ಬಂಟ್ವಾಳ : ಕಾರಿಂಜ ‘ಯಕ್ಷಾವಾಸ್ಯಮ್’ನ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಕಾವಳ ಪಡೂರು ಗ್ರಾಮದ ವಗ್ಗ ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ದಿನಾಂಕ 05-11-2023ರಂದು ಪಚ್ಚಾಜೆಗುತ್ತು ಜಿನರಾಜ ಅರಿಗ ಇವರು ಉದ್ಘಾಟಿಸಿದರು. ಈ ಸಂದರ್ಭ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಗಣೇಶ ಕೊಲಕಾಡಿ ಅವರಿಗೆ 2013ರ ‘ಯಕ್ಷಾವಾಸ್ಯಮ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ಯಕ್ಷಗಾನ ಕಲೆಯಲ್ಲಿ ಜನ ಸಂಸ್ಕೃತಿ ಮತ್ತು ಧರ್ಮವಿದೆ. ಕಲೆಯ ಮೇಲೆ ಅಭಿರುಚಿ ಹೊಂದಿದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಕಲೆ ಮತ್ತು ಕಲಾವಿದರನ್ನು ಬೆಳಸುತ್ತಿರುವ ಯಕ್ಷವಾಸ್ಯಮ್ ಕಾರ್ಯ ಪ್ರಶಂಸನೀಯ” ಎಂದು ಹೇಳಿದರು.
ಗಣೇಶ ಕೊಲಕಾಡಿ ಅವರ ಶಿಷ್ಯ ದೀವಿತ್ ಕೆ.ಎಸ್. ಪೆರಾಡಿ ಅಭಿನಂದನಾ ಮಾತುಗಳನ್ನಾಡಿ, “ಗಣೇಶ ಕೊಲಕಾಡಿ ಅವರು ತಮ್ಮ ಅನಾರೋಗ್ಯದಲ್ಲಿಯೂ ಯಕ್ಷಗಾನದ ಬಗ್ಗೆ ವಿಶೇಷ ಕಾಳಜಿ ವಹಿಸಿ ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ನಿವಾಸಕ್ಕೆ ತೆರಳಿ ಪ್ರಶಸ್ತಿ ನೀಡಲಾಗುವುದು” ಎಂದರು.
ಇದೇ ವೇಳೆ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಉದ್ಯಮಿ ನಾಗೇಶ್ ಶೆಟ್ಟಿ ಬಂಟ್ವಾಳ, ಶ್ರೀ ಶಾರದಾಂಬಾ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಮಧ್ವ ಶಿವಾಜಿ ಬಳಗದ ಅಧ್ಯಕ್ಷ ನಿತಿನ್, ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಕಾವಳಮೂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಯಕ್ಷವಾಸ್ಯಮ್ ಸಂಸ್ಥೆಯ ಮಿಥುನ್ ರಾಜ್ ಭಟ್, ಭಜನಾ ಮಂದಿರ ಅಧ್ಯಕ್ಷ ಬಾಲಕೃಷ್ಣ ಕಾಡಬೆಟ್ಟು, ಯಕ್ಷ ಕೂಟ ಮಧ್ವ ಇದರ ಅಧ್ಯಕ್ಷ ಭಾಸ್ಕರ ಶೆಟ್ಟಿ ಮಧ್ವ, ಹಿರಿಯ ಯಕ್ಷ ಕಲಾವಿದ ದಿವಾಕರ ದಾಸ್ ಕಾವಳಕಟ್ಟೆ ಜನಾರ್ದನ ಭಟ್ ಕಾರಿಂಜ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿ, ಸಂಸ್ಥೆಯ ಸಂಚಾಲಕಿ ಸಾಯಿಸುಮಾ ಎಂ. ನಾವಡ ಕಾರಿಂಜ ವಂದಿಸಿ, ಸುಜಯಾ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಮಕ್ಕಳ ಯಕ್ಷಗಾನ ‘ಗಣಪತಿ ಕೌತುಕ’, ಭಾಗವತಿಕೆ ನಡೆಯಿತು. ಬಳಿಕ ಯಕ್ಷಗಾನ ‘ಅತಿಕಾಯ –ಇಂದ್ರಜಿತು’ ಪ್ರದರ್ಶನ ನಡೆಯಿತು.
