ಕಡಬ : ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಕಡಬ ಸಂಯುಕ್ತ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ ಪ್ರೌಢ ಶಾಲೆಯ ಆತಿಥ್ಯದಲ್ಲಿ ದಿನಾಂಕ 30-10-2023ರಂದು ಕಡಬ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ‘ಪ್ರತಿಭಾ ಕಾರಂಜಿ 2023-24’ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡುತ್ತಾ “ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಹುದುಗಿರುತ್ತದೆ. ಅಂತಹ ಪ್ರತಿಭೆಗಳು ಬೆಳಕಿಗೆ ಬರಲು ಅವಕಾಶಗಳು ಮುಖ್ಯ. ಅದನ್ನು ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಒದಗಿಸಿಕೊಡುತ್ತದೆ. ಪಠ್ಯ ಚಟುವಟಿಕೆಗಳಷ್ಟೇ ಪ್ರಾಮುಖ್ಯತೆ ಪಠ್ಯೇತರ ಚಟುವಟಿಕೆಗಳಿಗೂ ಇದೆ. ಅದಕ್ಕಾಗಿಯೇ ಸರಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆಯನ್ನು ನೀಡುತ್ತಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಡಬದ ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ. ಪಾವ್ಲ್ ಪ್ರಕಾಶ್ ಡಿ’ಸೋಜ, “ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಶಿಕ್ಷಕರು ಮತ್ತು ಹೆತ್ತವರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರೋತ್ಸಾಹದ ಕೊರತೆಯಿಂದ
ಯಾವುದೇ ಪ್ರತಿಭೆ ಕಮರಿ ಹೋಗಬಾರದು ಎನ್ನುವುದು ನಮ್ಮೆಲ್ಲರ ಆಶಯ. ಆದುದರಿಂದ ಇಲಾಖೆಯ ಮಾರ್ಗಸೂಚಿಯಂತೆ ನಾವು ಈ ರೀತಿಯ ಕಾರ್ಯಕ್ರಮಗಳನ್ನು ಬದ್ಧತೆಯಿಂದ ನಡೆಸಿ ಕೊಡುತ್ತಿದ್ದೇವೆ” ಎಂದರು.
ಪುತ್ತೂರು ಇ.ಸಿ.ಓ. ಹರಿಪ್ರಸಾದ್, ಕಡಬ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತಾ ವೇಗಸ್, ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಸೈಂಟ್ ಜೋಕಿಮ್ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಕಿರಣ್ ಕುಮಾರ್, ಜೋಕಿಮ್ ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಲಾ ರೋಡ್ರಿಗಸ್, ಜೋಕಿಮ್ ವಿದ್ಯಾ ಸಂಸ್ಥೆಯ ಅಧೀನದ ವಿವಿಧ ಸಂಸ್ಥೆಗಳ ರಕ್ಷಕ ಶಿಕ್ಷಕ ಸಮಿತಿಯ ಉಪಾಧ್ಯಕ್ಷ ಸತೀಶ್ ನಾಯ್ಕ್ ಮೇಲಿನಮನೆ, ಬಾಲಕೃಷ್ಣ ಗೌಡ ಬಿ., ಹರಿಪ್ರಸಾದ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಮತ್ತು ತುಳು ಭಾಷೆಗಳಲ್ಲಿ ಭಾಷಣ ಸ್ಪರ್ಧೆ, ಭರತನಾಟ್ಯ, ಧಾರ್ಮಿಕ ಪಠಣ, ಪದ್ಯ/ಕವನ ವಾಚನ, ಆಶು ಭಾಷಣ, ರಂಗೋಲಿ, ಚಿತ್ರಕಲೆ, ಛದ್ಮವೇಷ, ಮಿಮಿಕ್ರಿ, ಜನಪದ ಗೀತೆ, ಭಾವಗೀತೆ, ಗಝಲ್, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಜನಪದ ನೃತ್ಯ ಮತ್ತು ಕವ್ಹಾಲಿ (ಸಮೂಹ) ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಡಬ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗೋವಿಂದ ನಾಯ್ಕ್ ಸ್ವಾಗತಿಸಿ, ಜೋಕಿಮ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ವಂದಿಸಿದರು. ಜೋಕಿಮ್ ಪ.ಪೂ. ಕಾಲೇಜ್ ಉಪನ್ಯಾಸಕ ರಾಜೇಶ್ ಎನ್. ಕಾರ್ಯಕ್ರಮ ನಿರ್ವಹಿಸಿದರು.