ಮುಂಬೈ : ಶ್ರೀ ಡಾ. ಸುಗುಣೇ0ದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಮುಂಬಯಿಯ ವಿದ್ಯಾವಿಹಾರ್ ಶ್ರೀ ಗಾಂದೇವಿ ಅಂಬಿಕಾ ಶ್ರೀ ಅದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 20-10-2023ರಂದು ನಡೆದ ನವರಾತ್ರಿ ವಿಶೇಷದಲ್ಲಿ ‘ನಾಟ್ಯಾಯನ’ ಮತ್ತು ಕೋಟಿ ಗೀತಾ ಲೇಖನ ಯಜ್ಞ ನೋಂದಣಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪೆರಣ0ಕಿಲ ಹರಿದಾಸ್ ಭಟ್ “ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣಗಳ ವಿಶಿಷ್ಟ ಸಮ್ಮೇಳನದ ‘ನಾಟ್ಯಾಯನ’ ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯ ಅಯನಾ ವಿ. ರಮಣ್, ಅನನ್ಯ- ಅದ್ಭುತ ಕಲಾವಿದೆ. ದಕ್ಷಿಣಾಯನ-ಉತ್ತರಾಯಣಗಳ ಸೂರ್ಯ ಚಲನೆಯ ಹೆಸರನ್ನು ಹೊಂದಿರುವ ಆಕೆ, ಅಷ್ಟೇ ಪ್ರಖರ – ಪ್ರಚಂಡ ಪ್ರತಿಭೆ. ಅಸಾಧಾರಣ ಸ್ಮರಣ ಶಕ್ತಿ, ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಈ ಕಲಾವಿದೆ, ಭಗವದ್ಗೀತೆ – ವೇದಸೂಕ್ತಗಳ ಪ್ರಸ್ತುತಿಯಿರುವ ನೃತ್ಯ – ನೃತ್ತ ಭರತನಾಟ್ಯದ ಮೂಲಕ ಪ್ರತ್ಯೇಕವಾಗಿ ನಿಲ್ಲುತ್ತಾರೆ” ಎಂದು ವಿಶ್ಲೇಷಿಸಿದ ಅವರು, ರಾಷ್ಟ್ರಮಟ್ಟದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಲಭಿಸಲಿ ಎಂದು ಆಶೀರ್ವದಿಸಿದರು.
ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಪೂರ್ವ ಅಧ್ಯಕ್ಷ ಮತ್ತು ಎಂ.ಡಿ. ಡಾ. ಎಂ.ನರೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಸಭೆಯಲ್ಲಿ ಅಯನಾ ಅವರಿಗೆ ಚಿನ್ನದ ಕೈ ಕಡಗ ತೊಡಿಸಿ, ಸೀರೆ – ಶಾಲು ಹೊದಿಸಿ ಸನ್ಮಾನಿಸಲಾಯಿತು. ಇನ್ನೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತಿನ ರಾಜ್ಯ ಅಧ್ಯಕ್ಷ ಕಲಾವಿದ ಸುರೇಂದ್ರ ಕುಮಾರ್ ಹೆಗ್ಡೆ ಅಭಿನಂದನಾ ನುಡಿಗಳನ್ನಾಡಿದರು.
ಮುಂಬೈ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕಿಯರಾದ ನಿವೃತ್ತ ಕೆನರಾ ರೊಬೋಕೋ ಮ್ಯೂಚುವಲ್ ಫಂಡ್ ಸಹಾಯಕ ಪ್ರಬಂಧಕಿ ಅನಿತಾ ಅಶೋಕ್ ಶೆಣೈ, ಪೂರ್ವ ಕಾರ್ಪೊರೇಟ್ ಲಾಯರ್ – ಫಿಲ್ಮ್ ಮೇಕರ್ ಅಮ್ರೀತಾ ರಾಯ್ ಸಾಂದರ್ಭಿಕವಾಗಿ ಮಾತನಾಡಿ ಅದ್ಭುತ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹೆತ್ತವರಾದ ಡಾ. ಮೂಕಾಂಬಿಕ ಜಿ.ಎಸ್. – ಗೀತಾ ಪ್ರಚಾರಕ ಕೆ.ವಿ. ರಮಣ್ ಆಚಾರ್ಯ ದಂಪತಿಯನ್ನು ಗೌರವಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಹರಿದಾಸ್ ಗೋಪಾಲ್ ಶೆಟ್ಟಿ, ಶ್ರೀ ಪುತ್ತಿಗೆ ಮಠದ ರಾಧಾಕೃಷ್ಣ ಆಚಾರ್ಯ,
ಪ್ರಚಾರಕಿ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು. ಕಲಾ ಸಂಘಟಕ ಪದ್ಮನಾಭ ಸಸಿಹಿತ್ಲು ನಿರೂಪಿಸಿದರು. ಕಾರ್ಯಕ್ರಮದ ನಡು – ನಡುವೆ ಗೀತಾ ಲೇಖನ ಯಜ್ಞದ ಹೊತ್ತಿಗೆಗಳನ್ನು ವಿತರಿಸಲಾಯಿತು.
ಕೆ.ವಿ. ರಮಣ್ ಆಚಾರ್ಯ, ಮಂಗಳೂರು ಅವರ ಪರಿಕಲ್ಪನೆ, ನಿರ್ದೇಶನ ಮತ್ತು ನಿರೂಪಣೆಯಲ್ಲಿ ಮೂಡಿ ಬಂದ ಚಂದ್ರಶೇಖರ್ ಮಂಡಕೋಲು ಅವರ ಪ್ರಶಸ್ತಿ ಪಡೆದ, ಭಾರತದ ಮೊಟ್ಟಮೊದಲ ಮಹಿಳಾ ವೈದ್ಯ ಆನಂದಿ ಬಾಯಿ ಜೋಷಿ ಜೀವನ ಕಥಾನಕ ‘ಅಗ್ನಿ ದಿವ್ಯದ ಹುಡುಗಿ’ ಏಕವ್ಯಕ್ತಿ ನಾಟಕ ಪ್ರದರ್ಶನ ಸಹಿತ ‘ನಾಟ್ಯಾಯನ’ ಕಾರ್ಯಕ್ರಮ ಸಾರ್ವತ್ರಿಕವಾಗಿ ಮೆಚ್ಚುಗೆಗೆ ಪಾತ್ರವಾಯಿತು.