ಮುಂಬಯಿ : ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 51ನೇ ನವರಾತ್ರಿ ಉತ್ಸವದ ನಿಮಿತ್ತ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ ಕೆರೆಕಾಡು ಮುಲ್ಕಿ (ರಿ.) ಇದರ 9ನೇ ವರ್ಷದ ಮುಂಬಯಿ ಪ್ರವಾಸದ ಯಕ್ಷಗಾನ ಸಪ್ತ ಸಂಭ್ರಮವು ದಿನಾಂಕ 26-10-2023ರಂದು ನಡೆಯಿತು. ಈ ಸಮಾರಂಭವನ್ನು ಉದ್ಘಾಟನೆ ಮಾಡಿದ ಮುಂಬಯಿಯ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರು “ಯಕ್ಷಗಾನವು ಕಲಾ ಸಂಪತ್ತಾಗಿದ್ದು, ಇದನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಅಭ್ಯಸಿಸಬೇಕು. ಇಂತಹ ತುಳುನಾಡಿನ ಹೆಮ್ಮೆಯ ಕಲೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯುತ್ತಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಕ್ಷಗಾನದ ಪ್ರಾಯೋಜಕರಾದ ಫೆಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಮಹಾರಾಷ್ಟ್ರ ಇದರ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ದೇವಾಲಯದಲ್ಲಿ ವಿಶೇಷವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸೇವಕರ್ತರಾದ ನವೀನ್ ಸುವರ್ಣ ಹಾಗೂ ರವಿ ನಾಯಕ್ ಮತ್ತು ಕೆರೆಕಾಡು ಶ್ರೀ ವಿನಾಯಕ ಫೌಂಡೇಶನ್ ಇದರ ಕಲಾವಿದ ಅಭಿಜಿತ್ ಕರೆಕಾಡು ಇವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಲದ ಅಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಘನ್ನೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರು ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಮುಂಬಯಿ ಕನ್ನಡ ಕಲಾಕೇಂದ್ರ ಅಧ್ಯಕ್ಷರಾದ ಮಧುಸೂದನ್ ರಾವ್ ಟಿ.ಆರ್, ಉದ್ಯಮಿ ಜಯರಾಮ್ ಶೆಟ್ಟಿ ವಾಶಿ, ಸತೀಶ್ ಕ್ಯಾಟರರ್ಸ್ ಇದರ ಮಾಲಕರಾದ ಸತೀಶ್ ಶೆಟ್ಟಿ, ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಅಧ್ಯಕ್ಷರಾದ ಜಯಂತ್ ಅಮೀನ್, ಮೂಕಾಂಬಿಕಾ ಮಂದಿರದ ರಮೇಶ್ ಪೂಜಾರಿ, ಸುರೇಶ್ ಸಾಲಿಯನ್ ಮೊದಲಾದವರು ಉಪಸ್ಥಿತರಿದ್ದರು. ರಂಗಭೂಮಿ ಫೈನ್ ಆರ್ಟ್ಸ್ ಉಪಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ಪನ್ವೆಲ್ ಸಹಕರಿಸಿದರು. ಮುಂಬಯಿಯ ವ್ಯವಸ್ಥಾಪಕ ವಿ.ಕೆ. ಸುವರ್ಣ ಪ್ರಸ್ತಾವನೆಗೈದರು. ಜಗದೀಶ್ ಶೆಟ್ಟಿ ವಂದಿಸಿ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಗೌರವ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಆರಂಭದಲ್ಲಿ ಖ್ಯಾತ ಭಜನಾ ಗಾಯಕ ವಿಜಯ್ ಶೆಟ್ಟಿ ಮೂಡುಬೆಳ್ಳೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆ ಬಳಿಕ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಇವರಿಂದ ‘ಶ್ರೀದೇವಿ ಬನಶಂಕರಿ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು.