ನಾಟಕ : Hang-On ಹ್ಯಾಂಗ್ ಆನ್
ವಿನ್ಯಾಸ, ನಿರ್ದೇಶನ : ಕ್ಲ್ಯಾನ್ವಿನ್ ಫೆರ್ನಾಂಡೀಸ್
ಸಂಗೀತ : ಬಿಂದು, ಜೋಯೆಲ್, ಸುಪ್ರೀತ್, ಕೆವಿನ್ ಮತ್ತು ಮೇಘನ
ತಾಂತ್ರಿಕ ಸಹಾಯ : ಅಸ್ತಿತ್ವ (ರಿ.) ಮಂಗಳೂರು
ಬೆಳಕು ವಿನ್ಯಾಸ ಹಾಗೂ ನಿರ್ವಹಣೆ : ಕ್ರಿಸ್ಟಿ
ಪ್ರಸ್ತುತಿ : ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
Passion & Profession ಪ್ರತಿಯೋಬ್ಬನ ಜೀವನದಲ್ಲಿ ಎದುರಾಗುವ ತುಮಲವಿದು. ತಾನು ಗಾಢವಾಗಿ ಪ್ರೀತಿಸುವ ಹವ್ಯಾಸ ಒಂದೆಡೆ – ಬೇರೆ ಬೇರೆ ಕಾರಣಗಳಿಂದ ಇನ್ನೊಂದು ಕೆಲಸವನ್ನು ವೃತ್ತಿಯಾಗಿ ಸ್ವೀಕರಿಸಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಈ ಸಂಘರ್ಷ ಎಷ್ಟೋ ಸಾರಿ ಮಾನಸಿಕ ಅಸಮತೋಲನಕ್ಕೆ ಕಾರಣವಾಗಿ ಖಿನ್ನತೆ ಉಂಟುಮಾಡುತ್ತೆ. ಖಿನ್ನತೆ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೂ ದಾರಿ ಮಾಡಿಕೊಡುತ್ತೆ. ಯುವಕನೊಬ್ಬನ ಮನಸ್ಸಿನ ತುಮಲವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತೆರೆದಿಟ್ಟ ನಾಟಕ ‘ಹ್ಯಾಂಗ್ ಆನ್’.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರನ್ನೂ ಮೀರಿಸಿ ಅಭಿಯಯಿಸಿದ, ಕನ್ನಡ – ತುಳು – ಕೊಂಕಣಿ – ಇಂಗ್ಲೀಷ್ ಭಾಷೆಗಳನ್ನು ಒಳಗೊಂಡ ಬಹು ಭಾಷಾ ನಾಟಕವಿದು. ಕ್ಲ್ಯಾನ್ವಿನ್ ಫೆರ್ನಾಂಡೀಸ್ ನಾಟಕದ ವಿನ್ಯಾಸ, ನಿರ್ದೇಶನ ಮಾಡಿದ್ದಾರೆ.
ಆತ್ಮಹತ್ಯೆಯಂತಹ ಗಂಭೀರ ವಿಚಾರವನ್ನು ನವಿರು ಹಾಸ್ಯದೊಂದಿಗೆ ಮನಸ್ಸಿಗೆ ಗಾಢವಾಗಿ ತಟ್ಟುವಂತೆ ಮಾಡುವಲ್ಲಿ ನಿರ್ದೇಶಕರು ಜಾಣ್ಮೆಯನ್ನು ತೋರಿಸಿದ್ದಾರೆ. ಹನ್ನೊಂದು ಕಲಾವಿದರು ತಾವು ವಿದ್ಯಾರ್ಥಿಗಳು ಅನ್ನುವುದನ್ನೂ ಮರೆತು ಭಾವಪೂರ್ಣವಾಗಿ ಅಭಿನಯಿಸುವಂತೆ ಮಾಡಿದ್ದು ನಿರ್ದೇಶಕರ ನಿರ್ದೇಶನದ ಶಕ್ತಿ.
