ಮಂಗಳೂರು : ಅಖಿಲ ಭಾರತೀಯ ಕೊಂಕಣಿ ಪರಿಷತ್ತು ಆಯೋಜಿಸಿರುವ 25ನೇ ‘ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ’ವು ದಿನಾಂಕ 04-11-2023 ಮತ್ತು 05-11-2023ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು.
ಈ ಸಮ್ಮೇಳನವನ್ನು ದಿನಾಂಕ 04-11-2023ರಂದು ಹಿಂದಿ ಕವಿ, ವಿಮರ್ಶಕ ಉದಯನ್ ವಾಜಪೇಯಿ ಇವರು ಉದ್ಘಾಟಿಸಿ ಮಾತನಾಡುತ್ತಾ “ಆಳುವ ವರ್ಗವು ಸಾಹಿತಿಗಳನ್ನು ಸಮಾಜದ್ರೋಹಿಗಳಂತೆ ಬಿಂಬಿಸುತ್ತಿದೆ. ಸತ್ಯದ ಪ್ರತಿಪಾದನೆ ಮಾಡದಂತೆ ಹಾಗೂ ತಮ್ಮ ನಿಲುವುಗಳನ್ನು ಮಾರ್ಪಾಡು ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಈ ನಡುವೆಯೂ ತಮ್ಮ ಅಸ್ತಿತ್ವ ಕಳೆದುಕೊಳ್ಳಲು ಬಯಸದ ಸಾಹಿತಿಗಳು ಶೋಷಿತರ ಪರ ದನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇರ ಬೇರೆ ಸಂಸ್ಕೃತಿ, ಕಲೆಗಳ ಜತೆಗೆ ಆಯಾ ಪ್ರದೇಶಗಳ ಭಾಷೆಗಳೂ ದೇಶದ ಐಕ್ಯತೆಗೆ ಮೂಲ ಆಧಾರ. ಬೇರೆ ಬೇರೆ ಪ್ರದೇಶಗಳಲ್ಲಿ ಭಾಷೆಗಳು ಬದಲಾದರೂ, ಅವು ಪರಸ್ಪರ ಬೆಸೆದು ನಿರಂತರತೆಯನ್ನು ಕಾಯ್ದುಕೊಂಡಿವೆ. ನಿರ್ದಿಷ್ಟ ಭಾಷೆಯ ಬಗ್ಗೆ ನಮಗೆ ತಿಳಿಯದೇ ಇರಬಹುದು. ಆದರೂ ಅವು ನಮ್ಮಲ್ಲಿ ಪ್ರತ್ಯೇಕತೆಯ ಭಾವ ಮೂಡಿಸುವುದಿಲ್ಲ. ಪ್ರಭುತ್ವವನ್ನು ಪ್ರಶ್ನಿಸುವ ಸೃಜನಾತ್ಮಕತೆಯು ಉಳಿದುಕೊಂಡಿದ್ದರೆ ಸಾಹಿತ್ಯ ಮತ್ತು ಕಲೆಗಳಿಂದ. ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾರ್ಯವನ್ನು ಮಾಡುವುದಿಲ್ಲ. ವಿಜ್ಞಾನವು ನಮಗೆ ಯಾವತ್ತೂ ಯಾಂತ್ರಿಕ ಬದುಕನ್ನು ಕಲಿಸುತ್ತದೆ. ಆದರೆ, ವ್ಯಕ್ತಿಯ ಬದುಕಿಗೆ ಜೀವಂತಿಕೆ ತುಂಬುವುದೇನಿದ್ದರೂ ಸಾಹಿತ್ಯ ಮತ್ತು ಕಲೆ, ಹಿಂಸೆ, ದ್ವೇಷವನ್ನು ವಿರೋಧಿಸುವ, ಸತ್ಯವನ್ನು ಪ್ರತಿಪಾದಿಸುವ ನೈತಿಕತೆಯು ಸಾಹಿತ್ಯ ಮತ್ತು ಕಲೆಯಿಂದ ಜೀವಂತವಾಗಿದೆ” ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಾದಂಬರಿಗಾರ್ತಿ ಹೇಮಾ ನಾಯ್ಕ್ “ಜಾಗತೀಕರಣದಿಂದ ಉಂಟಾದ ಬದಲಾವಣೆಗಳಿಂದ ಭಾಷೆ ಹಾಗೂ ಸಂಸ್ಕೃತಿಯ ಮೇಲೂ ಪರಿಣಾಮ ಉಂಟಾಗಿದೆ. ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ” ಎಂದರು.
