ಉಡುಪಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸರಕಾರಿ ಪದವಿ ಪೂರ್ವ ಕಾಲೇಜು ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸರ ಕುರಿತಾದ ವಿಸ್ತರಣಾ ಉಪನ್ಯಾಸ ಮಾಲಿಕೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 10-11-2023ರಂದು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ ಮತ್ತು ಟಿ.ಎಂ.ಎ. ಪೈ ಶಿಕ್ಷಣ ವಿದ್ಯಾಲಯದ ಸಮನ್ವಯಾಧಿಕಾರಿಗಳಾದ ಡಾ. ಎ. ಮಹಾಬಲೇಶ್ವರ ರಾವ್ ಅವರು ‘ಕನಕದಾಸರ ಹರಿಭಕ್ತಿ ಸಾರ ಮರುವಿವೇಚನೆ’ ಕುರಿತಾಗಿ ವಿವರವಾದ ಉಪನ್ಯಾಸ ನೀಡಿದರು. ಕನಕದಾಸರ ಹರಿ ಭಕ್ತಿ ಸಾರವನ್ನು ಮುದ್ರಣ ರೂಪದಲ್ಲಿ ಹೊರತರುವಲ್ಲಿ ಪಾಶ್ಚಾತ್ಯ ವಿದ್ವಾಂಸರಾದ ಡಾ. ಹರ್ಮನ್ ಮೊಗ್ಗಿಂಗ್ ಕೊಡುಗೆಗಳನ್ನು ಸ್ಮರಿಸುತ್ತಾ ಕೃತಿಯ ಮೂಲ ಕರ್ತೃ ಕುರಿತಾಗಿರುವ ಜಿಜ್ಞಾಸೆಗಳನ್ನು ಹೇಳುವುದರ ಜೊತೆಗೆ ಹರಿಭಕ್ತಿಸಾರದಲ್ಲಿ ವ್ಯಕ್ತವಾದ ಕನಕ ಚಿಂತನೆಗಳ ಸಮಗ್ರ ಮಾಹಿತಿ ನೀಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಜಗದೀಶ ಶೆಟ್ಟಿ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿದರೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಭಕ್ತಿಮಾರ್ಗದ ಮೂಲಕ ದೇವರನ್ನೊಲಿಸಿಕೊಂಡ ಕನಕ ಚಿಂತನೆಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ಲೇಷಿಸುವ ಅಗತ್ಯತೆಯನ್ನು ತಿಳಿಸಿದರು. ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಎನ್.ಟಿ. ಭಟ್ ಉಪಸ್ಥಿತರಿದ್ದರು. ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕರಬ ವಂದನಾರ್ಪಣೆಗೈದರು. ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರತ್ನಮಾಲಾ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.