ಮಡಿಕೇರಿ : ಕರ್ನಾಟಕ ಸಂಭ್ರಮ 50 ಇದರ ಪ್ರಯುಕ್ತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ರಾಜೇಶ್ವರಿ ಶಿಕ್ಷಣ ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ವಿಜಯ ವಿಷ್ಣುಭಟ್ ಮತ್ತು ದಿ.ಡಿ.ಜೆ.ಪದ್ಮನಾಭ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 18-11-2023ರ ಶನಿವಾರದಂದು ಮಡಿಕೇರಿಯ ರಾಜೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
‘ಕೊಡಗಿನ ಮಹಿಳಾ ಸಾಹಿತಿಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿಮುತ್ತಣ್ಣ ಅವರು “ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಬರಹಗಾರರು ಮತ್ತಷ್ಟು ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕೊಡಗಿನ ಗೌರಮ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರಾರಂಭವಾದ ನಂತರ ಕೊಡಗು ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಸಂಖ್ಯೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಮಹಿಳಾ ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಸಾಹಿತ್ಯದ ಮೂಲಕ ಸಮಾಜದ ಆಗುಹೋಗುಗಳನ್ನು ಅಭಿವ್ಯಕ್ತಪಡಿಸಬೇಕು. ಸಾಹಿತ್ಯವು ಓದುಗರ ಮನಸ್ಸನ್ನು ತಲುಪಬೇಕು. ಆ ನಿಟ್ಟಿನಲ್ಲಿ ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸಬೇಕು. ಆಧುನಿಕ ಸಮಾಜದಲ್ಲಿಯೂ ಸಹ ಆತ್ಮಚರಿತ್ರೆಯಲ್ಲಿ ಪುರುಷರಿಗೆ ಸಿಕ್ಕ ಪ್ರಾಮುಖ್ಯತೆ ಮಹಿಳಾ ಬರಹಗಾರರಿಗೆ ದೊರೆತಿಲ್ಲ. ಪುರುಷ ಮತ್ತು ಮಹಿಳೆಯರು ಸಮಾನರಾಗಿದ್ದು, ಪ್ರತಿಯೊಬ್ಬರನ್ನು ಗೌರವಿಸಬೇಕು.” ಎಂದರು.
ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಕೆ.ಜಯಲಕ್ಷ್ಮೀ ಅವರು ಕೊಡಗಿನ ಜನಪದ ಹಿನ್ನೆಲೆ ಕುರಿತು ಮಾತನಾಡಿ “ಕೊಡಗು ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಹೊಂದಿದೆ. ಕೊಡಗು ಜಿಲ್ಲೆಯಲ್ಲಿ ಹಿರಿಯರನ್ನು ಗೌರವಿಸುವುದು, ಐನ್‍ಮನೆ ಸಂಸ್ಕೃತಿ, ಮದುವೆ ಪದ್ಧತಿ, ಕೈಮುಹೂರ್ತ, ಹುತ್ತರಿ, ಹೀಗೆ ಸಂಸ್ಕೃತಿ, ಸಂಪ್ರದಾಯ ಹಾಗೂ ಜಾನಪದ ವಿಶೇಷತೆಯನ್ನು ಕಾಣಬಹುದಾಗಿದೆ. ಎಂದು ತಿಳಿಸಿದರು.
ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ದಾಕ್ಷಾಯಣಿ ವಾಸುದೇವ ಅವರು ಮಾತನಾಡಿ “ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಸಾಹಿತ್ಯ, ಭಾಷೆ ಅಭಿವೃದ್ಧಿ ಸಾಧ್ಯ. ನಾಡಿನ ಭಾಷೆ ಉಳಿಸಿ ಬೆಳೆಸುವುದರೊಂದಿಗೆ ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು.” ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ “ವಿದ್ಯಾರ್ಥಿಗಳು ಕವಿ ಮತ್ತು ಸಾಹಿತಿಗಳ ಹೆಸರನ್ನು ತಿಳಿದುಕೊಳ್ಳುವಂತಾಗಬೇಕು. ಅವರ ಲೇಖನ ಹಾಗೂ ಕಥೆಗಳನ್ನು ಅಧ್ಯಯನ ಮಾಡಬೇಕು. ಶಿಕ್ಷಕರೇ ಸಾಹಿತಿಗಳಾಗಿದ್ದು ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಸಾಹಿತ್ಯ ಬರವಣಿಗೆಗೆ ಪ್ರೋತ್ಸಾಹಿಸಬೇಕು.“ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಮನೆ ಹಾಗೂ ಮನವನ್ನು ತಲುಪುವ ಕೆಲಸ ಮಾಡಲಾಗುತ್ತಿದೆ.” ಎಂದರು.
ರಾಜೇಶ್ವರಿ ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಕೆ.ಪಿ.ಮಂದಣ್ಣ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಅಂಬೆಕಲ್ ನವೀನ್, ಕುಡೆಕಲ್ ಸಂತೋಷ್, ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ದಿವ್ಯಾ ಅರೂರು, ಪ್ರೇಮ ರಾಘವಯ್ಯ, ಚುಮ್ಮಿ ದೇವಯ್ಯ, ಚಂದ್ರಶೇಖರ್, ವಾಸು ರೈ ಹಾಗೂ ರೇಣುಕಾ ಕಿರಣ್ ಉಪಸ್ಥಿತರಿದ್ದರು.