‘ಸಮಕಾಲೀನ ಬರಹಗಾರರ ಸವಾಲು’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಬರಹಗಾರ್ತಿ ಮಮತಾ ಜಿ. ಸಾಗರ್ “ಬರಹಗಾರರ ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವುದು ಮುಖ್ಯ. ಪ್ಯಾಲೆಸ್ವೀನಿನಲ್ಲಿ ಬಾಂಬ್ ದಾಳಿ, ಗಾಜಾದಲ್ಲಿ ಮಕ್ಕಳು ಸಾಯುತ್ತಿರುವಾಗ, ಮಹಿಳೆಯರ ಮೇಲೆ ಸಾಮೂಹಿಕ ಬಲತ್ಕಾರ, ಮಕ್ಕಳ ಮೇಲೆ ಅತ್ಯಾಚಾರಗಳು ಆದಾಗಲೂ ಸ್ಪಂದಿಸದೇ ಇರುವವರು ಬರೆಯದೇ ಉಳಿಯುವುದು ಲೇಸು” ಎಂದರು. ವಿದ್ವಾಂಸ ಪುರುಷೋತ್ತಮ ಬಿಳಿಮಲೆ “ನಾವು ಭಾಷೆ ಮತ್ತು ತತ್ವಗಳ ಅವಸಾನವನ್ನು ಕಾಣುತ್ತಿದ್ದೇವೆ. ಭಾಷೆ ಸಾಯುವಾಗ ಬರಹಗಾರರು ಏಕೆ ಸ್ಪಂದಿಸುತ್ತಿಲ್ಲ” ಎಂದು ಪ್ರಶ್ನಿಸಿದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಲಾಯಿತು. ಕೊಂಕಣಿ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಕೊಂಕಣಿ ಲೇಖಕರಾದ ಶಿವರಾಮ್ ಕಾಮತ್. ರಜಯ್ ಪವಾರ್, ವಿಶಾಲ್ ಖಂಡೇಪರ್ಕರ್, ಸರಸ್ವತಿ ದಾಮೋದರ್ ನಾಯ್ಕ್, ಉದಯ್ ದೇಶ್‌ಪ್ರಭು, ಹನುಮಂತ್ ಚೋಪ್ಡೆಕರ್, ವನಧಾ ಸಿನಾಯಿ, ಅಭಯ್ ಕುಮಾರ್ ವೆಲಿಂಗರ್, ಆರ್.ಎಸ್. ಭಾಸ್ಕರ್, ಪಂಡರಿನಾಥ್ ಲೋಟ್ಲಿಕರ್, ವಿಲ್ಸನ್ ಕಟೀಲ್ ಅವರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಹೆನ್ಸಿ ಮೆಂಡೋನ್ಸಾ ಪೆರ್ನಾಲ್, ನಂದಗೋಪಾಲ್, ಅರುಣ್ ಉಭಯಕರ್, ಗೌರೀಶ್ ವರ್ಣೇಕರ್ ಉಪಸ್ಥಿತರಿದ್ದರು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜ ಸ್ವಾಗತಿಸಿ, ಕಾರ್ಯಾಧ್ಯಕ್ಷ ಎಚ್.ಎಂ. ಪೆರ್ನಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷ ಅರುಣ್ ಉಭಯಕರ್ ಹಾಗೂ ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಸಮ್ಮೇಳನಕ್ಕೆ ಶುಭ ಹಾರೈಸಿದರು. ಪರಿಷತ್ತಿನ ಕಾರ್ಯದರ್ಶಿ ಗೌರೀಶ್ ವರ್ಣೇಕರ್ ವಂದಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ, ನವದೆಹಲಿಯ ಕೊಂಕಣಿ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿದರು. ಪ್ರವೇಶ ದ್ವಾರದಿಂದ ಸಭಾಂಗಣದವರೆಗೆ ಭವ್ಯ ಮೆರವಣಿಗೆ ಮತ್ತು ವಾದ್ಯ ವೃಂದದೊಂದಿಗೆ ಕೊಂಕಣಿ ಸಾಹಿತಿಗಳನ್ನು ಕರೆತರಲಾಯಿತು. ನಾನಾ ವಿಚಾರಗೋಷ್ಠಿಗಳು, ಸಂವಾದ, ಸಾಹಿತ್ಯದ ಪ್ರಸ್ತುತಿ, ನಾಟಕ ಪ್ರದರ್ಶನಗಳು ನಡೆದವು.
