕಾರಂತರ ಪ್ರಬಂಧಗಳು – ಒಂದು ಅಧ್ಯಯನ’ ಎಂಬ ಸಂಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿ, ‘ಕುವೆಂಪು ಮತ್ತು ಕಾರಂತರ ಆತ್ಮಕಥೆಗಳು – ಒಂದು ಅಧ್ಯಯನ’ ಎಂಬ ಮತ್ತೊಂದು ಸಂಪ್ರಬಂಧದ ರಚನೆಯಲ್ಲಿ ನಿರತರಾಗಿದ್ದಾರೆ.
ಈ ಪುರಸ್ಕಾರವನ್ನು ದಿನಾಂಕ 01-12-2023ರಂದು ಮುಂಬೈ ವಿಶ್ವ ವಿದ್ಯಾಲಯದಲ್ಲಿ ಪ್ರದಾನ ಮಾಡಲಾಗುವುದೆಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಹಾಗೂ “ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ”ದ ಸಂಚಾಲಕ ಅರವಿಂದ ಬಲ್ಲಾಳ ಅವರು ತಿಳಿಸಿದ್ದಾರೆ.