ಕುಶಾಲನಗರ : ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಿನಾಂಕ 01-11-2023ರಂದು ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಕೊಡಗು ವಿವಿ ಇದರ ಕನ್ನಡ ಉಪನ್ಯಾಸಕರಾದ ಡಾ. ಜಮೀರ್ ಅಹಮ್ಮದ್ “ಕನ್ನಡ ಹಬ್ಬವನ್ನು ನಾವೆಲ್ಲರರೂ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಇದು ನಮ್ಮ ಅಸ್ಮಿತೆಯ ಹಬ್ಬ. ಜಾತಿ ಮತ ಧರ್ಮಗಳ ಹಂಗಿಲ್ಲದ ಹಬ್ಬ. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ಕನ್ನಡದ ಉಳಿವಿಗಾಗಿ ಪಣ ತೊಡಬೇಕಾಗಿದೆ. ಕನ್ನಡ ಭಾಷೆಯ ಬಗ್ಗೆ ತಾತ್ಸಾರ, ಉದಾಸೀನ ಸಲ್ಲದು. ಕನ್ನಡ ಭಾಷೆಯನ್ನು ಹೆಚ್ಚಿನ ಮಟ್ಟದಲ್ಲಿ ಬಳಕೆ ಮಾಡಬೇಕಿದೆ. ಕನ್ನಡಿಗರು ತಮ್ಮ ಜವಾಬ್ದಾರಿ ಅರಿತು ಕನ್ನಡ ಭಾಷೆಯನ್ನು ಪ್ರೀತಿಸಬೇಕಾಗಿದೆ. ಕನ್ನಡ ರಾಜ್ಯೋತ್ಸವ ನಮಗೆ ಬರಬೇಕಾದರೆ ಹಲವರ ಬಲಿದಾನಗಳು ನಡೆದಿದೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣ ರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಅವರೆಲ್ಲರನ್ನೂ ಇಂದು ಸ್ಮರಿಸಬೇಕಾಗಿದೆ. ಕನ್ನಡ ಕೇವಲ ಭಾಷೆಯಲ್ಲ, ಬದಲಿಗೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಹಿತ್ಯಾತ್ಮಕ ಧ್ವನಿಯಾಗಿದೆ. ಪ್ರತಿಯೊಬ್ಬರೂ ಕನ್ನಡದ ಅಭಿವೃದ್ಧಿಗೆ ಕಂಕಣಬದ್ದರಾಗಬೇಕಿದೆ.” ಎಂದರು.
ಪೊಲೀಸ್, ಅರಣ್ಯ ಇಲಾಖೆ ಸೇರಿದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ತಹಸೀಲ್ದಾರ್ ಕಿರಣ್ ಗೌರಯ್ಯ, ಸೋಮವಾರಪೇಟೆ ಉಪವಿಭಾಗ ಪೊಲೀಸ್ ಉಪ ಅಧೀಕ್ಷಕ ಗಂಗಾಧರಪ್ಪ ಪಥಸಂಚನಲದ ಗೌರವ ವಂದನೆ ಸ್ವೀಕರಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕಿರಣ್ ಗೌರಯ್ಯ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು “ಕನ್ನಡ ಉಳಿಸಿ ಬೆಳೆಸಲು ಕನ್ನಡ ಮನಸ್ಸುಗಳ ಅವಶ್ಯಕತೆ ಇದೆ. ರಾಜ್ಯೋತ್ಸವಕ್ಕೆ ಮಾತ್ರ ಸಿಮೀತವಾಗದ ಕನ್ನಡ ಭಾಷೆ, ಸದಾ ನಮ್ಮ ಜೀವನದುದ್ದಕ್ಕೂ ಬಳಸಿ ಬೆಳೆಸುವ ಭಾಷೆಯಾಗಬೇಕು. ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆಯಿರಲಿ. ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಯನ್ನು ಎಂದೆದಿಂಗೂ ಮರೆಯದಿರೋಣ” ಎಂದು ಹೇಳಿದರು.
ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವರದರಾಜು, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಉಪ ತಹಸೀಲ್ದಾರ್ ಮಧುಸೂದನ್, ಉಪಖಜಾನೆ ಅಧಿಕಾರಿ ವಿಜಯಕುಮಾರ್, ಆರ್.ಎಫ್.ಒ.ರತನ್ ಕುಮಾರ್, ಕುಡಾ ಸದಸ್ಯ ಕಾರ್ಯದರ್ಶಿ ಸಾಹಿತಿ ಸುನಿತಾ, ಪತ್ರಕರ್ತ ಕೆ.ಕೆ.ನಾಗರಾಜಶೆಟ್ಟಿ, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಪೌರ ಕಾರ್ಮಿಕ ಮಾದ, ಉಪನ್ಯಾಸಕ ಜಮೀರ್ ಅಹಮ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಭಾ ಕಾರ್ಯಕ್ರಮದ ಮುನ್ನ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.