ದಿನಾಂಕ 05-11-2023ರಂದು ನಡೆದ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಲೇಖಕಿ ಮಮತಾ ಜಿ. ಸಾಗರ್ ಅವರು ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಮಾತನಾಡುತ್ತಾ “ದೇಶದ ಹಲವು ರಾಜ್ಯಗಳಲ್ಲಿ ಬಳಕೆಯಲ್ಲಿರುವ ಕೊಂಕಣಿ ಸಾಹಿತ್ಯವು ಅನ್ಯ ಭಾಷೆಗಳ ಸಾಹಿತ್ಯಕ್ಕಿಂತ ಬಹಳಷ್ಟು ಭಿನ್ನ. ಈ ಭಾಷೆಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ಶೈಲಿಯಲ್ಲಿ ಮಾತನಾಡುತ್ತಾರೆ. ಹಾಗಾಗಿ ಈ ಸಾಹಿತ್ಯವೂ ವೈವಿಧ್ಯದಿಂದ ಕೂಡಿದೆ. ಗೋವಾ, ಕರ್ನಾಟಕ, ಕೇರಳದಲ್ಲಿ ಕೊಂಕಣಿ ಭಾಷಿಕರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಕೊಂಕಣಿ ಸಾಹಿತ್ಯದ ಮೇಲೆ ಇತರ ಸ್ಥಳೀಯ ಭಾಷೆಗಳ ಪ್ರಭಾವವೂ ಇರುವುದನ್ನು ನೋಡಬಹುದು. ಗೋವಾದ ಕೊಂಕಣಿಯಲ್ಲಿ ಅಲ್ಲಿನ ಸಂಸ್ಕೃತಿ, ಪೋರ್ಚುಗೀಸ್ ಆಳ್ವಿಕೆಯ ಇತಿಹಾಸದ ನೆರಳನ್ನು ಕಾಣಬಹುದು. ಪ್ರವಾಸೋದ್ಯಮವೂ ಅಲ್ಲಿನ ಕೊಂಕಣಿ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ಕೇರಳದಲ್ಲಿ ಎಡಪಂಥೀಯ ಸಿದ್ಧಾಂತ ಹಾಗೂ ಅಲ್ಲಿನ ರಾಜಕೀಯ ಆಗು ಹೋಗುಗಳು ಕೊಂಕಣಿಯ ಸಾಹಿತ್ಯದ ಮೇಲೆ ಪ್ರಭಾವ ಬೀರಿವೆ. ಅಂತೆಯೇ ಕರ್ನಾಟಕದಲ್ಲಿ ಕೊಂಕಣಿ ಸಾಹಿತ್ಯ ಬೇರೆಯೇ ರೀತಿಯ ಸ್ಥಳೀಯ ಪ್ರಭಾವಕ್ಕೆ ಒಳಗಾಗಿದೆ. ಭಾರತೀಯ ಭಾಷೆಗಳಲ್ಲಿ ವೈವಿಧ್ಯ ಇರುವುದೂ ಕೂಡಾ ಭಾಷಾ ಏಕತೆಗೆ ಕಾರಣವಾಗಿದೆ. ಇಂತಹ ವೈವಿಧ್ಯ ಇಲ್ಲದೇ ಹೋಗಿದ್ದರೆ ಏಕತೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಏಕತೆಯನ್ನು ರೂಪಿಸುವ ಇಂತಹ ವೈವಿಧ್ಯದ ಬಗ್ಗೆ ಸಂಭ್ರಮ ಪಡಬೇಕು. ಭಾಷೆ ಕೂಡ ಸಂಸ್ಕೃತಿ, ಪರಂಪರೆಯ ಭಾಗ. ರಾಜ್ಯದಲ್ಲೂ ಕನ್ನಡದ ಜೊತೆ ಕೊಂಕಣಿ ಭಾಷೆಯನ್ನೂ ಬೆಳೆಸಲು ನಾವು ಕಟಿಬದ್ಧರಾಗಬೇಕು” ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷರಾದ ಹೇಮಾ ನಾಯ್ಕ್ ಮಾತನಾಡಿ, “ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. ಎರಡು ದಿನಗಳಲ್ಲಿ ಈ ಕೊಂಕಣಿ ಸಾಹಿತ್ಯ ಹಬ್ಬದಲ್ಲಿ ಯುವಜನರೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದನ್ನು ನೋಡಿ, ಕೊಂಕಣಿ ಸಾಹಿತ್ಯ ಮತ್ತಷ್ಟು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವ ಭರವಸೆ ಮೂಡಿದೆ” ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕೊಂಕಣಿ ಸಾಹಿತಿ ರೋನ್ ರೋಚ್ ಕಾಸಿಯಾ, ಕೊಂಕಣಿ ಶಿಕ್ಷಣಕ್ಕೆ ದುಡಿದ ಡಾ.ಕಸ್ತೂರಿ ಮೋಹನ್ ಪೈ ಹಾಗೂ ಕೊಂಕಣಿ ಚಳವಳಿಯಲ್ಲಿ ತೊಡಗಿಸಿಕೊಂಡ ಕುಮಟಾದ ಡಾ.ಶಿವರಾಮ ಕಾಮತ್ ಇವರುಗಳನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಉಪಾಧ್ಯಕ್ಷ ಗೋಕುಲ್ ದಾಸ್ ಪ್ರಭು, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಮೈಕಲ್ ಡಿಸೋಜ, ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ ಹಾಗೂ ಖಜಾಂಚಿ ಶಿರೀಸ್ ಪೈ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ ವಂದಿಸಿ, ಮನೋಜ್ ಫರ್ನಾಂಡಿಸ್ ನಿರೂಪಿಸಿದರು.