ಮಂಗಳೂರು : ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ಆಯೋಜಿಸಲಾದ ‘ವಾದ್ಯ ಕಲಾ ಮೇಳ’ವು ದಿನಾಂಕ 05-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶ್ರೀಕ್ಷೇತ್ರ ಕಚ್ಚೂರು ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ಮಾತನಾಡಿ, “ದೈವಾರಾಧನೆ ಮತ್ತು ನಾಗಾರಾಧನೆ ತುಳುನಾಡಿನ ಮೂಲ ಸಂಸ್ಕೃತಿಯಾಗಿದ್ದು, ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿವೆ. ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವವರು ತಳ ಸಮುದಾಯದವರು. ತುಳುನಾಡಿನ ಸಂಸ್ಕೃತಿಗೆ ಈ ಸಮುದಾಯದ ಕೊಡುಗೆ ಅಪಾರ. ದೇವಸ್ಥಾನ, ದೈವಸ್ಥಾನಗಳಲ್ಲಿ ತಳ ಸಮುದಾಯದ ವಾದ್ಯ ಕಲಾವಿದರಿಗೆ ಅವಕಾಶ ದೊರೆಯಬೇಕು. ಕಲಾವಿದರಿಗೆ ಮಾಶಾಸನವನ್ನು ನೀಡಲು ಸರ್ಕಾರವನ್ನು ಒತ್ತಾಯಿಸಬೇಕು” ಎಂದರು.
‘ವಾದ್ಯ ಕಲಾ ಮೇಳ’ವನ್ನು ತಾಸೆ ಬಡಿಯುವ ಮೂಲಕ ಚಿತ್ರನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಪ್ರತಿ ಮಗುವಿಗೂ ತಾಸೆ, ತೆಂಬರೆ, ಡೋಲು ಇವು ಸ್ಫೂರ್ತಿ. ತುಳುನಾಡಿನ ಸಂಸ್ಕೃತಿ ಸಂರಕ್ಷಿಸಲು ವಾದ್ಯ ಕಲಾವಿದರನ್ನು ಪ್ರೋತ್ಸಾಹಿಸಬೇಕು. ದೈವದ ಚಾಕರಿ ಮಾಡುತ್ತಾ ತುಳುನಾಡಿನ ಸಂಸ್ಕೃತಿ ಉಳಿಸುತ್ತಾ ಬಂದಿರುವ ತಳಸಮುದಾಯಕ್ಕೆ ಇಲ್ಲಿನ ಜನ ಋಣಿಯಾಗಿರಬೇಕು. ಹಿಂದೆ ಮೇಲ್ವರ್ಗದವರು ಅವರನ್ನು ಶೋಷಿಸಿ ಅವರ ಸೌಲಭ್ಯಗಳನ್ನು ಕಿತ್ತು ಕೊಂಡಿದ್ದರು. ಆದ್ದರಿಂದ ಪ್ರಸ್ತುತ ತಳಸಮುದಾಯದವರು ಅಭಿವೃದ್ಧಿಯಾಗಲು ಸರ್ಕಾರ ಮತ್ತು ಜನರು ಅವರಿಗೆ ಸವಲತ್ತುಗಳನ್ನು ದೊರಕಿಸಲು ಕೆಲಸ ಮಾಡಬೇಕು” ಎಂದು ಹೇಳಿದರು.
ಮಂಗಳೂರು ಕಂಬಳ ಅಧ್ಯಕ್ಷ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, “ಸಂಸ್ಕೃತಿ ಉಳಿಸಲು ತಳಸಮುದಾಯದವರು ಪ್ರಾಮಾಣಿಕವಾಗಿ ದುಡಿಯುತ್ತಿರುವುದರಿಂದ ಹಿಂದೂ ಧರ್ಮ ಗಟ್ಟಿಯಾಗಿ ಉಳಿದಿದೆ. ಇತ್ತೀಚೆಗೆ ಸಾಮಾಜಿಕ ವ್ಯವಸ್ಥೆ ಬದಲಾಗುತ್ತಿರುವುದು ಸಮಾಧಾನದ ವಿಷಯ” ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ, ನಮ್ಮ ಕುಡ್ಲ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಮಾತನಾಡಿದರು. ಇದೇ ಸಂದರ್ಭದಲ್ಲಿ ದೈವದ ಚಾಕರಿ ಮಾಡುತ್ತಿರುವ ಹಿರಿಯ ವಾದ್ಯ ಕಲಾವಿದರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಮಂಗಳಾ ಕ್ರೀಡಾಂಗಣದಿಂದ ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದ ತನಕ ಆಕರ್ಷಕ ವಾದ್ಯ ಮೇಳದ ಮೆರವಣಿಗೆ ನಡೆಯಿತು.
ಮ.ನ.ಪಾ. ಸದಸ್ಯ ಭಾಸ್ಕರ ಮೊಯ್ಲಿ, ಬಾಂದೊಟ್ಟು ಕೋರ್ದಬ್ಬು ದೈವಸ್ಥಾನ ಅಧ್ಯಕ್ಷ ಬಾಲಕೃಷ್ಣ ರೈ ಬಾಂದೊಟ್ಟುಗುತ್ತು, ಬಬ್ಬುಸ್ವಾಮಿ ಸೇವಾ ಸಮಿತಿಯ ಲೋಕನಾಥ ಮಾರ್ಲ ಗುರುನಗರ, ನಗರ ಪಾಲಿಕೆ ಅಧ್ಯಕ್ಷ ಸುಧೀರ್ ಶೆಟ್ಟಿ, ಮಾಜಿ ಅಧ್ಯಕ್ಷ ಭಾಸ್ಕರ ಕೆ.. ರಂಗಭೂಮಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಮಾಜಿ ಸಚಿವ ರಮಾನಾಥ್ ರೈ, ಸಂಘದ ಅಧ್ಯಕ್ಷ ಚಂದ್ರಶೇಖರ ವಾಮಂಜೂರು, ಕಾರ್ಯದರ್ಶಿ ಕೃಷ್ಣ ಎಸ್ಕೋಡಿ, ರಂಗನಾಥ ಎ., ಕೋಶಾಧಿಕಾರಿ ಯಶವಂತ್ ನೀರುಮಾರ್ಗ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಗೌರವ ಸಲಹೆಗಾರ ಕೆ.ಕೆ. ಪೇಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾದ್ಯ ಕಲಾ ಮೇಳದ ಗೌರವಾಧ್ಯಕ್ಷ ಶ್ರೀ ಗಿರಿಧರ್ ಶೆಟ್ಟಿ ಸ್ವಾಗತಿಸಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲಸಾರ್ ಮತ್ತು ರೋಹಿತ್ ಉಳ್ಳಾಲ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.