ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ಸಾದರ ಪಡಿಸುವ ‘ಹರಿದಾಸ ಸ್ಮರಣೆ’ ದಾಸ ಕೃತಿ ಗಾಯನ ಸ್ಪರ್ಧೆಯು ದಿನಾಂಕ 24-12-2023 ಮತ್ತು 25-12-2023ರಂದು ಮೈಸೂರಿನ ಶ್ರೀ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ.
ಈ ಸ್ಪರ್ಧೆಯ ಪ್ರಥಮ ಹಂತದಲ್ಲಿ 100 ಸ್ಪರ್ಧಿಗಳಿಗೆ ಮಾತ್ರ ಪ್ರವೇಶವಿದೆ. ಪ್ರಥಮ ಹಂತದಲ್ಲಿ ಸ್ಪರ್ಧಿಗಳು ಬೇರೆ ಬೇರೆ ರಾಗದಲ್ಲಿರುವ 4 ದಾಸರ ಕೃತಿಗಳನ್ನು ಕಲಿತಿರಬೇಕು. ತೀರ್ಪುಗಾರರು ಕೇಳಿದ ಕೃತಿಯನ್ನು ಹಾಡಬೇಕು. ದ್ವಿತೀಯ ಹಂತದಲ್ಲಿ ಆಯ್ಕೆಯಾದ 30 ಸ್ಪರ್ಧಿಗಳು ಮೊದಲ ಹಂತದ 4 ಕೃತಿಗಳ ಜೊತೆಗೆ ಹೊಸದಾಗಿ 4 ಕೃತಿಗಳನ್ನು ಉಗಾಭೋಗದ ಸಮೇತ ಕಲಿತಿರಬೇಕು. ಇದರಲ್ಲಿ 2 ಹಾಡು ರಾಗಮಾಲಿಕೆಯಲ್ಲಿರಬೇಕು. ಇಲ್ಲಿ ಸ್ಪರ್ಧಿಗಳು 1 ಕೃತಿ ಅವರ ಆಯ್ಕೆಯದ್ದು ಹಾಗೂ ಇನ್ನೊಂದು ತೀರ್ಪುಗಾರರ ಆಯ್ಕೆಯಂತೆ ಹಾಡಬೇಕು. ತೃತೀಯ ಹಂತದಲ್ಲಿ ಆಯ್ಕೆಯಾದ 10 ಸ್ಪರ್ಧಿಗಳು ತೀರ್ಪುಗಾರರು ಹೇಳುವ ಕೃತಿಯನ್ನು ವಾದ್ಯ ಸಹಕಾರದೊಂದಿಗೆ ಹಾಡಬೇಕು ಹಾಗೂ ಕಿರಿಯ ದರ್ಜೆ ಪಠ್ಯ ಪುಸ್ತಕದ ಪ್ರಕಾರ (ರಾಗ, ತಾಳದ ಬಗ್ಗೆ) ಪ್ರಶ್ನೆಗಳನ್ನು ತೀರ್ಪುಗಾರರು ಕೇಳುತ್ತಾರೆ.
ವಾದ್ಯ ಸಹಕಾರವನ್ನು ಸಂಸ್ಥೆಯ ಕಡೆಯಿಂದ ಏರ್ಪಡಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾದದ್ದು. ಇದನ್ನು ಆಯೋಜಕರೂ ಸೇರಿದಂತೆ ಬೇರೆ ಯಾರೂ ಪ್ರಶ್ನಿಸುವಂತಿಲ್ಲ.
ಸ್ಪರ್ಧೆಯ ನಿಯಮಗಳು :
1. ಸ್ಪರ್ಧಿಯ ವಯಸ್ಸು ದಿನಾಂಕ 31-10-2023ಕ್ಕೆ 18 ವರ್ಷ ಮೀರಿರ ಬಾರದು.
2. ನೀವು ಪ್ರವೇಶ ಪತ್ರದಲ್ಲಿ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ನಿಮ್ಮ ಪ್ರವೇಶ ಪತ್ರವನ್ನು ಪರಿಗಣಿಸಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಲಾಗುವುದು.