ಶಾಲೆಯಲ್ಲಿ ಎದುರಾಗುವ ಅನಮಾನ, ಪ್ರೀತಿಸಿದ ಹುಡುಗಿಯ ನಿರಾಕರಣೆ, ಇಷ್ಟದ ಕೆಲಸ ಮಾಡಲು ಸಾಧ್ಯವಾಗದಿರುವುದು. ಇವೆಲ್ಲವೂ ನೀಡುವ ಹತಾಶೆಯಿಂದ ಜೀವನವನ್ನು ಅಂತ್ಯಗೊಳಿಸುವ ತಪ್ಪು ನಿರ್ಧಾರಕ್ಕೆ ಯುವಕನೊಬ್ಬ ಮುಂದಾಗುವುದು ‘ಹ್ಯಾಂಗ್ ಆನ್’ ನಾಟಕದ ಮೂಲ ಕಥಾವಸ್ತು. ಈ ಎಲ್ಲಾ ಸಂದರ್ಭಗಳನ್ನು ಆತ ಹೇಗೆ ಗೆದ್ದು ಬರುತ್ತಾನೆ ಅನ್ನುವುದನ್ನು ನಾಟಕ ನೋಡಿಯೇ ಅನುಭವಿಸಬೇಕು. ನಾಟಕದ ಒಂದು ದೃಶ್ಯದಲ್ಲಿ ಕಲಾವಿದ, ಹಾಡುಗಾರ, ಕ್ರೀಡಾಪಟು, ನಟ, ಡ್ಯಾನ್ಸರ್ ಇವರೆಲ್ಲರೂ ತಮ್ಮ ಮನಸ್ಸಿನ ಬೇಗುದಿಯನ್ನು ಜನರಲ್ಲಿ ತಿಳಿಸಿ ಪ್ರೇಕ್ಷಕರ ಹತ್ತಿರಕ್ಕೆ ಬಂದು ಭಿನ್ನವಿಸಿಕೊಳ್ಳುವ ವಿನಂತಿಸುವ ನಾಟಕದ ದೃಶ್ಯ ಎಂತಹ ಕಲ್ಲೆದೆಯೂ ಕರಗುವಂತಿತ್ತು. ಇಂದಿನ ಶಿಕ್ಷಣ ಪದ್ದತಿಯ ಅಸಮತೋಲನವನ್ನು ಸಾರುವಂತಿತ್ತು.
ಹಗ್ಗದ ಕುಣಿಕೆಯೇ ಚಿತ್ರ ಕಲಾವಿದನ ಬ್ರಶ್ ಆಗುವುದು, ಪ್ರೀತಿಸಿದ ಹುಡುಗಿ ನೀಡಿದ ಲಾಲಿಪಾಪ್ ನ ಕಡ್ಡಿ ಸಿಗರೇಟ್, ಡ್ರಗ್ ಚುಚ್ಚುವ ಸಿರಿಂಜ್ ಆಗುವುದು, ಸೂಟ್ ಕೇಸ್ ಹ್ಯಾಂಡಲ್ ಪರೀಕ್ಷೆಯ ಮಾರ್ಕಿನ ಪರ್ಸಂಟೇಜ್ ಸೂಚಿಸುವುದು ಹೀಗೆ ಪ್ರಾಪರ್ಟಿಗಳ ಸೃಜನಾತ್ಮಕ ಬಳಕೆ ನಾಟಕದ ಭಾವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತು. ಬೆಳಕು ವಿನ್ಯಾಸ ಹಾಗೂ ನಿರ್ವಹಣೆ ಮಾಡಿದ್ದ ಪ್ರಸಿದ್ದ ರಂಗ ನಿರ್ದೇಶಕ ಕ್ರಿಸ್ಟಿಯವರು ಹ್ಯಾಂಗ್ ಆನ್ ನಾಟಕದಲ್ಲಿ ಬೆಳಕಿನ ಮ್ಯಾಜಿಕ್ ಮಾಡಿದ್ದಾರೆ. ಚಿತ್ರ ಕಲಾವಿದನೊಬ್ಬ ಬಣ್ಣ ಮತ್ತು ಬ್ರಷ್ ಬಳಸಿ ರಚಿಸುವ ಅದ್ಭುತ ಕಲಾಕೃತಿಯಂತೆ ವಿವಿಧ ರಂಗಿನ ಬೆಳಕನ್ನು ಸಂಯೋಜಿಸಿ ಕ್ರಿಸ್ಟಿ ಬೆಳಕಿನ ಮಾಯಲೋಕವನ್ನೇ ಸ್ರಷ್ಟಿಸಿದ್ದಾರೆ. ನವರಸವನ್ನು ಬೆಳಕಿನಲ್ಲೂ ತೋರಿಸಲು ಸಾಧ್ಯ ಅನ್ನುವುದನ್ನು ಕ್ರಿಸ್ಟಿ ಸಾಬೀತುಪಡಿಸಿದ್ದಾರೆ. ಹ್ಯಾಂಗ್ ಆನ್ ನಾಟಕದಲ್ಲಿ ಸಂಗೀತ ಪ್ರಬಲ ಕೊಡುಗೆ ನೀಡಿದೆ. ಕೇವಲ ಗಿಟಾರ್, ಕ್ಲಾಪ್ ಬಾಕ್ಸ್ ಹಾಗೂ ಸಂಗೀತದ ಆಲಾಪ ಉಂಟು ಮಾಡಿದ ಪ್ರಭಾವ ನಾಟಕದ ಏರಿಳಿತಕ್ಕೆ ಪೂರಕವಾಗಿತ್ತು.
