ಉಡುಪಿ : ಯಕ್ಷಗಾನ ಕಲಾರಂಗದ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-11-2023 ಶನಿವಾರ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಸಂಜೆ 5.00 ಗಂಟೆಗೆ ಜರಗಲಿದೆ. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿರುವರು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀ ಕೆ. ವಾಸುದೇವ ಆಸ್ರಣ್ಣರು ಕಲಾವಿದರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿರುವರು.
ಕಟೀಲು ದೇವಳದ ಅಧ್ಯಕ್ಷರು ಹಾಗೂ ಆನುವಂಶಿಕ ಮೊಕ್ತೇಸರರಾಸ ಶ್ರೀ ಕೆ. ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕರುಗಳಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೆಂಕಟರಮಣ ಆಸ್ರಣ್ಣ, ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬೆಂಗಳೂರಿನ ಶ್ರೀ ಕೆ. ಸದಾಶಿವ ಭಟ್, ದುಬೈಯ ಶ್ರೀ ಪ್ರಭಾಕರ ಸುವರ್ಣ, ಶ್ರೀ ಕೆ.ಎಂ.ಭಟ್ ಕಡತೋಕಾ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಬಿ. ಕರ್ಕೇರಾ ಅಭ್ಯಾಗತರಾಗಿ ಪಾಲುಗೊಳ್ಳಲಿರುವರು.
ಇಪ್ಪತ್ತೊಂದು ಮಂದಿ ಹಿರಿಯ ಕಲಾವಿದರಿಗೆ ತಲಾ ರೂ.20,000/- ನಗದು ಪುರಸ್ಕಾರದ ಪ್ರಶಸ್ತಿ, ರೂ.50,000/- ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಸೋಂದಾ ಶ್ರೀಸ್ವರ್ಣವಲ್ಲಿ ಮಠದ ಯಕ್ಷಶಾಲ್ಮಲಾ ಸಂಸ್ಥೆಗೆ ಹಾಗೂ ಯಕ್ಷಚೇತನ ಪ್ರಶಸ್ತಿ ಸಂಸ್ಥೆಯನ್ನು ಹಿರಿಯ ಕಾರ್ಯಕರ್ತರಾದ ವಿಜಯ ಕುಮಾರ್ ಮುದ್ರಾಡಿ ಇವರಿಗೆ ಪ್ರದಾನ ಮಾಡಲಾಗುವುದು. ಸಮಾರಂಭದ ಪೂರ್ವದಲ್ಲಿ ಅಪರಾಹ್ನ 3.00ರಿಂದ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇದರ ಯಕ್ಷಕಿಶೋರರಿಂದ ಯಕ್ಷಗಾನ ‘ಶಶಿಪ್ರಭಾ ಪರಿಣಯ’ ಪ್ರದರ್ಶನಗೊಳ್ಳಲಿದೆ. ಸಮಾರಂಭದ ಬಳಿಕ ರಾತ್ರಿ 7.00ರಿಂದ ತೆಂಕು-ಬಡಗು-ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಯಕ್ಷಗಾನ-ರಾಗ ಸಂಯೋಗ ಜರಗಲಿದೆ. ರಾತ್ರಿ 8.00ರಿಂದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ರೂಪಕ ‘ಶ್ರೀ ಮನೋಹರ ಸ್ವಾಮಿ ಪರಾಕು’ ಪ್ರಸ್ತುತಗೊಳ್ಳಲಿದೆ.