ಕೊಡಗು : ಏಷ್ಯ ಇಂಟರ್‌ನ್ಯಾಷನಲ್ ಕಲ್ಟರ್ ಅಕಾಡಮಿಯ ವತಿಯಿಂದ ಪಂಚಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಇವರಿಗೆ ದಿನಾಂಕ 28-10-2023 ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪಂಚಭಾಷಾ ಸಾಹಿತಿ, ಬಹು ಭಾಷಾ ಕವಿ, ರಂಗ ಕಲಾವಿದೆ, ಸಮಾಜ ಸೇವಕಿ, ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರಿಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಐ.ಎನ್.ಟಿ.ಯು.ಸಿ ಇದರ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಕೆ.ಎ. ಮನೋಕರನ್, ಮಾಜಿ ಸಹಾಯಕ ನ್ಯಾಯಾಧೀಶರಾದ ಡಾ.ಜೆ. ಹರಿದೋಸ್ಸ್ ಎಂ.ಬಿ.ಎ, ಬಿ.ಎಲ್, ಆರ್.ವಿ ದೇವರಾಜ್ ಸೇವಾ ಪ್ರತಿಷ್ಠಾನ ಇದರ ಸ್ಥಾಪಕರು ಮತ್ತು ಆರ್. ವಿ.ಡಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಇನ್ಫಾರ್ಮೇಷನ್ ಇದರ ಉಪಾಧ್ಯಕ್ಷರಾದ ಶ್ರೀಮತಿ ಡಾ.ಮಮತಾ ದೇವರಾಜ್ ಆರ್. ವಿ, ಶ್ರೀ ಷ. ಬ್ರ. ಚೆನ್ನಬಸವಾರಾಧ್ಯ ಶಿವಾಚಾರ್ಯ ಹಾಗೂ ಶ್ರೀಮತಿ ಮಹದೇವಮ್ಮ ತಾಲ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಲಾಯಿತು.
ಡಾ| ಉಳುವಂಗಡ ಕಾವೇರಿ ಉದಯ
ಕೊಡಗಿನ ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ ಮಾದಪ್ಪ ಸರಸ್ವತಿ ದಂಪತಿಗಳ ಸುಪುತ್ರಿಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲ್ಲೂಕಿನ ಮಹಿಳಾ ಸಾಹಿತ್ಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಗುರುಕುಲ ಕಲಾ ಪ್ರತಿಷ್ಟಾನ ಕೊಡಗು ಇದರ ಜಿಲ್ಲಾ ಘಟಕದ ಗೌರವಾದ್ಯಕ್ಷೆಯಾಗಿದ್ದಾರೆ. ಕರ್ನಾಟಕ ಕೊಡಗು ಲೇಖಕಿಯರ ಸಂಘದ ಸಹ ಕಾರ್ಯದರ್ಶಿ ಹಾಗೂ ಕೊಡಗು ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆಯಾಗಿರುವರು. ಇವರ ‘ಕೊಡಗ್ ರ ಸಿಪಾಯಿ’ ಕಾದಂಬರಿ ಸಿನಿಮಾ ಆಗಿದೆ. ಹಾಗೂ ಸಣ್ಣ ಕಥೆ ‘ಬಾವಬಟ್ಟೆಲ್’ ಕಿರುಸಿನೆಮ ಆಗಿದೆ. ಸಿನೆಮಾಗಳಿಗೂ ಹಾಡು ಬರೆದ ಖ್ಯಾತಿ ಇವರದ್ದು.
