ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ‘ಕಾಂತಾವರ ಉತ್ಸವ-2023’ವು ದಿನಾಂಕ 01-11-2023 ರಂದು ನಡೆಯಿತು. ಈ ಸಮಾರಂಭದಲ್ಲಿ ಸಂಘದ ದತ್ತಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ವಿಮರ್ಶಕ, ಕತೆಗಾರ ಬೆಳಗೋಡು ರಮೇಶ ಭಟ್ ”ಕನ್ನಡ ನಾಡು ನುಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಅಪರೂಪದ ಸಾಧಕರು ಅನೇಕರಿದ್ದಾರೆ. ಶಾಸನಗಳಲ್ಲಿಯೂ ಕಾಣದ, ಕನ್ನಡದ ಇತಿಹಾಸ, ಭವಿಷ್ಯಗಳಲ್ಲಿ ಕಾಣಸಿಗದ ಮಹತ್ವದ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ ಸಾಧನೆ. ಅಂತಹ ಕೆಲಸವನ್ನು ಕಾಂತಾವರದ ನೆಲದಲ್ಲಿ ಕನ್ನಡ ಸಂಘ ಸಾಧಿಸಿದೆ” ಎಂದು ಹೇಳಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಕೃತಿಗಳ ಸಂಪಾದಕ ಡಾ. ಬಿ.ಜನಾರ್ದನ ಭಟ್ ವಿವರಿಸಿದರು. ಸಂಘದ ಸಂಚಾಲಕ ವಿಠಲ ಬೇಲಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಸನ್ಮಾನ ಪತ್ರ ವಾಚಿಸಿದರು. ಸಾಧಕರು, ಕೃತಿಕಾರರು ಮತ್ತು ಪ್ರಾಯೋಜಕರನ್ನು ಗೌರವಿಸಲಾಯಿತು.
ದತ್ತಿ ನಿಧಿ ಪ್ರಶಸ್ತಿ ಪ್ರದಾನ : ಮೈತ್ರೇಯಿ ಗುರುಕುಲ (ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ), ಡಾ. ಎಸ್.ಡಿ. ಶೆಟ್ಟಿ (ಮಹೋಪಾಧ್ಯಾಯ ಪ್ರಶಸ್ತಿ), ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ (ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ), ವೈ.ವಿ. ಗುಂಡೂರಾವ್ (ಮಂಜನಬೈಲ್ ರಂಗ ಸಮ್ಮಾನ್), ಪ್ರೊ. ಎ. ಕೃಷ್ಣಪ್ಪ ಪೂಜಾರಿ (ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ), ಡಾ. ಬಿ. ಭಾಸ್ಕರ ರಾವ್ (ಕಾಂತಾವರ ಅಂಕಣ ಸಾಹಿತ್ಯ ಪ್ರಶಸ್ತಿ), ವಿವೇಕಾನಂದ ಕಾಮತ್ (ಕಾಂತಾವರ ಕಾದಂಬರಿ ಸಾಹಿತ್ಯ ಪ್ರಶಸ್ತಿ) ಪುರಸ್ಕೃತರಿಗೆ ತಲಾ ನಗದು ರೂ.10,000/- ಸಹಿತ ತಾಮ್ರ ಫಲಕ, ಗೌರವ ಪ್ರದಾನ ಮಾಡಲಾಯಿತು.
ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ನಾಡು ನುಡಿ ಸಾಧಕರ ಕುರಿತಾದ 9 ಹೊಸ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು. ಸಂಸ್ಕೃತಿ ಸಂವರ್ಧನ ಗ್ರಂಥ ಮಾಲೆಯ ಮಟ್ಟಿ ರಾಧಾಕೃಷ್ಣ ರಾವ್ ಕುರಿತ ಕೃತಿ, ಉಡುಪಿಯ ಪ್ರೊ. ಎನ್. ತಿರುಮಲೇಶ್ವರ ಭಟ್ಟರ ‘ಅನ್ಯ ಭಾಷಿಕರಿಗೆ ಕನ್ನಡ ಪಠ್ಯ’ ಕೃತಿ ಅನಾವರಣಗೊಳಿಸಲಾಯಿತು.
ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಮಧ್ಯಾಹ್ನ ಗಮಕಿ ವಿದ್ವಾನ್ ಸುರೇಶ್ ರಾವ್ ಅತ್ತೂರು, ವಾಗ್ಮಿ ಮುನಿರಾಜ ರೆಂಜಾಳರಿಂದ ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯದ ವಚನ ವ್ಯಾಖ್ಯಾನ ಜರುಗಿತು.