ಉಡುಪಿ : 1947-48ರ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, 2023ರ ಕಾಶ್ಮೀರ ವಿಜಯದಂತಹ ಐತಿಹಾಸಿಕ ರಾಷ್ಟ್ರ ಪ್ರಜ್ಞೆಯ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದ ಉಡುಪಿಯ ಸುಶಾಸನ ‘ನಾರೀ ಶಕ್ತಿ- ಮಾನಿನಿ ಮನ್ವಂತರ’ ಎಂಬ ವಿನೂತನ ಪ್ರಾಯೋಗಿಕ ಯಕ್ಷಗಾನ ಪ್ರಸಂಗದ ತಾಳಮದ್ದಳೆ 2024ರ ಜನವರಿಯಂದು ಉಡುಪಿಯಲ್ಲಿ ಲೋಕಾರ್ಪಣೆಯಾಗಲಿದೆ.
ಸ್ವಾತಂತ್ರೋತ್ಸವದ ತಾಳಮದ್ದಳೆಯ ರೂವಾರಿ ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪದಂತೆ ಪ್ರಸಿದ್ಧ ಪ್ರಸಂಗಕರ್ತ ಹಾಗೂ ತಾಳಮದ್ದಳೆ ಅರ್ಥಧಾರಿ ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯಲ್ಲಿ ಈ ಪ್ರಸಂಗ ಮೂಡಿ ಬರಲಿದೆ. ನವರಾತ್ರಿಯಂದು ಶ್ರೀಕ್ಷೇತ್ರ ಕಟೀಲಿನಲ್ಲಿ ಶ್ರೀ ಶೀರೂರು ಶ್ರೀಪಾದರು, ಅರ್ಚಕರಾದ ಆಸ್ರಣ್ಣರು, ನವ ಕನ್ನಿಕಾ ಮುತ್ತೈದೆಯರ ಉಪಸ್ಥಿತಿಯಲ್ಲಿ ವೀಳ್ಯ ಪ್ರದಾನ ಪೂರೈಸಿ, ಪ್ರಸಂಗ ರಚನೆಗೆ ಸಿದ್ಧತೆ ನಡೆಸಿದೆ.
ಭಾರತೀಯ ಸಂಸ್ಕೃತಿ ಹೆಣ್ಣಿಗೆ ನೀಡಿದ ಸ್ಥಾನಮಾನ, ಐತಿಹಾಸಿಕ ಸ್ಥಿತ್ಯಂತರಗಳು, ಪ್ರಸ್ತುತ ಸಮಾಜದಲ್ಲಿನ ಸ್ತ್ರೀ ಸಂವೇದನೆ, ಸ್ತ್ರೀ ಶಕ್ತಿಯ ಪ್ರಾಬಲ್ಯದ ಅನಾವರಣವೇ ಮುಂತಾದ ಮಹತ್ವಪೂರ್ಣ ವಿಷಯಗಳ ನೆಲೆಗಟ್ಟಿನಲ್ಲಿ ಸಿದ್ಧವಾಗಲಿರುವ ‘ನಾರೀ ಶಕ್ತಿ’ ಪ್ರಸಂಗವು ಈಗಾಗಲೇ ಚಾಲ್ತಿಯಲ್ಲಿರುವ ಪೌರಾಣಿಕ ಪ್ರಸಂಗಗಳಿಗಿಂತ ಭಿನ್ನವಾಗಿದ್ದು, ಪುರಾಣ ಪಾತ್ರಗಳ ಜೊತೆಗೆ ಇತಿಹಾಸವನ್ನು ಮಥಿಸಿ ಪ್ರಸ್ತುತ ಸಮಾಜಕ್ಕೊಂದು ಸಂದೇಶ ನೀಡುವ ಉದ್ದೇಶ ಇರಿಸಿಕೊಂಡಿದೆ ಎಂದು ಪ್ರಸಂಗಕರ್ತರು ತಿಳಿಸಿದ್ದಾರೆ.
ಸುಶಾಸನ ಉಡುಪಿ
ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವ ಮುನ್ನೋಟವನ್ನು ಈ ಇರಿಸಿಕೊಂಡು ಹುಟ್ಟಿದ ಉಡುಪಿಯ ‘ಸುಶಾಸನ’ ಸತ್ವಪೂರ್ಣಸಂದೇಶಗಳಿಂದ ಸಮಾಜವನ್ನು ನೇರ್ಪುಗೊಳಿಸಲು ವಾಙ್ಮಯ ಲೋಕದ ಪ್ರಬಲ ಹಾಗೂ ಪರಿಣಾಮಕಾರಿ ಕಲಾಮಾಧ್ಯಮವಾದ ತಾಳಮದ್ದಳೆಯನ್ನು ಆಯ್ದುಕೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರೊ. ಕಿರಣಕೆರೆ ಪರಿಕಲ್ಪಿತ ಕಾಶ್ಮೀರ ವಿಜಯದ ಯಶಸ್ಸೇ ನಾರೀ ಶಕ್ತಿಯ ಸಂಕಲ್ಪಕ್ಕೆ ಕಾರಣವಾಯಿತು ಎಂದು ಸಂಯೋಜಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ.