ಮಂಗಳೂರು : ಅಶೋಕನಗರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ‘ಬೆಳ್ಳಿಹಬ್ಬದ ಸಂಭ್ರಮ 2023-24’ದ ಪ್ರಯುಕ್ತ ನಡೆಯುವ ಸರಣಿ ಕಾರ್ಯಕ್ರಮವು ದಿನಾಂಕ 05-11-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಇದರ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಡಿ. ಗುರುರಾಜ ತಂತ್ರಿ ಅವರು ‘ಆರೋಗ್ಯದಲ್ಲಿ ಆಯುರ್ವೇದದ ಮಹತ್ವ’ದ ಕುರಿತು ತಿಳಿಸಿದರು. ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ ಮಾತನಾಡಿ, “ಸಮಾಜದಲ್ಲಿ ನಾವು ಹೇಗಿರಬೇಕು ಎಂದರೆ ಇತರರು ನಮ್ಮನ್ನು ಅನುಸರಿಸಿಕೊಂಡು ಇರುವಂತೆ ಇತರರಿಗೆ ಮಾರ್ಗದರ್ಶಕರಾಗಿರಬೇಕು” ಎಂದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, “ಸಂಘ ಸಂಸ್ಥೆಗಳ ಚಟುವಟಿಕೆಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಾವು ಒಂದು ವ್ಯವಸ್ಥೆಯಲ್ಲಿ ಸೇರಿಕೊಂಡಾಗ ವ್ಯವಸ್ಥೆಯ ಭಾಗವಾಗಿ ಹೋದಾಗ ಸಾಧನೆ ಮಾಡುವುದು ಸಾಧ್ಯ” ಎಂದರು. ಕುಡುಪು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಸೇವಾ ಟ್ರಸ್ಟಿನ ಅಧ್ಯಕ್ಷ ಸುರೇಶ್ ರಾವ್ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿ ಕೃಷ್ಣ ರಾವ್, ಶ್ರೀ ಕೃಷ್ಣ ಮಂದಿರದ ಮುಂದಿನ ಯೋಜನೆಗಳ ಮತ್ತು ಕಾರ್ಯಕ್ರಮಗಳ ವಿವರ ನೀಡಿದರು. ಸಾವಿತ್ರಿ ರಾವ್ ಪ್ರಾರ್ಥಿಸಿ, ಉದಯ ಕುಮಾರಿ ನಿರೂಪಿಸಿ, ಸುಬ್ರಹ್ಮಣ್ಯ ರಾವ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸದ್ಗುಣ ಐತಾಳ್ ಮತ್ತು ಬಳಗದವರಿಂದ ಮ್ಯಾಂಡೋಲಿನ್ ಮತ್ತು ಕೊಳಲು ಜುಗುಲ್ಬಂದಿ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಕೊಳಲಿನಲ್ಲಿ ಸಾಯಿ ಸಂಕೇತ್, ತಬ್ಲಾದಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು, ರಿದಂತಾಳದಲ್ಲಿ ಕಾರ್ತಿಕ್ ಭಟ್ ಇನ್ನಂಜೆ ಸಹಕರಿಸಿದರು.