ಮಂಗಳೂರು : ಕಥಾಬಿಂದು ಪ್ರಕಾಶನದ ಹದಿನಾರನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 29-10-2023ರಂದು ಆಯೋಜಿಸಿದ್ದ ‘ಕಥಾಬಿಂದು ಸಾಹಿತ್ಯೋತ್ಸವ’ವನ್ನು ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯಾಧಿಕಾರಿ ಶ್ರೀಧರ್ ಇವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಓದು ಜ್ಞಾನ ಸಂಪಾದನೆಗೆ ಮೂಲ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಮಕ್ಕಳು ಇಂದು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ. ಅದರಿಂದ ದೂರಸರಿಸಿ, ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸಬೇಕು. ಇಂದು ಪುಸ್ತಕ ಓದುವವರ ಸಂಖ್ಯೆಯೇ ಕಡಿಮೆಯಾಗಿದೆ. ಹಾಗಾಗಿ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡುವುದು ಸುಲಭದ ಕೆಲಸವಲ್ಲ”” ಎಂದು ಹೇಳಿದರು.
ಲೇಖಕಿ ವೀಣಾ ಕಾರಂತ್ ಮಾತನಾಡಿ, “ಕಥಾಬಿಂದು ಸಂಚಾಲಕ ಪ್ರದೀಪ್ ಅವರ ಸಹಕಾರ, ಪ್ರೋತ್ಸಾಹದಿಂದ 10 ಕೃತಿಗಳ ಬಿಡುಗಡೆಯಾಗಿರುವುದು ಸಂತೋಷದ ವಿಚಾರ. ಒಂದೇ ಬಾರಿ 50 ಕೃತಿಗಳನ್ನು ಬಿಡುಗಡೆಗೊಳಿಸುವುದು ಸುಲಭದ ಕೆಲಸವಲ್ಲ” ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ, “ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಹೆಚ್ಚು ಕನ್ನಡ ಕೃತಿಗಳನ್ನು ಓದುವ ಜೊತೆಯಲ್ಲಿ ಹೊಸ ಬರಹಗಾರರಿಗೂ ಇಂತಹ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹ ನೀಡುವ ಅಗತ್ಯತೆ ಇದೆ. ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು ಒಂದು ಸವಾಲಿನ ಕೆಲಸವಾಗುತ್ತಿದೆ. ಆಂಗ್ಲ ಮಾಧ್ಯಮದ ಬಗೆಗಿನ ಪೋಷಕರ ವ್ಯಾಮೋಹದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ಕನ್ನಡ ಶಾಲೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡದೆ ಇರುವುದರಿಂದ ಶಾಲೆಗಳು ಮುಚ್ಚುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಉದಯೋನ್ಮುಖ ಕವಿಗಳ ಮತ್ತು ಲೇಖಕರ 50 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. 15 ವರ್ಷಗಳಿಂದ ಕಥಾಬಿಂದು ಸಂಸ್ಥೆಯ ಮೂಲಕ ಪ್ರಕಟಗೊಂಡ ಕೃತಿಗಳ 200 ಲೇಖಕರು, ಸಾಹಿತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣತಜ್ಞ ವಿ.ಬಿ. ಕುಳಮರ್ವ ಕುಂಬ್ಳೆ ನೇತೃತ್ವದಲ್ಲಿ ಕವಿಗೋಷ್ಠಿ, ಕವಿತಾ ಕಿಣಿ ತಂಡದಿಂದ ಸಂಗೀತ ವೈವಿಧ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್, ವಕೀಲ ಅನಿಲ್ ಬೇಕಲ್, ಲೇಖಕರಾದ ಸುಂದರ್ ಶೆಟ್ಟಿ, ಚಂದ್ರಕಲಾ ದೀಪಕ್ ರಾವ್, ಸಾಹಿತಿ ಡಾ. ಕೊಳ್ಚೆಪ್ಪೆ ಗೋವಿಂದ ಭಟ್, ಸಾಹಿತಿ ಜಯಾನಂದ ಪೆರಾಜೆ, ಕವಯತ್ರಿ ರೇಖಾ ಸುದೇಶ್ ರಾವ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಉಪಸ್ಥಿತರಿದ್ದರು. ಶಾಂತಾ ಕುಂಟಿನಿ ಪ್ರಾರ್ಥಿಸಿ, ದಿವಾಕರ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.