ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕವು ನಿರ್ವಹಿಸುವ ಬಂಟ್ವಾಳ ತಾಲೂಕು 17ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಡೇಶಿವಾಲಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದಿನಾಂಕ 06-12-2023ರಂದು ನಡೆಸಲಾಗುವುದು. ಈ ಸಮ್ಮೇಳನದಲ್ಲಿ ತಾಲೂಕಿನ 18 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸಾನ್ವಿ ಸುವರ್ಣ ಆಯ್ಕೆಯಾಗಿರುತ್ತಾರೆ.
ಸಾನ್ವಿ ಸುವರ್ಣ ಇವರು ಸುಂದರ ಪೂಜಾರಿ ಮತ್ತು ವಿಶಾಲಾಕ್ಷಿ ದಂಪತಿಗಳ ಸುಪುತ್ರಿ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಲ ಪ್ರತಿಭೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಇವರು ಭಾರತ ಸರಕಾರದ ಶಿಕ್ಷಣ ಸಚಿವಾಲಯದಿಂದ “ವೀರಗಾಥಾ” ಪ್ರಮಾಣ ಪತ್ರ ಪಡೆದಿರುವರು. ಶಶಸ್ತ್ರ ಪಡೆಗಳ ಶೂರರ ಸ್ಮರಣಾರ್ಥವಾಗಿ ಈ ಪ್ರಮಾಣ ಪತ್ರ ನೀಡಲಾಗಿದೆ. ಭಾರತೀಯ ಜೀವ ವಿಮಾ ನಿಗಮವು ನೀಡುವ ಸಾಧನಾ ಪ್ರಶಸ್ತಿಯನ್ನು ಪಡೆದ ಈಕೆ ಉತ್ತಮ ಮಾತುಗಾರರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದರೊಂದಿಗೆ ಫೋಟೋಗ್ರಾಫಿ, ನೃತ್ಯ, ಬರವಣಿಗೆ, ಚಿತ್ರಕಲೆ ಇತ್ಯಾದಿಗಳನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ.