ಮಂಗಳೂರು : ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ದಿನಾಂಕ 18-11-2023ರಂದು ಜರಗಿದ ತುಳು ಕೂಟ (ರಿ) ಕುಡ್ಲದ ಬಂಗಾರ್ ಪರ್ಬ ವೈಭವ ಸರಣಿ -09ರ ‘ತುಳುವೆರೆ ತುಡರ ಪರ್ಬೊ’ ಕಾರ್ಯಕ್ರಮವನ್ನು ಅಗರಿ ಶ್ರೀ ರಾಘವೇಂದ್ರ ರಾವ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ತುಳುವಿನಲ್ಲಿ ಪರಂಪರಾನುಗತ ತುಳು ಮಾತನಾಡಲು ಕಷ್ಟವಾದರೂ ನಾವು ಸಮಯ – ಸಂದರ್ಭದಲ್ಲಿ ತುಳು ಭಾಷೆಯನ್ನಾಡಲೇ ಬೇಕಾಗುತ್ತದೆ. ಕೆಲವೊಮ್ಮೆ ತಪ್ಪಿದರೂ ಅದನ್ನು ತಿದ್ದಿಕೊಂಡು ತುಳು ನಮ್ಮದು ಎಂಬ ವಿಶೇಷ ಮಮತೆಯಿಟ್ಟು ಬೆಳಸೋಣ” ಎಂಬ ಸಂದೇಶವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ. ಇದರ ಜನರಲ್ ಮ್ಯಾನೇಜರ್ ಶ್ರೀ ಭಾಸ್ಕರ ಸಾಲ್ಯಾನರು “ನಾವು ತುಳುವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವಾದರೂ ನಾವು ಭಾಷೆಯನ್ನು ಅಷ್ಟಾಗಿ ದುಡಿಸಿಕೊಂಡಿಲ್ಲ. ಎಷ್ಟೇಷ್ಟೋ ಕವಿಗಳು, ಸಾಹಿತಿಗಳು ಬೆಳೆದರೂ ಭಾಷೆ ಹಿಂದುಳಿದಿದೆ. ನಾವು ಗ್ರಾಂಥಿಕವಾದ ತುಳು ಮಾತನಾಡಲು ಅಸಾಧ್ಯವಾದರೂ ನಮ್ಮ ಮನೆಯ ಭಾಷೆಯಾಗಿ ತುಳುವನ್ನು ಸ್ವೀಕರಿಸಬೇಕು. ಖಂಡಿತಾ ದೈನಂದಿನ ಚಟುವಟಿಕೆಗಳಲ್ಲಿ, ಪರಸ್ಪರ ಸಂಭಾಷಣೆಗಳಲ್ಲಿ ತುಳು ಬಳಕೆಯಾಗಬೇಕು. ಅಂತಹಾ ಸ್ಥಿತಿ, ಪರಿಸರ, ಪರಿಸ್ಥಿತಿ ಇದ್ದಾಗ ಮಾತ್ರ ತುಳು ಭಾಷೆಯ ಬೆಳವಣಿಗೆ, ಉಳಿವಿಗೆ ಸಾಧ್ಯ” ಎಂದು ತುಳು ಭಾಂಧವರಿಗೆ ಕರೆ ನೀಡಿದರು.
“ತುಳು ಈಗ ಬಹಳ ಪರಿಚಿತವಾದ ಭಾಷೆಯಾಗಿದೆ. ತುಳು ಅರಿಯದವರ ಸಂಖ್ಯೆ ವಿರಳ. ಉತ್ತರ ನೀಡಲು ಅಸಮರ್ಥರಾದರೂ ಭಾಷೆಯನ್ನು ಮನನ ಮಾಡಿಕೊಳ್ಳುತ್ತಾರೆ. ಇದು ತುಳು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಧನಾತ್ಮಕ ಅಂಶ. ನಾವು ಎಲ್ಲೇ ಹೋಗಲಿ ಅಲ್ಲಿಗೆಲ್ಲಾ ತುಳುವನ್ನು ಒಯ್ಯೋಣ. ತುಳು ಕೂಟ ನಡೆಸುವ ಈ ಯಜ್ಞದಲ್ಲಿ ನಾವೆಲ್ಲರೂ ಕರ ಜೋಡಿಸೋಣ. ಶ್ರದ್ಧೆಯಿಂದ ತುಳು ತೇರನ್ನು ಎಳೆಯೋಣ” ಎ೦ದು ತುಳು ಕೂಡ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ತುಳುವರಲ್ಲಿ ಅರಿಕೆ ಮಾಡಿದರು.
ವಿದ್ಯಾದಾಯಿನೀ ಪ್ರೌಢ ಶಾಲಾ ಸಂಚಾಲಕ ಶ್ರೀ ಸುಧಾಕರ ರಾವ್ ಪೇಜಾವರರು ಶುಭಾಶಂಸನೆಗೈದರು. ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವೆಂಕಟ್ರಮಣ ಭಟ್ಟರು ತುಳುವರ ದೀಪಾವಳಿ, ನರಕ ಚತುರ್ದಶಿ, ಗೋಪೂಜೆ, ಬಲಿ ಪಾಡ್ಯಮಿಯ ಬಗ್ಗೆ ಉಪನ್ಯಾಸವಿತ್ತರು. ತುಳು ಕೂಟದ ಖಚಾಂಚಿ ಚಂದ್ರಶೇಖರ ಸುವರ್ಣ, ಪಿ. ಗೋಪಾಲಕೃಷ್ಣ, ಸದಸ್ಯರಾದ ರಮೇಶ ಕುಲಾಲ್ ಬಾಯಾರ್, ವಿಶ್ವನಾಥ ಪೂಜಾರಿ, ವಿಜಯ ಕುಮಾರ್ ಕುಲಾಲ್, ಹೇಮಾ ನಿಸರ್ಗ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವರ್ಕಾಡಿ ಶ್ರೀ ರವಿ ಅಲೆವೂರಾಯ ಸಭೆ ನಿರ್ವಹಿಸಿದರು. ಉಪಾಧ್ಯಕ್ಷ ಲ. ಜೆಪ್ಪು ವಿಶ್ವನಾಥ ಶೆಟ್ಟಿ ಪ್ರಸ್ತಾವನೆಗೈದು, ಹಿರಿಯ ಅಧ್ಯಾಪಕರಾದ ವಸಂತ ಕುಮಾರ್ ಧನ್ಯವಾದವಿತ್ತರು. ಸಂಸ್ಕೃತ ಅಧ್ಯಾಪಕರಾದ ದಿವಸ್ಪತಿಯವರು ಅತಿಥಿ ಗಣ್ಯರಿಗೆ ಸ್ಮರಣಿಕೆಗೆಳನ್ನು ನೀಡಿ ಗೌರವಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿನಿಯರಿಂದ ಹಾಡುಗಳು, ತೋನ್ಸೆ ಶ್ರೀ ಪುಷ್ಕಳ ಕುಮಾರ್ ಮತ್ತು ಬಳಗದಿಂದ ‘ತುಳು ಭಾವಗೀತೆ ಪದರಂಗಿತೊ’ ಹಾಗೂ ವರ್ಕಾಡಿ ರವಿ ಅಲೆವೂರಾಯ ಬಳಗದಿಂದ ‘ಬಲಿ-ವಾಮನ’ ರೂಪಕ ಜರಗಿತು. ಚಂದ್ರಶೇಖರ ಸುವರ್ಣರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ವಿದ್ಯಾದಾಯಿನಿ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.