ಮಂಗಳೂರು : ಬೆಂದೂರಿನ ಸಂತ ಆ್ಯಗ್ನೆಸ್ ಕಾಲೇಜಿನಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ರಾಷ್ಟ್ರೀಯ ಮಟ್ಟದ ಒಂದು ದಿನದ ಸಾಂಸ್ಕೃತಿಕ ಉತ್ಸವ ‘ಸೆಲೆಸ್ತಿಯಾ-2023’ನ್ನು ದಿನಾಂಕ 31-10-2023ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಇವರು ಮಾತನಾಡುತ್ತಾ “ವಿಶ್ವದ ಕೆಲವು ರಾಷ್ಟ್ರಗಳು ಪರಸ್ಪರ ಯುದ್ಧ ಸಾರುತ್ತಿದ್ದರೂ ಭಾರತ ಇಂದು ಸುರಕ್ಷಿತವಾಗಿದೆ, ನಾವೆಲ್ಲ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಸೈನಿಕರು. ತಮ್ಮ ಜೀವವನ್ನು ಪಣಕ್ಕಿಟ್ಟು, ದೇಶಕ್ಕಾಗಿ ಸೇವೆ ಸಲ್ಲಿಸುವ ಅವರೇ ನಮ್ಮ ಪಾಲಿಗೆ ಅವರೇ ನಿಜವಾದ ಹೀರೋಗಳು. ಜೀವನದಲ್ಲಿ ಎಲ್ಲರಿಗೂ ಅವಕಾಶಗಳು ಬರುತ್ತವೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಅದೃಷ್ಟ ಎನ್ನುವುದು ಒಂದು ಭಾಗ ಮಾತ್ರ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಾರಣ ‘ಡಾಕ್ಟರ್’ ಆಗಬೇಕು ಅಂದುಕೊಂಡಿದ್ದವ ಇಂದು ‘ಆ್ಯಕ್ಟರ್’ ಆಗಿ ಅಭಿಮಾನಿಗಳನ್ನು ಪಡೆದಿದ್ದೇನೆ. ಹೆತ್ತವರು, ಶಿಕ್ಷಕರಿಗೆ ವಿದ್ಯಾರ್ಥಿಗಳು ಗೌರವ ನೀಡಬೇಕು, ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಿದರೆ ಹೆಮ್ಮೆ ಪಡುವವರು ಅವರು ಮಾತ್ರ” ಎಂದು ಹೇಳಿದರು. ಇದೇ ವೇಳೆ ಅವರನ್ನು ಕಾಲೇಜಿನ ವತಿಯಿಂದ ಸಮ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಎಂ.ವೆನಿಸ್ಸಾ ಎ.ಸಿ. ಮಾತನಾಡಿ “ಸಂತ ಆ್ಯಗ್ನೆಸ್ ಶಿಕ್ಷಣ ಸಂಸ್ಥೆ 100 ವರ್ಷಗಳಿಂದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸಶಕ್ತೀಕರಣ ಮಾಡುತ್ತಿದ್ದು, ಅವರ ಜೀವನಕ್ಕೊಂದು ಅಡಿಪಾಯ ನಿರ್ಮಿಸಿಕೊಡುತ್ತಿದೆ. ಇಂದು ಶಿಕ್ಷಣ ತರಗತಿಗೆ ಸೀಮಿತವಾಗಿಲ್ಲ, ನಾಲ್ಕು ಗೋಡೆಗಳನ್ನು ದಾಟಿ ಹೊರಗೆ ಬಂದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದ್ದು, ಪಾಠ, ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಯ ಪರಿಪೂರ್ಣ ಬೆಳವಣಿಗೆ ಸಾಧ್ಯ” ಎಂದರು.
ದುಬೈ ಉದ್ಯಮಿ ಮೈಕಲ್ ಡಿ’ಸೋಜಾ, ಪದವಿ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೈನಿ ಪಿಂಟೋ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅದಿತಿ ಎಚ್.ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕಿ ಡಾ. ಗೀತಾ ಪಿಂಟೋ ಸ್ವಾಗತಿಸಿ, ಸಹ ಸಂಚಾಲಕಿ ಡಾ. ಸಬೀನಾ ಡಿ’ಸೋಜಾ ವಂದಿಸಿ, ಮುಖ್ಯ ಗ್ರಂಥಪಾಲಕಿ ಡಾ. ವಿಶಾಲಾ ಸಮ್ಮಾನ ಪತ್ರ ವಾಚಿಸಿದರು. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ನಡೆಯುವ 15 ವಿವಿಧ ಸ್ಪರ್ಧೆಗಳಲ್ಲಿ ಕೇರಳ, ಗೋವಾ, ಮೈಸೂರು ಸಹಿತ ವಿವಿಧೆಡೆಯ ಸುಮಾರು 53 ಕಾಲೇಜುಗಳು 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವವಹಿಸಿದ್ದರು.