ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಬಂಟರ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಕವಿಗೋಷ್ಠಿಯಲ್ಲಿ ‘ಕವಿ ಸಮಯ – ಕಾವ್ಯ ನಮನ – ಚಿತ್ತ ಚಿತ್ತಾರ’ ಕಾರ್ಯಕ್ರಮವು ಉಡುಪಿಯ ಬಂಟರ ಸಂಘದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ದಿನಾಂಕ 29-10-2023ರಂದು ನಡೆಯಿತು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡುತ್ತಾ “ಪ್ರಾಚೀನ ಕಾಲದಿಂದಲೂ ನಾಡಿನ ಕಲೆ-ಸಾಹಿತ್ಯಗಳಿಗೆ ರಾಜಾಶ್ರಯ ನೀಡಿದ ವರ್ಗಗಳಲ್ಲಿ ಬಂಟ ಸಮಾಜದವರೂ ಪ್ರಮುಖರು. ಮೌಖಿಕ ಪರಂಪರೆಯಿಂದ ತೊಡಗಿ ಸಮೃದ್ಧವಾದ ಆಧುನಿಕ ಸಾಹಿತ್ಯ ಕೃಷಿಯವರೆಗೆ ಅನೇಕ ವಿದ್ವನ್ಮಣಿಗಳು ವಿವಿಧ ಪ್ರಕಾರಗಳಲ್ಲಿ ನಮ್ಮ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ. ನೃಪತುಂಗನ ಕವಿರಾಜಮಾರ್ಗದಲ್ಲಿ ಬರುವ ಕಾವ್ಯ ಪ್ರಯೋಗ ಪರಿಣತಮತಿಗಳ್ ನಾಡವರ್ಗಳ್ ಎಂಬ ಸೊಲ್ಲು ನಾಡವ – ಬಂಟರ ಕುರಿತಾಗಿಯೇ ಹೇಳಲ್ಪಟ್ಟಿದೆ ಎಂಬುದನ್ನು ಹಿರಿಯ ಭಾಷಾ ವಿದ್ವಾಂಸರರಾದ ಡಾ.ಶಂಬಾ ಜೋಶಿಯವರೇ ತಮ್ಮ ಸಂಶೋಧನಾತ್ಮಕ ಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿದರು.
ದೃಶ್ಯ – ಶ್ರಾವ್ಯ ರಂಜನೆ:
ಮೂರು ವಿಭಾಗಗಳಲ್ಲಿ ನಡೆದ ‘ಕವಿ ಸಮಯ – ಕಾವ್ಯ ನಮನ – ಚಿತ್ತಚಿತ್ತಾರ’ ಕಾರ್ಯಕ್ರಮ ಒಂದು ದೃಶ್ಯ – ಶ್ರಾವ್ಯ ರೂಪಕವಾಗಿಯೂ ಸಭಿಕರನ್ನು ರಂಜಿಸಿತು. ಹೆಸರಾಂತ ಕವಿಗಳಾದ ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ಅಶೋಕ್ ಪಕ್ಕಳ, ನಾರಾಯಣ ರೈ ಕುಕ್ಕುವಳ್ಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ಲಕ್ಷ್ಮೀನಾರಾಯಣ ರೈ ಹರೇಕಳ,ರೂಪಕಲಾ ಆಳ್ವ, ವಿಜಯಾ ಶೆಟ್ಟಿ ಸಾಲೆತ್ತೂರು, ಡಾ.ಮಂಜುಳಾ ಶೆಟ್ಟಿ, ಪ್ರೊ.ಅಕ್ಷಯ ಆರ್. ಶೆಟ್ಟಿ ಪೆರಾರ, ಮಲ್ಲಿಕಾ ಜೆ.ರೈ ಪುತ್ತೂರು ಸ್ವರಚಿತ ಕನ್ನಡ – ತುಳು ಕವಿತೆಗಳನ್ನು ಓದಿದರು. ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮವನ್ನು ಸಮನ್ವಯಗೊಳಿಸಿ ತಾವೇ ಬರೆದ ‘ಬಂಟಸಿರಿ ಗಾಥೆ ‘ ಕವಿತೆಯನ್ನು ವಾಚಿಸಿದರು.
ಗಾಯಕರಾದ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು, ಬಬಿತಾ ಶೆಟ್ಟಿ ಮತ್ತು ವರ್ಷಾ ಶೆಟ್ಟಿ ಗೋಷ್ಠಿಯ ಕವಿತೆಗಳನ್ನು ಸ್ವರಬದ್ಧಗೊಳಿಸಿ ಹಾಡಿದರು. ಇದೇ ಸಂದರ್ಭದಲ್ಲಿ ಕುಂಚ ಕಲಾವಿದೆ ಆಶ್ರಿತಾ ರೈ ಕವಿತೆಗಳ ಭಾವವನ್ನು ಗ್ರಹಿಸಿ ಚಿತ್ರ ರಚಿಸಿ ಕ್ಯಾನ್ವಾಸ್ ಮೇಲೆ ಪಡಿಮೂಡಿಸಿದರು. ಡಾ.ಪ್ರಿಯಾ ಶೆಟ್ಟಿ ನಿರೂಪಿಸಿದರು. ಖ್ಯಾತ ಸಂಗೀತ ಕಲಾವಿದರಾದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಸತೀಶ್ ಸುರತ್ಕಲ್ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಸಂತೋಷ್ ಮತ್ತು ಪ್ರಜ್ವಲ್ ಹಿನ್ನೆಲೆ ವಾದನಗಳಲ್ಲಿ ಸಹಕರಿಸಿದರು.
ಜಾಗತಿಕ ಬಂಟರ ಸಂಘಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲಬೈಲ್ ವಂದಿಸಿದರು.