ಮಂಗಳೂರು : ವರ್ಣ ಕಲಾವಿದ ಪಣಂಬೂರು ರಾಘವರಾಯರ ಜನ್ಮ ಶತಮಾನೋತ್ಸವ 2022 – 23ರ ಅಗರಿ ಸಂಸ್ಮರಣೆ ಹಾಗೂ ಸಮಾರೋಪ ಕಾರ್ಯಕ್ರಮವು ದಿನಾಂಕ 09-10-2023ರಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ, ವಿದ್ವಾಂಸ ಸೇರಾಜೆ ಸೀತಾರಾಮ ಭಟ್ “ ಅಗರಿ ಶ್ರೀನಿವಾಸ ಭಾಗವತರು ಬರೆದಿದ್ದ ಯಕ್ಷಗಾನ ಪ್ರಸಂಗಳು ಎಂದೂ ಸೋತಿಲ್ಲ. ಅಗರಿ ಅವರು ಬರೆದ ಪ್ರಸಂಗಗಳು ಕಾಲಾತೀತ. ಅವರು ಅದ್ಭುತ ಮೇಧಾಶಕ್ತಿ ಹೊಂದಿದ್ದು ಉತ್ತಮ ರಂಗ ನಿರ್ದೇಶಕ, ಪಾತ್ರಗಳ ಒಕ್ಕೂಟ ಉತ್ತಮವಾಗಿ ರೂಪಿಸಿಕೊಂಡಿರುವುದು ಇತಿಹಾಸವಾಗಿದೆ” ಎಂದು ಸ್ಮರಿಸಿದರು.
ಕಟೀಲು ಮೇಳಗಳ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಕಲ್ಲಾಡಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ರಾಘವ ರಾಯರ ಜನ್ಮ ಶತಮಾನೋತ್ಸವ ಸಮಿತಿ ಸಂಚಾಲಕ, ಅವರ ಪುತ್ರ ಪಿ. ಮಧುಕರ್ ಭಾಗವತ್ ಪ್ರಾಸ್ತಾವಿಕ ಮಾತನ್ನಾಡಿದರು. ಜಿ.ಕೆ. ಭಟ್ ಸೇರಾಜೆಯವರು ರಾಘವ ರಾಯರನ್ನು ಸಂಸ್ಮರಿಸಿ ಮುಖವರ್ಣಿಕೆ, ಕಿರೀಟ ಇತ್ಯಾದಿಗಳ ಮೂಲಕ ಯಕ್ಷಗಾನ ಮಾತೆಯ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಗೈದಿದ್ದಾರೆ ಎಂದರು.
ಈ ಸಂದರ್ಭ ಜಿ.ಕೆ. ಭಟ್ ಸೇರಾಜೆ ದಂಪತಿ, ಸೀತಾರಾಮ ಭಟ್ ಸೇರಾಜೆ ದಂಪತಿಗೆ ಅಗರಿ ಅಭಿನಂದನೆ, ಕಟೀಲು ಮೇಳಗಳ ವ್ಯವಸ್ಥಾಪಕ ಸುಣ್ಣಂಬಳ ವಿಶ್ವೇಶ್ವರ ಭಟ್ ದಂಪತಿ, ರಮೇಶ್ ಭಟ್ ಪುತ್ತೂರು ದಂಪತಿಗೆ ಕಲಾ ಸನ್ಮಾನ, ಸನಾತನ ಧರ್ಮದ ಸೇವೆಗಾಗಿ ಶಂಕರ್ ಭಟ್ ಕುಳವರ್ಮ ಅವರಿಗೆ ಸನ್ಮಾನ ನಡೆಯಿತು.
ಸಮಿತಿ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್, ಸಮಿತಿ ಸದಸ್ಯರಾದ ಶೈಲಜಾ ಮೈರ್ಪಾಡಿ, ವಿದ್ಯಾವತಿ ಕಾರಂತ್, ವಾಣಿ ಎಸ್. ಐತಾಳ್, ಪೂರ್ಣಿಮಾ ಐತಾಳ್, ಭಾವನಾ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾಯದರ್ಶಿ ರಂಜನ್ ಹೊಳ್ಳ ನಿರೂಪಿಸಿದರು.