ಶಿಕ್ಷಣ ಸಂಸ್ಥೆ ಕಾಲೇಜು ಶಿಕ್ಷಣದ ಜೊತೆ ಜೊತೆಗೆ ರಂಗಭೂಮಿಗೂ ಪ್ರಾಮುಖ್ಯತೆ ನೀಡಿದ್ದು ಅತ್ಯುತ್ತಮ ವಿಚಾರ. ಇದು ಸ್ವತಹ ಕಲಾವಿದನಾದ ನನಗೆ ಅತ್ಯಂತ ಕುಶಿ ಕೊಟ್ಟದ್ದು. ಇದನ್ನು ಸಾಧ್ಯವಾಗಿಸಿದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ, ಕಲೆ ಹಾಗೂ ಕಲಾವಿದರಿಗೆ ಸದಾ ಬೆಂಬಲ ನೀಡುವ ಪ್ರಾಂಶುಪಾಲರಾದ ರೆವೆರೆಂಡ್ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರಿಗೆ ಗೌರವದ ವಂದನೆ.
ಜೀವನದ ಸಾರವನ್ನು ತಿಳಿಹೇಳುವಲ್ಲಿ ನಾಟಕ ಒಂದು ಪ್ರಬಲ ಮಾಧ್ಯಮ. ಆತ್ಮಹತ್ಯೆಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ‘ಹ್ಯಾಂಗ್ ಆನ್’ ನಾಟಕ ಅತ್ಯಂತ ಪರಿಣಾಮಕಾರಿ. ಯುವ ಸಮುದಾಯ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ನೋಡಲೇಬೇಕಾದ ನಾಟಕ.
ಹ್ಯಾಂಗ್ ಆನ್ ನಾಟಕದ ಒಳಹೊಕ್ಕು ರಂಗಭೂಮಿಯ ಧನ್ಯತೆಯನ್ನು ನಾನು ಅನುಭವಿಸಿದ್ದೇನೆ. ಈ ನಾಟಕ ನೀಡಬೇಕಾದ ಆಶಯವನ್ನು – ತಿಳಿಸಬೇಕಾದ ವಿಚಾರವನ್ನು ಮನಮುಟ್ಟುವಂತೆ ಹೇಳಿದೆ. ಜೀವನದಲ್ಲಿ ಏನೇ ಸಮಸ್ಯೆಗಳು ಎದುರಾದರೂ, ಮನಸ್ಸಿನ ಖಿನ್ನತೆಯಿಂದ ಆತ್ಮಹತ್ಯೆಗೆ ನಿರ್ಧರಿಸುವ ಯಾರೇ ಆಗಿರಲಿ ನೆನಪಿಡಬೇಕಾದದ್ದು ಒಂದೇ “ಈ ಸಮಯ ಕಳೆದುಹೋಗುತ್ತದೆ – this moment will also pass” – ಇದು “ಹ್ಯಾಂಗ್ ಆನ್” ನಾಟಕ ಮುಗಿದಾಗ ಪ್ರೇಕ್ಷಕರ ಮನಸ್ಸಿನಲಿ ಅಚ್ಚಳಿಯದೆ ಉಳಿಯುವ ವಿಚಾರ.
- ಜಾದೂಗಾರ ಕುದ್ರೋಳಿ ಗಣೇಶ್