3. ಪ್ರವೇಶ ಪತ್ರವನ್ನು ವಾಟ್ಸಾಪ್ ಮೂಲಕವೇ ಕಳುಹಿಸಬೇಕು. ಅಂತಿಮ ದಿನಾಂಕ 15-11-2023 (9110453540/8310279953)
4. ಸ್ಪರ್ಧೆಯ ಯಾವುದೇ ಹಂತದಲ್ಲಿ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಥವಾ ಅಸಭ್ಯ ನಡವಳಿಕೆ ಇದ್ದರೆ, ಸ್ಪರ್ಧೆಯಿಂದ ಹೊರಗಿಡಲಾಗುವುದು.
5. ಸ್ಪರ್ಧೆಯಲ್ಲಿ ‘ದಾಸರ ಪದ’ಗಳನ್ನು ಬಿಟ್ಟು ಬೇರೆ ಯಾವ ಕೃತಿಯನ್ನು ಹಾಡುವಂತಿಲ್ಲ.
6. ಹಾಡುವ ಮುನ್ನ ಪ್ರತಿ ರಚನೆಯ ರಚನಕಾರರ ಹೆಸರು ಹಾಗೂ ರಾಗವನ್ನು ತಿಳಿಸಬೇಕು. ಕರ್ನಾಟಕ ಶಾಸ್ತ್ರೀಯ ಸಂಗೀತದ ಶೈಲಿಯಲ್ಲೇ ಹಾಡಬೇಕು.
7. ಸ್ಪರ್ಧೆಯ ಮೊದಲ ಹಂತದಲ್ಲಿ ಬ್ಯಾಟರಿ ಚಾಲಿತ ಶೃತಿ ಪೆಟ್ಟಿಗೆ ವಿನಹ ಯಾವುದೇ ವಾದ್ಯ ಸಹಕಾರ ಬಳಕೆ ಮಾಡುವಂತಿಲ್ಲ.
8. ಕಾರ್ಯಕ್ರಮದ ಯಾವುದೇ ಹಂತದಲ್ಲಾದರೂ ಕಾರ್ಯಕ್ರಮದ ಗುಣಮಟ್ಟ ಉತ್ತಮವಾಗಿಸಲು ಆಯೋಜಕರು ಕೆಲವು ಬದಲಾವಣೆ ಮಾಡಬಹುದು ಹಾಗೂ ಇದನ್ನು ಯಾರೂ ಪ್ರಶ್ನಿಸುವಂತಿಲ್ಲ.
9. ಸ್ಪರ್ಧೆಯಲ್ಲಿ ಸಾಹಿತ್ಯವನ್ನು ನೋಡದೆ ಹಾಡಬೇಕು.
10. ಪ್ರವೇಶ ಪತ್ರದಲ್ಲಿ, ಕೇಳಿರುವ ಎಲ್ಲಾ ವಿವರಣೆ ಸರಿಯಾಗಿದ್ದಲ್ಲಿ ಮಾತ್ರವೇ ಪ್ರವೇಶ ಪತ್ರವನ್ನು ಪರಿಗಣಿಸಲಾಗುವುದು.
ಹರಿದಾಸ ಸಾಹಿತ್ಯ :
ನಾವಿರುವುದು ಅತ್ಯಾಧುನಿಕ ಯುಗದಲ್ಲಿ. ಇದು ನಮ್ಮನ್ನು ಆಸ್ತಿಕತೆಯಿಂದ ನಾಸ್ತಿಕತೆಯ ಕಡೆ ಕರೆದೊಯ್ಯುತ್ತಿದೆ. ಇದನ್ನು ತಡೆಯಲು ಬೇಕಾಗಿರುವುದು ಜ್ಞಾನ. ‘ದಾಸ’ ಎಂಬುದು ಒಂದು ಅಪೂರ್ವ ಶಬ್ದ. ದಾಸನೆಂದು ಹೇಳಿಸಿಕೊಳ್ಳುವುದು ಅತಿಸುಲಭದ ಮಾತಲ್ಲ. ತನ್ನಲ್ಲಿನ ಅಹಂಕಾರ ತ್ಯಜಿಸಿ, ಸಮರ್ಪಣಾ ಭಾವನೆಯಿಂದ ಎಲ್ಲವೂ ನಿನ್ನದೇ ನನ್ನದೇನೂ ಇಲ್ಲ ಎಂದು ತಲೆಬಾಗಿ ಭಕ್ತಿಯಿಂದ ಅರ್ಪಣೆ ಮಾಡಿಕೊಳ್ಳುವುದು.
ದಾಸ ಸಾಹಿತ್ಯದ ಮುಖ್ಯ ಉದ್ದೇಶ ‘ಜ್ಞಾನ ಪ್ರಚಾರ’. ಅಹಂಕಾರ, ಢಂಬಾಚಾರ ಹಾಗೂ ಆಧುನಿಕತೆಯ ಅಂಧಕಾರದಲ್ಲಿ ಮುಳುಗಿರುವ ನಮಗೆ ಈ ಹರಿದಾಸ ಸಾಹಿತ್ಯವು ಒಂದು ದಾರಿದೀಪವಾಗಿದೆ. ಇದು ಜೀವನದ ಅಂಕುಡೊಂಕುಗಳ ಬಗ್ಗೆ ನಮಗೆ ಎಚ್ಚರಿಕೆ ಕೊಡುತ್ತಾ, ದೇವರ ಕಡೆಗೆ ದಾರಿ ತೋರಿಸುತ್ತದೆ. ಇದರ ಸಾಹಿತ್ಯದಲ್ಲಿ ಭಕ್ತಿರಸ, ತುಂಬಿರುತ್ತದೆ. ಇದರಲ್ಲಿ ಕೀರ್ತನಾ, ಅರ್ಚನಾ, ಅರ್ಪಣಾ ಹಾಗೂ ದಾಸ್ಯ ಭಾವನೆಗಳನ್ನು ನಾವು ಕಾಣಬಹುದು. ದಾಸರಿಗೆ ಬರೀ ಪದ್ಯ ಬರೆದು, ಹೇಳುವುದು ಅಥವಾ ಪುಸ್ತಕ ಮಾಡಿ ಗಂಟು ಕಟ್ಟುವ ಉದ್ದೇಶವಿರಲಿಲ್ಲ.
ದಾಸ ಸಾಹಿತ್ಯದ ಸಾಲುಗಳು ಸ್ಫುರಿತವಾಗಿರುವಂತದ್ದು, ಪ್ರತಿ ಪದವೂ ಆಳವಾದ ಅರ್ಥದಿಂದ ಕೂಡಿರುವಂತಹದ್ದು. ಹೇಗೆ ಕಬ್ಬನ್ನು ಹಿಂಡಿದಾಗ ಸಿಹಿಯಾದ ರಸ ಬರುವುದೋ ಅಂತೆಯೇ ಹರಿದಾಸ ಸಾಹಿತ್ಯದ ಆಳವಾಗಿ ಹೊಕ್ಕಾಗ ನಿಜಾನಂದವನ್ನು ಉಂಟು ಮಾಡುತ್ತದೆ. ಹರಿದಾಸ ಸಾಹಿತ್ಯದ ಪ್ರಸಿದ್ಧವಾದ ‘ರಾಗಿ ತಂದೀರಾ ಭಿಕ್ಷೆಗೆ ರಾಗಿ ತಂದಿರಾ….’ ಕೀರ್ತನೆಯಲ್ಲಿ ದಾಸರು ನಮ್ಮನ್ನು ಯೋಗ್ಯರಾಗಿ, ಭೋಗ್ಯರಾಗಿ, ಪುಣ್ಯವಂತರಾಗಿ ಎಂದು ಹೇಳಿದ್ದಾರೆ. ಜ್ಞಾನಿಗಳ ಜೀವನ ಮಹತ್ವವೇ ಈ ರೀತಿಯಿದ್ದು ಅವರು ತಮ್ಮ ಸ್ವಾರ್ಥಕ್ಕಾಗಿ ಅಲ್ಲದೇ ಲೋಕಕಲ್ಯಾಣಕ್ಕಾಗಿ ಜೀವನ ಮುಡಿಪಾಗಿಡುತ್ತಾರೆ. ಅದು ದೇವರು ತಮಗೆ ವಹಿಸಿದ ಕರ್ತವ್ಯವೆಂದು ಭಾವಿಸುತ್ತಾರೆ.
