ಮಂಗಳೂರು : ಶ್ರೀದೇವಿ ನೃತ್ಯ ಕೇಂದ್ರದ ಸ್ಥಾಪಕ ನಿರ್ದೇಶಕಿ ಶಾಂತಲಾ ಪ್ರಶಸ್ತಿ ಪುರಸ್ಕೃತ ದಿ. ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರ 90ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ಶ್ರೀದೇವಿ ನೃತ್ಯಕಲಾ ಕೇಂದ್ರ ಆಯೋಜಿಸಿದ ‘ನೃತ್ಯೋತ್ಸವ -2023’’ದಲ್ಲಿ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ ‘ಪ್ರತಿಭಾ ಪ್ರದರ್ಶನ’ ದಿನಾಂಕ 27-10-2023 ಶುಕ್ರವಾರದಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಮಣಿಪುರಿ ನೃತ್ಯದ ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತ ದರ್ಶನಾ ಜ್ಹವೇರಿ ಅವರು ಪ್ರತಿಭಾ ಪ್ರದರ್ಶನ ಉದ್ಘಾಟಿಸಿ, “ದಿ. ಜಯಲಕ್ಷ್ಮೀ ಆಳ್ವ ಅವರು ನೃತ್ಯ ಕ್ಷೇತ್ರದ ದೊಡ್ಡ ಹೆಸರಾಗಿದ್ದು, ಅವರ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆ ತಂದಿದೆ. ಆಳ್ವರ ಮಕ್ಕಳೊಂದಿಗೂ ಹಲವು ವರ್ಷಗಳ ಒಡನಾಟ ಹೊಂದಿದ್ದು, ಕುಟು೦ಬಗಳ ಸಂಬಂಧ ಬೆಸೆಯುವ ಕಾರ್ಯಕ್ರಮ ಇದಾಗಿದೆ. ಆಳ್ವರು ಅಪಾರ ಶಿಷ್ಯ ವರ್ಗವನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ್ದಾರೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, “ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಕರಾವಳಿಗೆ ಕರೆ ತರುವ ಸಾಮರ್ಥ್ಯ ಆಳ್ವರಲ್ಲಿತ್ತು. ಇದು ಇಂದಿನವರಿಗೆ ಗೊತ್ತಿಲ್ಲ. ಶ್ರೀದೇವಿ ನೃತ್ಯ ಕೇಂದ್ರದ ಮೂಲಕ ಅವರು ಭಾರತೀಯ ಸನಾತನ ಸಂಸ್ಕೃತಿಯ ಅರಿವು ಮೂಡಿಸುವ ಶ್ರೇಷ್ಠ ಕಾರ್ಯವನ್ನು ಮಾಡಿದ್ದಾರೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, “ಆಳ್ವರು ಮುಂಬಯಿನಲ್ಲಿ ನೃತ್ಯಾಭ್ಯಾಸ ಮಾಡಿ ಊರಿಗೆ ಬಂದು ಆಸಕ್ತರಿಗೆ ನೃತ್ಯ ತರಬೇತಿ ನೀಡಿ ಶ್ರೇಷ್ಠಗುರುವಾಗಿ ಮೂಡಿ ಬಂದಿದ್ದಾರೆ. ಅವರು ನೃತ್ಯ ಕಲಿಸಿದ ಶಿಷ್ಯರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾರೆ. ಭಾರತೀಯ ಕಲಾಪ್ರಕಾರವಾದ ನೃತ್ಯವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರೋತ್ಸಾಹ ಅಗತ್ಯವಾಗಿದೆ. ನಮ್ಮ ಆರೋಗ್ಯ, ಸಂಸ್ಕೃತಿಯ ಉಳಿವಿನಲ್ಲೂ ನೃತ್ಯ ಪ್ರಮುಖ ಪಾತ್ರವಹಿಸುತ್ತದೆ” ಎಂದರು.
ಮೈಸೂರು ವಿ.ವಿ. ಪ್ರಾಧ್ಯಾಪಿಕೆ ಡಾ. ಶೀಲಾ ಸುಧೀರ್, ಶ್ರೀದೇವಿ ನೃತ್ಯ ಕೇಂದ್ರದ ಟ್ರಸ್ಟಿ ಹರೀಶ್ ಶೆಟ್ಟಿ, ಖಜಾಂಚಿ ಸಾತ್ವಿಕಾ ರೈ ಮೊದಲಾದವರು ಉಪಸ್ಥಿತರಿದ್ದರು. ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಡಾ. ಆರತಿ ಎಚ್. ಶೆಟ್ಟಿ ಅವರು ಸ್ವಾಗತಿಸಿದರು. ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ ಪ್ರತಿಭಾ ಪ್ರದರ್ಶನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 15 ಮಂದಿ ಸ್ಪರ್ಧಾಳುಗಳು ಭಾಗವಹಿಸಿದರು.
ದಿನಾಂಕ 28-10-2023ರಂದು ನಡೆದ ಸಮಾರೋಪ ಸಮಾರಂಭದಲ್ಲಿ ನೃತ್ಯ ಗುರು ದಿ. ಕೆ.ಎನ್. ದಂಡಾಯುಧಪಾಣಿ ಪಿಳ್ಳೈ ಇವರ ಸ್ಮರಣಾರ್ಥ ನೀಡಲಾಗುವ ‘ನಾಟ್ಯಕಲಾ ತಪಸ್ವಿ’ ಪ್ರಶಸ್ತಿಯನ್ನು ನಾಟ್ಯ ಕಲಾವಿದೆ ಪದ್ಮಶ್ರೀ ಡಾ. ನರ್ತಕಿ ನಟರಾಜ್ ಚೆನ್ನೈ, ಜಯಲಕ್ಷ್ಮೀ ಆಳ್ವ ಅವರ ಸ್ಮರಣಾರ್ಥ ನೀಡಲಾಗುವ ‘ಜಯಕಲಾ ಪ್ರಶಸ್ತಿ’ಯನ್ನು ಭರತನಾಟ್ಯ ಕ್ಷೇತ್ರದ ಸಾಧಕಿ ಡಾ. ಶೀಲಾ ಶ್ರೀಧರ್ ಮೈಸೂರು ಹಾಗೂ ‘ಯುವಕಲಾ ಪ್ರಶಸ್ತಿ’ಯನ್ನು ‘ಪ್ರತಿಭಾ ಪ್ರದರ್ಶನ’ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತೆ ಶ್ರೀಮತಿ ಪ್ರವೀತ ಅಶೋಕ್ ಕುಂದಾಪುರ ಇವರ ಶಿಷ್ಯೆಯಾದ ಕುಂದಾಪುರದ ಯುಕ್ತಿ ಉಡುಪ ಇವರುಗಳಿಗೆ ಪ್ರದಾನ ಮಾಡಲಾಯಿತು. ದ್ವಿತೀಯ ಸ್ಥಾನವನ್ನು ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಇವರ ಶಿಷ್ಯೆಯಾದ ಧರಿತ್ರಿ ಭಿಡೆ ಮತ್ತು ತೃತೀಯ ಸ್ಥಾನವನ್ನು ಡಾ. ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾದ ಪಿ.ಜಿ. ಪನ್ನಗ ರಾವ್ ಇವರಿಗೆ ನೀಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪದ್ಮಶ್ರೀ ಡಾ. ದರ್ಶನ ಜ್ಹವೇರಿ ಅವರು “ದಿ. ಜಯಲಕ್ಷ್ಮೀ ಆಳ್ವ ಅವರು ನಾಟ್ಯಾರಾಧಕಿಯಾಗಿದ್ದರು. ಮಂಗಳೂರು ಮಾತ್ರವಲ್ಲದೆ ದೇಶದ ಅನೇಕ ಭಾಗಗಳಲ್ಲಿ ಶಿಷ್ಯ ವರ್ಗ ಹೊಂದಿರುವ ಅವರು ನಾಟ್ಯ ಕಲೆಯ ಕಂಪನ್ನು ಜಗತ್ತಿಗೆ ಪಸರಿಸಿದ್ದಾರೆ. ನಾಟ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಸ್ಮರಣೀಯ” ಎಂದರು.
‘ನಾಟ್ಯಕಲಾ ತಪಸ್ವಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಟ್ಯ ಕಲಾವಿದೆ ಪದ್ಮಶ್ರೀ ಡಾ. ನರ್ತಕಿ ನಟರಾಜ ಚೆನ್ನೈ, “ದಿ.ಜಯಲಕ್ಷ್ಮೀ ಆಳ್ವ ಅವರ ಸಂಸ್ಮರಣೆಯ ಸಂದರ್ಭ ನನಗೆ ಸಿಕ್ಕಿರುವ ಈ ಪುರಸ್ಕಾರ ಎಲ್ಲ ಗೌರವಗಳಿಂದ ಮಿಗಿಲಾಗಿದೆ. ಅವರ ಕುಟುಂಬದೊಂದಿಗಿನ ಒಡನಾಟ ನನಗೆ ಸಾರ್ಥಕತೆ ತಂದಿದೆ” ಎಂದರು. ‘ಜಯ ಕಲಾ ಪ್ರಶಸ್ತಿ’ಯನ್ನು ಪಡೆದ ಶೀಲಾ ಶ್ರೀಧರ್ ಅವರು “ಕಲಾಸೇವೆ ಮಾಡುತ್ತ ಬದುಕುವುದೊಂದೇ ಆಸೆ” ಎಂದು ಹೇಳಿ ಜಯಲಕ್ಷ್ಮಿ ಆಳ್ವ ಕುರಿತ ಹಾಡನ್ನು ಪ್ರಸ್ತುತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಮಾತನಾಡಿ “ಜಯಲಕ್ಷ್ಮಿ ಆಳ್ವಾ ಅವರು ಕಲಾ ತಪಸ್ವಿ ಆಗಿದ್ದರು. ದೇಶ ವಿದೇಶದಲ್ಲಿ ಖ್ಯಾತಿ ಗಳಿಸಿದ್ದರು. ವೃದ್ಧಾಪ್ಯದಲ್ಲೂ ನೃತ್ಯ ಮಾಡಿದ್ದಾರೆ. ಕರ್ತವ್ಯವನ್ನು ತಪಸ್ಸಿನಂತೆ ಮಾಡಿದರೆ ಎಲ್ಲವೂ ಸಾಂಗವಾಗುತ್ತದೆ. ಹಿರಿಯರನ್ನು ಸ್ಮರಿಸಿ ಅವರ ಆಶೀರ್ವಾದದಿಂದ ಮಾಡಿದ ಕೆಲಸ ಕಾರ್ಯ ಸಾರ್ಥಕವಾಗುತ್ತದೆ. ನಾವು ಮಾಡುವ ಕರ್ತವ್ಯ ಮನಪೂರ್ವಕವಾಗಿ ಮಾಡಿದ್ದಲ್ಲಿ ದೇವರ ದಯೆ ಇರುತ್ತದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ “ದಿ. ಜಯಲಕ್ಷ್ಮೀ ಅವರನ್ನು ಅಮ್ಮಮ್ಮ ಎಂದು ಕರೆಯುತ್ತಿದ್ದು, ನನ್ನ ಕಲಾ ಜೀವನಕ್ಕೆ ತಾಯಿಯಾಗಿದ್ದರು. ಅವರ ನಾಲ್ಕು ತಲೆಮಾರು ನೃತ್ಯ ಆರಾಧಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಸದಾ ನವೋಲ್ಲಾಸದೊಂದಿಗೆ ಮಾರ್ಗದರ್ಶಿಯಾಗಿದ್ದ ಜಯಲಕ್ಷ್ಮೀ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ” ಎಂದರು.
ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಮುಂಬೈಯ ರೇಖಾ ಶ್ರಾಫ್, ಶ್ರೀದೇವಿ ನೃತ್ಯ ಕೇಂದ್ರದ ಟ್ರಸ್ಟಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ಸಾತ್ವಿಕಾ ರೈ ಉಪಸ್ಥಿತರಿದ್ದರು. ಡಾ. ರವಿಶಂಕರ್ ಸ್ವಾಗತಿಸಿ, ಶ್ರೀದೇವಿ ನೃತ್ಯಕಲಾ ಕೇಂದ್ರದ ನಿರ್ದೇಶಕಿ ಡಾ. ಆರತಿ ಶೆಟ್ಟಿ ವಂದಿಸಿದರು.
