ಮಡಿಕೇರಿ : ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ಎನ್.ಎಸ್.ಎಸ್. ಘಟಕದ ಉದ್ಘಾಟನೆಯು ದಿನಾಂಕ 07-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಜ್ಹಮೀರ್ ಅಹಮದ್ ಮಾತನಾಡುತ್ತಾ “ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದ್ದು, ವಿಶ್ವ ಭಾಷೆಗಳ ರಾಣಿಯಾಗಿದೆ. ನಮ್ಮ ಮಾತೃ ಭಾಷೆ ಅನೇಕ ಇದ್ದರೂ ಕನ್ನಡ ಭಾಷೆ ನಮ್ಮನ್ನು ಸಾಮಾಜಿಕವಾಗಿ ಒಗ್ಗೂಡಿಸುತ್ತದೆ. ಬಿ.ಎಂ.ರೈಸ್, ಕಿಟೆಲ್, ಮೊಗ್ಲಿಂಗ್ ರಂತಹ ವಿದೇಶಿಗರು ಕನ್ನಡ ಭಾಷೆಗೆ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷಾ ಅಭಿಮಾನವನ್ನು ಪ್ರತಿಯೊಬ್ಬ ಕನ್ನಡಿಗನೂ ಬೆಳೆಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಆನಂದ್ ಮಾತನಾಡಿ, “ಕನ್ನಡ ಭಾಷೆಯ ಸೊಗಡು ನಮ್ಮೆಲ್ಲರ ಹೆಮ್ಮೆಯಾಗಿದ್ದು, ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ” ಎಂದರು. ಕಾಲೇಜಿನ ಎನ್.ಎಸ್.ಎಸ್ ಘಟಕವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ.ವೀಣಾ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ಸುನಿಲ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಂಬಿಕಾ, ಎನ್.ಎಸ್.ಎಸ್. ಅಧಿಕಾರಿ ಸೋಮಣ್ಣ ಹಾಜರಿದ್ದರು. ವಿದ್ಯಾರ್ಥಿನಿ ರಕ್ಷಿತಾ, ಶುಭಮಂಗಳ ನಿರೂಪಿಸಿ, ಸುನಿಲ್ ಕುಮಾರ್ ವಂದಿಸಿದರು.