ಮೈಸೂರು : ನಟ ಪ್ರಕಾಶ್ ರಾಜ್ ಇವರ ‘ನಿರ್ದಿಗಂತ’ ಪ್ರಸ್ತುತ ಪಡಿಸುವ ಶರಣ್ಯ ರಾಮಪ್ರಕಾಶ್ ನಿರ್ದೇಶನದ ‘ಪ್ರಾಜೆಕ್ಟ್ ಡಾರ್ಲಿಂಗ್’ ನಾಟಕದ ಪ್ರಥಮ ಪ್ರದರ್ಶನವು ದಿನಾಂಕ 05-11-2023ರಂದು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7259537777 ಮತ್ತು 9945281772.
ನಾಟಕದ ಬಗ್ಗೆ :
ಪ್ರಾಜೆಕ್ಟ್ ಡಾರ್ಲಿಂಗ್ ಒಂದು ಪ್ರಾಯೋಗಿಕ ನಾಟಕ. ರಂಗಭೂಮಿಯನ್ನು ಕಟ್ಟಿದ ಕಲಾವಿದೆಯರು ಯಾರು? ಯಾರ ಹೆಗಲ ಮೇಲೆ ನಮ್ಮ ರಂಗಭೂಮಿಯು ನಿಂತಿದೆ ? ಎಂದು ತಮ್ಮ ಹಿಂದಿನ ತಲೆಮಾರಿನ ಹುಡುಕಾಟದಲ್ಲಿರುವ ಕಲಾವಿದರ ನಡೆದಾಡನ್ನು ಈ ನಾಟಕ ಕಟ್ಟಿಕೊಡುತ್ತದೆ. ನಟರು ತಮ್ಮ ಈ ಹುಡುಕಾಟದಲ್ಲಿ, ಖಾನಾವಳಿ ಚೆನ್ನಿ ಎಂಬ ಅದ್ಭುತ ಪಾತ್ರದೊಂದಿಗೆ ಮುಖಾಮುಖಿಯಾಗುತ್ತಾರೆ. ತನ್ನ ಆಶುತ್ವದ ಮಾತು, ಲೈಂಗಿಕ ವ್ಯಂಗೋಕ್ತಿ, ಡಬಲ್ ಮೀನಿಂಗ್ ಕಾಮಿಡಿಯಿಂದ ಜನಪ್ರಿಯವಾಗಿ ಇಡೀ ರಂಗವನ್ನು ಆಳಿ ಬಾಳಿದ ಚೆನ್ನಿ ಪಾತ್ರದ ಕಥೆಗಳನ್ನು ಕೇಳಿ, ಈ ಚೆನ್ನಿ ಪಾತ್ರದ ನಟಿಯನ್ನು ಭೇಟಿಯಾಗಲೇಬೇಕೆಂಬ ಆಸೆಯಿಂದ ಅವಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ.
ಈ ಹುಡುಕಾಟದಲ್ಲಿ, ತಮ್ಮ ಬದುಕು ಮತ್ತು ಪಾತ್ರಗಳಿಂದ ರಂಗಭೂಮಿಯನ್ನು ಬೆಳಸಿದ ಹಲವಾರು ನಟಿಯರನ್ನು ಭೇಟಿಯಾಗುತ್ತಾರ …ಆದರೆ ಕೊನೆಗೂ ಇವರಿಗೆ ಚೆನ್ನಿ ಸಿಗುತ್ತಾಳಾ? ಇವರ ಹುಡುಕಾಟ ಹೇಗೆ ಕೊನೆಯಾಗುತ್ತದೆ? ಅವರು ಈ ಹುಡುಕಾಟದಿಂದ ಪಡೆಯುವುದೇನು? ಬಿಚ್ಚಿಡುವ, ಮುಚ್ಚಿಡುವ “ಸಂಸ್ಕೃತಿ’ಯಲ್ಲಿ ಹೆಣ್ಣಿನ ಲೈಂಗಿಕತೆಯ ನೆಲೆಗಳನ್ನು ಪ್ರಾಜೆಕ್ಟ್ ಡಾರ್ಲಿಂಗ್ ಗಮನಿಸುತ್ತದೆ.