ಭರತನಾಟ್ಯ, ಜಾನಪದ ನೃತ್ಯ ಸೇರಿದಂತೆ ವೈವಿಧ್ಯಮಯ ನಾಟ್ಯ ಪ್ರದರ್ಶನಗೊಂಡಾಗ ಸಹೃದಯರು ಪುಳಕಗೊಂಡರು. ಹಿನ್ನೆಲೆಯಲ್ಲಿ ಜಯಲಕ್ಷ್ಮೀ ಆಳ್ವ ಅವರ ಬದುಕಿನ ಕಥೆಯ ವಿವರ ಕೇಳುತ್ತಿದ್ದಂತೆ ಅವರ ಕಣ್ಣಾಲಿಗಳು ಮಂಜಾದವು. ಕರಾವಳಿಯಲ್ಲಿ ಬೆಳೆದು ಭರತನಾಟ್ಯ ಕ್ಷೇತ್ರದಲ್ಲಿ ದೇಶದಲ್ಲೇ ಖ್ಯಾತಿ ಪಡೆದ ಜಯಲಕ್ಷ್ಮಿ ಆಳ್ವ ಅವರ ಕಲಾ ಬದುಕಿನ ಹಾದಿಯನ್ನು ವರ್ಣಿಸುವುದಕ್ಕಾಗಿ ಕದ್ರಿಯ ಶ್ರೀದೇವಿ ನೃತ್ಯ ಕೇಂದ್ರದ ಕಲಾವಿದರು ಪ್ರದರ್ಶಿಸಿದ ‘ಜಯಕಥಾ’ ಸಂಗೀತ-ನೃತ್ಯ ರೂಪಕ ಕಲಾರಸಿಕರನ್ನು ರಂಜಿಸಿತು. ಜಯಲಕ್ಷ್ಮಿ ಅವರನ್ನು ಅಮರವಾಗಿಸಿತು.
ಬೆಳ್ಳಿ ರೇಖೆಗಳ ಗುಚ್ಚದಂತೆ ಬೆಳಕಿನ ವಿನ್ಯಾಸ ಮಾಡಿದ್ದ ವೇದಿಕೆಯಲ್ಲಿ ಏಕವ್ಯಕ್ತಿ ಪ್ರದರ್ಶನದೊಂದಿಗೆ ಬಂದ ಕಲಾವಿದೆ, ಜಯಲಕ್ಷ್ಮೀ ಅವರ ಜನಪದ ವಿವರವನ್ನು ನಿರೂಪಿಸುತ್ತ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ನಂತರ ಕಲಾವಿದೆಯರ ತಂಡ ಸಂಭ್ರಮ ಪ್ರದರ್ಶಿಸಿದರು. ಇದರ ಬೆನ್ನಲ್ಲೇ ಪುಟಾಣಿ ಕಲಾವಿದೆ ಜಯಲಕ್ಷ್ಮೀ ಅವರ ಬಾಲ್ಯವನ್ನು ನೆನಪಿಸಿದರು. ನಂತರ ಜಯಲಕ್ಷ್ಮೀ ಅವರು ನಾಟ್ಯಶಾಲೆಯನ್ನು ಸೇರಿದ್ದು, ನೃತ್ಯ ಕಲಿತದ್ದು ಮುಂತಾದ ಬದುಕಿನ ಹೆಜ್ಜೆಗಳ ಪರಿಚಯ. ಇದೆಲ್ಲದಕ್ಕೂ ಅಮೋಘ ನೃತ್ಯದ ಮೂಲಕ ಕಲಾವಿದೆಯರು ಜೀವ ತುಂಬಿದರು. ತಮಿಳರ ಅಂಗಣದಲ್ಲಿ ಬೆಳೆದ ಕುಸುಮ ಗುಜರಾತ್‌ನ ದರ್ಪಣ ಅಕಾಡೆಮಿ ಸೇರಿದ ನಂತರದ ವಿವರಗಳನ್ನು ನೀಡುವಾಗ ಜಾನಪದ ನೃತ್ಯದ ಸೊಬಗು ವೇದಿಕೆ ತುಂಬಿತು. ಮಹಾನ್ ಕಲಾವಿದೆಗೆ ಪ್ರಣಾಮಗಳನ್ನು ಅರ್ಪಿಸುವುದರೊಂದಿಗೆ ‘ಜಯಕಥಾ’ ಸಂಪನ್ನಗೊಂಡಿತು.
2 Comments
Very happy to see the photos and information.
We felt as if we are in Mangalore.
We never forget ammamma .
Our wishes to Aarati madam and team
Very happy to see the photos and information.
We felt as if we are in Mangalore.
We never forget ammamma .
Our wishes to Aarati madam and team