ಅಜ್ಜನ ಮನೆ ಕಲಾ ಪ್ರಪಂಚ :
ವರ್ಷದ ಬಹುತೇಕ ದಿನಗಳನ್ನು ಶೈಕ್ಷಣಿಕ ವಿಷಯಗಳಲ್ಲೇ ತೊಡಗುವ ಮಕ್ಕಳಿಗೆ ತಮ್ಮ ಹವ್ಯಾಸ, ಕಲೆ ಹಾಗೂ ಅಭಿರುಚಿಯ ವಿಷಯದ ಕಡೆಗೆ ಗಮನಹರಿಸುವುದು ಈ ಬೇಸಿಗೆ ರಜಾಕಾಲದಲ್ಲಿಯೇ. ಮಕ್ಕಳ ಪ್ರತಿಭೆಯು ಅನಾವರಣವಾಗುವುದು ಅವರ ಬೇಸಿಗೆ ರಜೆಯ ಕಾಲದಲ್ಲಿ, ಆಗ ಅವರು ತಮ್ಮ ರಜೆಯನ್ನು ಅಜ್ಜ, ಅಜ್ಜಿಯ ಮನೆಯಲ್ಲಿ ಕಳೆಯುತ್ತಿರುತ್ತಾರೆ. ಆದ್ದರಿಂದ ಅಜ್ಞನ ಮನೆ ಎಂದರೆ ಮಕ್ಕಳಿಗೆ ಬಹಳ ಪ್ರೀತಿ, ಹೀಗೆ ಯೋಚನೆ ಬಂದಾಗ ಮಕ್ಕಳ ಉತ್ಸಾಹಕ್ಕೆ ಪೂರಕವಾಗಿ ಅವರ ಬಹುಮುಖ ಪ್ರತಿಭೆಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಡಲು ಹುಟ್ಟಿದ ಸಂಸ್ಥೆಯೇ ಅಜ್ಜನ ಮನೆ ಕಲಾ ಪ್ರಪಂಚ…
ಈ ಸಂಸ್ಥೆಯು 2019ರಲ್ಲಿ ಪ್ರಾರಂಭವಾಗಿದ್ದು ಇದರ ಮೊದಲ ಕಾರ್ಯಕ್ರಮ ‘ವಾದ್ಯ ಸಂಗಮ’, 15 ಅಗಸ್ಟ್ 2019ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ 5 ಸಂಗೀತ ಶಾಲೆಗಳ ಸುಮಾರು 60 ಮಕ್ಕಳು ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದು ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.
ಅವಕಾಶ ವಂಚಿತ ಪ್ರತಿಭಾನ್ವಿತ ಸರ್ಕಾರಿ ಶಾಲಾ ಮಕ್ಕಳಿಗೆ ವೇದಿಕೆಯನ್ನು ಸೃಷ್ಟಿಸುವ ಸಲುವಾಗಿ ಡಿಸೆಂಬರ್ 25, 2019ರಂದು ಸಂಸ್ಥೆಯು ಸರ್ಕಾರಿ ಶಾಲಾ ಮಕ್ಕಳ ‘ನಾಟಕೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಾಲ್ಕು ಸರ್ಕಾರಿ ಶಾಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿನಯ ಪ್ರತಿಭೆಯನ್ನು ಮೆರೆದರು. ಇದರೊಂದಿಗೆ ‘ರಂಗರಾವ್ ಸ್ಮಾರಕ ವಿಕಲಚೇತನ’ ಶಾಲೆಯ ಮಕ್ಕಳು ತಮ್ಮ ಗಾಯನ ಹಾಗೂ ನೃತ್ಯದಿಂದ ಸಭಿಕರನ್ನು ರಂಜಿಸಿದರು.
ನವೆಂಬರ್ 6, 2022ರಂದು ಸಂಸ್ಥೆಯ ಅತ್ಯಂತ ವಿನೂತನವಾದ ‘ಸೂರ್ಯೋದಯದಿಂದ ಚಂದ್ರೋದಯದವರೆಗೆ’ ಕಾರ್ತಿಕ ಸಂಭ್ರಮ ಎಂಬ ಕಾರ್ಯಕ್ರಮವನ್ನು ನಡೆಸಿತು. 12 ಗಂಟೆಗಳ ಕಾಲ 12 ಕಲಾ ಶಾಲೆಯ ವಿದ್ಯಾರ್ಥಿಗಳು ಅನೇಕ ಕಲಾ ಪ್ರಕಾರಗಳನ್ನು ಅತ್ಯಂತ ಸುಂದರವಾಗಿ ವೇದಿಕೆಯಲ್ಲಿ ಅನಾವರಣ ಮಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಮೂರು ವಿಶೇಷ ಚೇತನ ಶಾಲೆಯ ಮಕ್ಕಳೂ ಇದರಲ್ಲಿ ಭಾಗವಹಿಸಿ ನಾಟಕ, ಹಾಡೂ, ನೃತ್ಯಗಳಿಂದ ಎಲ್ಲರನ್ನೂ ರಂಜಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.