ಕನ್ನಡ ರಂಗಭೂಮಿಯ ಖಳನಾಯಕಿ, ನಾಯಕಿ, ಕಾಮಿಡಿ, ಮತ್ತಿತರೆ ಪಾತ್ರಗಳನ್ನು ಮಾಡಿದ ಹಲವು ನಟಿಯರನ್ನು ಸಂದರ್ಶಿಸಿ, ನಿರ್ದೇಶಕಿ ಶರಣ್ಯ ರಾಮಪ್ರಕಾಶ್ ಎರಡು ವರ್ಷದ ಸಂಶೋಧನೆಯನ್ನು ಈ ನಾಟಕ ಆಧರಿಸಿದೆ. ಚರಿತ್ರೆಯಲ್ಲಿ ಕಂಡ ತೆರವುಗಳನ್ನು ಈ ನಾಟಕ ಸಂಶೋಧನೆ ಮತ್ತು ಕಲ್ಪನೆಗಳಿಂದ ತುಂಬಿ ಕೊಡುತ್ತದೆ. ಸಂಶೋದನೆಯ ವಿಡಿಯೋಗಳು, ಶಬ್ದ ಮತ್ತು ಫೋಟೊ ಎಸ್ಸೆಗಳನ್ನು ಹಾಡು, ನೃತ್ಯ, ಪಪೆಟ್ರಿ, ಎದುರಿಗಿಟ್ಟು ಕನ್ನಡ ರಂಗಭೂಮಿಯ ಕಲಾವಿದೆಯರನ್ನ ಒಳಗೊಂಡ ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಮರು ನಿರೂಪಿಸುತ್ತದೆ . ಅದು ನಮ್ಮದೇ ನಿಯಮಗಳಿಗನುಸಾರವಾಗಿ,
ಬರೆದು ನಿರ್ದೇಶಿಸಿದವರು : ಶರಣ್ಯಾ ರಾಮಪ್ರಕಾಶ್
ಕಲಾವಿದರು : ಮಾತಂಗಿ ಪ್ರಸನ್ನ, ಶೋಭನಾ ಕುಮಾರಿ, ಶೃಂಗ ಬಿ.ವಿ, ಶಶಾಂಕ ರಾಜಶೇಖರ್ ಮತ್ತು ಸುರಭಿ ವಸಿಷ್ಠ, ಅಶ್ವಿನ್ ವಾರಿಯರ್
ರಂಗ ನಿರ್ವಹಣೆ : ಶ್ರೀಧರ ಪ್ರಸಾದ್
ಸಹಲೇಖಕಿ : ಕೃತಿ ಆರ್. ಪುರಪ್ಪೇಮನೆ
ಸಂಗೀತ : ರೂಮಿ ಹರೀಶ್, ಪ್ರಿಯಶ್ರೀ ಮಣಿ
ಹಾಡುಗಳು : ಸಿದ್ಧಾರ್ಥ ಮತ್ತು ದಾದಾಪೀರ್ ಜೈಮನ್
ಕಲೆ : ಕಾಜು ಗುತ್ತಲ
ನಿರ್ದಿಗಂತದ ಬಗ್ಗೆ :
ಮೈಸೂರಿಗೆ ಸಮೀಪದಲ್ಲಿರುವ ಶ್ರೀರಂಗಪಟ್ಟಣ ಸಮೀಪದ ಕೆ. ಶೆಟ್ಟಹಳ್ಳಿಯಲ್ಲಿ ಶಾಂತವಾಗಿ ಹರಿಯುವ ಲೋಕಪಾವನಿ ನದಿಯ ಪಕ್ಕದಲ್ಲಿರುವ ನಿರ್ದಿಗಂತ – ಒಂದು ವಿಭಿನ್ನ ರೀತಿಯ ರಂಗ ಸಾಧ್ಯತೆಗಳನ್ನು ಅನ್ವೇಷಿಸುವ ಸ್ಥಳ. ಇಲ್ಲಿ ಹೊಸ ಬಗೆಯ ರಂಗಭೂಮಿಯನ್ನು ಕಟ್ಟಲು ಬೇಕಾದ ಎಲ್ಲಾ ಬಗೆಯ ಸಂಪನ್ಮೂಲಗಳು, ಸೌಲಭ್ಯಗಳ ಜೊತೆಗೆ ಪ್ರಶಾಂತವಾದ ಮತ್ತು ಸ್ಫೂರ್ತಿದಾಯಕ ನೈಸರ್ಗಿಕ ವಾತಾವರಣವಿದೆ, ರಮಣೀಯ ನೋಟಗಳು, ಹರಿಯುವ ನೀರಿನ ಜುಳು ಜುಳು ನಾದ ಮತ್ತು ಇಲ್ಲಿನ ತಾಜಾ ಗಾಳಿಯು ಸೃಜನಶೀಲತೆಯ ಉತ್ತುಂಗವನ್ನು ಮುಟ್ಟುವ ವಾತಾವರಣವನ್ನು ಸೃಷ್ಟಿಸಿದೆ. ಇದು ರಂಗನತಿಟ್ಟಿನ ಪಕ್ಕದಲ್ಲಿರುವ ‘ರಂಗದ ತಿಟ್ಟು’. ಇದು ಬಹುಭಾಷಾ ನಟ ಪ್ರಕಾಶ್ ರೈ ಅವರ ಕನಸಿನ ಕೂಸು.
ನಿರ್ದೇಶಕರ ಬಗ್ಗೆ :
ಶರಣ್ಯಾ ರಾಮಪ್ರಕಾಶ್ ಬೆಂಗಳೂರಿನಲ್ಲಿ ವಾಸವಾಗಿರುವ ರಂಗ ನಿರ್ದೇಶಕರು, ಲಿಂಗತ್ವ, ಸಂಪ್ರದಾಯ ಮತ್ತು ಭಾಷೆಯು ಪರಸ್ಪರ ಅನುಸಂಧಿಸುವಲ್ಲಿ ತಮ್ಮ ಕೆಲಸಗಳ ನೆಲೆಯೆಂದು ಗುರುತಿಸಿಕೊಂಡಿದ್ದಾರೆ. ಅವರು ಬರಹ, ನಟನೆ, ನಿರ್ದೇಶನವನ್ನು ಸ್ಥಳೀಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಲ್ಲಿ, ಹಲವು ರೀತಿಯ ಪ್ರಕಾರಗಳು, ಸಮುದಾಯಗಳು ಮತ್ತು ರಂಗಕರ್ಮಿಗಳೊಂದಿಗೆ ಸಹಭಾಗಿಯಾಗಿ ಕೆಲಸ ಮಾಡುತ್ತಾರೆ. ಅವರ ಕೆಲಸ ಸಹಭಾಗಿತ್ವ, ಸಂಶೋಧನೆ ಮತ್ತು ಹುಡುಕಾಟದ ಮೇಲೆ ನಂಬಿಕೆಯನ್ನಿಟ್ಟಿದೆ. ಅವರು ಇನ್‌ಲಾಕ್ ಸ್ಕಾಲರ್, ನ್ಯೂಯಾರ್ಕಿನ ಲಿಂಕನ್ ಸೆಂಟರ್ ಡೈರೆಕ್ಟರ್ ಲ್ಯಾಬಿನ ಸದಸ್ಯೆ ಮತ್ತು ಶಂಕರ್ ನಾಗ್ ರಂಗ ಪ್ರಶಸ್ತಿ (2012) ಪಡೆದಿದ್ದಾರೆ. ಅವರ ಇತ್ತೀಚಿಗಿನ ನಾಟಕಗಳು : ಮಹಿಂದ್ರಾ ಎಕ್ಸೆಲೆನ್ಸ್ ಇನ್ ಥಿಯೇಟರ್ ಅವಾರ್ಡ್ (ಮೆಟಾ) ಅವಾರ್ಡ್ ಪಡೆದಿರುವ ನಾಟಕ ಅಕ್ಷಯಾಂಬರ, ನವ (ಗೊಥೆ ಇನ್ಸಿಟ್ಯೂಟ್ ಅಂತಾರಾಷ್ಟ್ರೀಯ ಫಂಡ್), ಆರ್ಟಿಫಿಶಿಯಲ್ ಹೆಲ್ತ್ (ತೈವಾನ್ ಅಂತಾರಾಷ್ಟ್ರೀಯ ಫೆಸ್ಟಿವಲ್ ಆಫ್ ಆರ್ಟ್ಸ್) ಮತ್ತು ಮಾಲಾಶ್ರೀ ಚಾಲೆಂಜ್ (ಜೆಂಡರ್ ಬೆಂಡರ್ ಫೆಸ್ಟಿವಲ್)