ಕಾದಂಬರಿ, ಕಥಾಸಂಕಲನ, ಕವನಮಾಲೆ , ಅಧ್ಯಯನ ಗ್ರಂಥ, ನಾಟಕ, ಭಕ್ತಿ ಪ್ರಧಾನ ಕೃತಿ, ಪ್ರಬಂಧ, ಹೀಗೆ ಹಲವಾರು ಪುಸ್ತಕಗಳನ್ನು ಕೊಡವ , ಕನ್ನಡ, ಇಂಗ್ಲಿಷ್ , ಹಿಂದಿ ಮತ್ತು ಮಲಯಾಳ ಹೀಗೆ ಐದು ಭಾಷೆಯಲ್ಲಿ ಬರೆದು ಪಂಚಭಾಷಾ ಸಾಹಿತಿ ಎನಿಸಿಕೊಂಡಿರುವರು. ಇವರು ಬರೆದ ಸುಮಾರು 25 ಕೃತಿಗಳು ಪ್ರಕಟಗೊಂಡಿವೆ. ಕೊಡವ, ಕನ್ನಡ, ಎರವ, ಹಿಂದಿ ಭಾಷೆಯಲ್ಲಿ ಕವನ ವಾಚನ ಮಾಡಿರುವರು. ಮತ್ತು ಹಲವಾರು ಕವಿಗೋಷ್ಟಿಗಳ ಅಧ್ಯಕ್ಷತೆಯನ್ನು ವಹಿಸಿರುವರು. ಇವರ ಬರಹಗಳು ಕಾವೇರಿ ಟೈಮ್ಸ್ , ಶಕ್ತಿ, ಬ್ರಹ್ಮಗಿರಿ, ವಿಜಯ ಕರ್ನಾಟಕ, ವಾಯ್ಸ್ ಆಫ್ ಕೊಡವ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ’ ‘ಮಕ್ಕಳ ಪುಸ್ತಕ ಚಂದಿರ ರಾಜ್ಯ ಪ್ರಶಸ್ತಿ’, ‘ಸಾಹಿತ್ಯ ತಪಸ್ವಿ ರಾಜ್ಯ ಪ್ರಶಸ್ತಿ’, ಸಣ್ಣ ಕತೆಗೆ ‘ಕುಶ ದತ್ತಿನಿದಿ ಪ್ರಶಸ್ತಿ’, ‘ಗುರುಕುಲ ಶಿರೋಮಣಿ ಪ್ರಶಸ್ತಿ’, ‘ಪುಸ್ತಕ ಪ್ರಶಸ್ತಿ’ ಮತ್ತು ಸಾಹಿತ್ಯ ರತ್ನ ಈ ಎಲ್ಲಾ ಪ್ರಶಸ್ತಿಗಳು ಇವರ ಸಾಹಿತ್ಯ ಕೃಷಿಗೆ ದೊರೆತ ಪ್ರತಿಫಲ.
ರಾಜ್ಯ ಮಟ್ಟದ ಮಹಿಳಾ ದಿನಾಚರಣೆಯಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮಾತ್ರವಲ್ಲದೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಗೌರವಾದರಗಳೊಂದಿಗೆ ಸನ್ಮಾನ ಸ್ವೀಕರಿಸಿದ್ದು ಇವರ ವಿಶೇಷತೆ.
ಕೆಲವು ಪ್ರಮುಖ ಮಹಿಳಾ ಕಲ್ಯಾಣದ ಕುರಿತು ಮತ್ತು ಕೊಡವರ ಆಚಾರ ವಿಚಾರಗಳ ಬಗ್ಗೆ ಅನೇಕ ಗಣ್ಯರ ಸಮ್ಮುಖದಲ್ಲಿ ವಿಚಾರ ಮಂಡಿಸಿದ ಹೆಗ್ಗಳಿಕೆ ಇವರದು. ಅನೇಕ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಬರೆದು, ಮಹಿಳೆಯರ ತಂಡಕ್ಕೆ ನಿರ್ದೇಶನ ಮಾಡಿ ತಾವೂ ಮುಖ್ಯ ಪಾತ್ರವಹಿಸಿ ವೇದಿಕೆ ಮೇಲೆ ಆಡಿದ ಖ್ಯಾತಿ ಇವರದ್ದು.
ಪತಿ ಉಳುವಂಗಡ ಯು. ಉದಯ, ಲಿಖಿತ್, ಅಮಿತ್ ಎಂಬ ಇಬ್ಬರು ಪುತ್ರರು ಮತ್ತು ಪೂಜಿತ, ಗಾಯನ ಎಂಬ ಇಬ್ಬರು ಸೊಸೆಯರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.