ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಸಹಯೋಗದೊಂದಿಗೆ ಬೆಟ್ಟಂಪಾಡಿಯಲ್ಲಿ ನಡೆದ ‘ಬಸವಣ್ಣ ಮತ್ತು ಕನಕದಾಸರ ಇಹ ಪರ ಲೋಕದೃಷ್ಟಿ’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ 8-11-2023ರಂದು ನಡೆಯಿತು.
ವಿಚಾರ ಸಂಕಿರಣದಲ್ಲಿ ಸಮಾರೋಪ ಭಾಷಣ ಮಾಡಿದ ಆಂಧ್ರಪ್ರದೇಶದ ಕುಪ್ಪಂ ವಿವಿಯ ಮಾನವಿಕ ನಿಕಾಯದ ಡೀನ್ ಡಾ. ಶಿವಕುಮಾರ ಭರಣ್ಯ “ಹಿಂದಿನಿಂದಲೂ ಕನ್ನಡಿಗರು ಮೌಲ್ಯಗಳಿಗೆ ಗೌರವ ಕೊಟ್ಟವರು. ಬಹಿರಂಗಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಗಮನ ಹರಿಸಿದವರು. ಕನ್ನಡದ ಶರಣ ಮತ್ತು ದಾಸ ಪರಂಪರೆ ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಸಮಾನತೆಯ ತತ್ವವನ್ನು ಭೋದಿಸಿದ್ದಾರೆ. ಈ ವಿವೇಕ ಸದಾ ನಮಗೆ ಮಾರ್ಗದರ್ಶಿ.” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ “ಕನಕ ಮತ್ತು ಬಸವಣ್ಣನವರನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವಾಗ ಔಚಿತ್ಯಪೂರ್ಣ ಅಂತರವನ್ನು ಕಾಪಾಡಿಕೊಳ್ಳಬೇಕು. ನಮ್ಮ ಪೂರ್ವಾಗ್ರಹಗಳನ್ನು ಅಲ್ಲಿ ತುಂಬುವಂತಾಗಬಾರದು. ಸತ್ಯವನ್ನು ಅರಿಯುವುದಕ್ಕೆ ಅನೇಕ ದಾರಿಗಳಿವೆ ಎಂಬ ಜೈನರ ಅನೇಕಾಂತವಾದ ನಮಗೆ ಆದರ್ಶವಾಗಬೇಕು.” ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಮಾತನಾಡಿ “ನಮ್ಮ ಪರಂಪರೆಯನ್ನು ಹೊಸತಲೆಮಾರಿಗೆ ಪ್ರಸ್ತುತಗೊಳಿಸುವ, ನಮ್ಮ ಕಾಲದ ಸವಾಲುಗಳಿಗೆ ಅಲ್ಲಿಂದ ಸಿಗುವ ಪ್ರೇರಣೆಗಳ ಕುರಿತು ಚಿಂತಿಸಬೇಕಿದೆ.” ಎಂದರು.
ವಿಚಾರ ಸಂಕಿರಣದಲ್ಲಿ ಬಸವಣ್ಣ ಮತ್ತು ಕನಕದಾಸ ಇಹ ಪರ ಲೋಕದೃಷ್ಟಿ ಆಶಯಗೋಷ್ಠಿಯಲ್ಲಿ ಪ್ರೊ. ಮೊರಬದ ಮಲ್ಲಿಕಾರ್ಜುನ ಮೈಸೂರು ಹಾಗು ಡಾ. ಸೌಮ್ಯ ಹೆಚ್.ಕೇಂದ್ರಿಯ ವಿವಿ ಕಾಸರಗೋಡು ಇವರು ವಿಚಾರ ಮಂಡಿಸಿದರು. ಬಸವಣ್ಣ ಕನಕದಾಸ ಸಮಕಾಲೀನ ಸಂವಾದ ಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಉಡುಪಿಯ ಡಾ.ಗಣನಾಥ ಎಕ್ಕಾರು, ಮಂಗಳೂರು ವಿವಿ ಕನ್ನಡ ಸಹಪ್ರಾಧ್ಯಾಪಕ ಡಾ.ನಾಗಪ್ಪ ಗೌಡ.ಆರ್, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರ್ ಮಾತನಾಡಿದರು. ಬಳಿಕ ನಡೆದ ಪ್ರಬಂಧ ಮಂಡನಾ ಗೋಷ್ಠಿಯಲ್ಲಿ ಡಾ.ಶ್ರೀಶ ಕುಮಾರ ಎಂ.ಕೆ ಪುತ್ತೂರು, ಡಾ.ಕೃಷ್ಣಾನಂದ, ಪಿ.ಎಂ ಬೆಳ್ತಂಗಡಿ, ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಡಾ.ಮಹಾವೀರ ಜೈನ್ ಇಚ್ಲಂಪಾಡಿ ಭಾಗವಹಿಸಿದ್ದರು.
ವಿಚಾರಸಂಕಿರಣಕ್ಕೆ ಒಟ್ಟು 34 ಸಂಶೋಧನಾ ಪ್ರಬಂಧಗಳು ಬಂದಿದ್ದು ಅದರಲ್ಲಿ ಡಾ. ಮೈತ್ರಿ ಭಟ್ ಪುತ್ತೂರು, ಡಾ.ಶ್ರೀಪತಿ ಹಳಗುಂದ, ಡಾ. ಹೆಚ್.ಕೆ ವೆಂಕಟೇಶ ಹಾಸನ ಹಾಗೂ ಡಾ. ವೀಣಾ ಮೈಸೂರು ಇವರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ನೀಡಲಾಯಿತು. ಬೆಟ್ಟಂಪಾಡಿ ಕಾಲೇಜಿನ ಕನ್ನಡ ಉಪನ್ಯಾಸಕಿ ಪದ್ಮಜಾ ನಿರೂಪಿಸಿ, ಗ್ರಂಥಪಾಲಕ ರಾಮ. ಕೆ ವಂದಿಸಿದರು.