ಕಾರಿಂಜ ‘ಯಕ್ಷಾವಾಸ್ಯಮ್’ ವತಿಯಿಂದ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಛಾಂದಸ ಗಣೇಶ ಕೊಲಕಾಡಿಯವರನ್ನು ಅವರ ನಿವಾಸದಲ್ಲಿ ದಿನಾಂಕ 06-11-2023ರಂದು ‘ಯಕ್ಷಾವಾಸ್ಯಮ್’ ಪ್ರಶಸ್ತಿ -2023ನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕಿ ಸಾಯಿಸುಮಾ ಎಂ. ನಾವುಡ, ಮಿಥುನ್ ರಾಜ್ ನಾವುಡ, ಬೆಳ್ಳಾರೆ ಮುಂಜುನಾಥ ಭಟ್, ಅಜಿತ್ ಶೆಟ್ಟಿ, ಜಯರಾಮ್ ಭಟ್, ರೂಪೇಶ್, ಆನಂದ ಶೆಟ್ಟಿ, ಸುಮನಾ ಯಳಚಿತ್ತಾಯ, ರತ್ನಾ ತುಕರಾಮ್ ಉಪಸ್ಥಿತರಿದ್ದರು.
ಅನಾರೋಗ್ಯ ಪೀಡಿತರಾದ ಗಣೇಶ ಕೊಲಕಾಡಿಯವರು ಹಾಸಿಗೆಯಲ್ಲೇ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, “ಯಕ್ಷಾವಾಸ್ಯಮ್ ಕಾರಿಂಜ ಸಂಸ್ಥೆಯು ತನ್ನ ಮನೆಯ ಸದಸ್ಯನೆಂದು ಪರಿಗಣಿಸಿ ಅಪಾರ ಪ್ರೇಮದಿಂದ ಈ ಪ್ರಶಸ್ತಿಯನ್ನು ನೀಡಿರುವುದಕ್ಕೆ ಅಂತರಂಗದಿಂದ ಕೃತಜ್ಞತೆಯನ್ನು ಸಮರ್ಪಿಸುತ್ತಿದ್ದೇನೆ. ಸತ್ಯ, ಧರ್ಮ, ಆರ್ತರ ಬಗ್ಗೆ ಕರುಣೆಯೂ ಸಂಸ್ಥೆಗೆ ಅಪಾರವಾಗಿದೆ. ಕಲೆಯ ಬಗ್ಗೆ ಗೌರವ ಹಿಮಾಲಯದಷ್ಟಿದ್ದು, ಕ್ಯಾನ್ಸರ್ ಕಾಯಿಲೆಗೆ ಸಿಲುಕಿದ ನನ್ನದು ಸಾವಿನೊಂದಿಗಿನ ಹೋರಾಟ ! ಆರೈಕೆಯಿಂದ ಮಾತ್ರ ನಾನು ಈ ಹೋರಾಟದಲ್ಲಿ ಜಯವನ್ನು ಪಡೆಯಬಹುದೆಂಬ ಒಂದು ನಿರೀಕ್ಷೆ ಹೊಂದಿದ್ದೇನೆ. ಈ ದುಸ್ಥಿತಿಯಲ್ಲಿ ದಿಕ್ಕೇ ತೋಚದಂತಿರುವ ನನಗೆ ಸಂಸ್ಥೆ ಆಪ್ತ ಬಂಧುವಾಗಿ ಹಣದ ಆಸರೆಯಾದಿರಿ. ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆ. ಕಷ್ಟದಲ್ಲಿರುವಾಗ ಅನ್ಯರನ್ನು ಕೈ ಹಿಡಿವ ಅಂತಃಕರಣವಿರುವ ಜನ ಈ ಕಾಲದಲ್ಲಿ ದುರ್ಲಭವಾಗಿದ್ದು, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರ ಪವಿತ್ರ ಹೃದಯವಾಗಿದೆ. ಕೃತಿಯಲ್ಲಿ ಶೂನ್ಯವಾಗಿ ಭಾಷಣದಲ್ಲಿ ದಾನ, ದಯೆಯ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿರುವವರು ನಮ್ಮ ಸುತ್ತ ಮುತ್ತ ಸಾವಿರಾರು ಮಂದಿ ಇದ್ದಾರೆ. ಆದರೆ ನುಡಿದಂತೆ ನಡೆವ, ದಿಕ್ಕಿಲ್ಲದ ರೋಗಿಗಳಿಗೆ ಸಹಾಯ ಮಾಡುವ ಮಹಾತ್ಮರು ದುರ್ಲಭ ಎನ್ನಬಹುದು” ಎಂದ ಅವರು ಯಕ್ಷಾವಾಸ್ಯಮ್ ಸಂಸ್ಥೆಯು ಅಪೂರ್ವ ಸಾಧನೆಯ ಮೂಲಕ ಇನ್ನಷ್ಟು ಕೀರ್ತಿಯನ್ನು ಪಡೆಯಲಿ ಎಂದು ಶುಭ ಹಾರೈಸಿದರು.