ಮಡಿಕೇರಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 17-11-2023ರಂದು ಹಾಕತ್ತೂರು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬಿ.ಆರ್. ಸಾಯಿನಾಥ್’ ಮತ್ತು ತ್ರಿಭಾಷಾ ಸಾಹಿತಿ ಮುಲ್ಲೇಂಗಡ ದಿ. ಬೇಬಿ ಚೋಂದಮ್ಮ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ಸಿ. ದೊಡ್ಡೇ ಗೌಡ ಇವರು ಉದ್ಘಾಟಿಸಿ ಮಾತನಾಡುತ್ತಾ “ಶಾಲೆಗಳಿಗೆ ಸಾಹಿತ್ಯವನ್ನು ಕೊಂಡೊಯ್ದು ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತರನ್ನಾಗಿ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಪ್ರತಿಯೊಂದು ಶಾಲೆಗಳಲ್ಲಿ ವ್ಯವಸ್ಥಿತವಾಗಿ ನಡೆಯಬೇಕು” ಎಂದು ನುಡಿದರು.
ಕೊಡಗಿನ ಮಹಿಳಾ ಸಾಹಿತ್ಯದಲ್ಲಿ ಕಥೆಗಾರ್ತಿ ಗೌರಮ್ಮ ಅವರ ಸಾಧನೆಯ ಕುರಿತು ಮಾತನಾಡಿ, “ನಂಜನಗೂಡು ತಿರುಮಲಾಂಬಾ ಕಲ್ಯಾಣಮ್ಮನವರ ಸಮಕಾಲೀನರಾಗಿ ಗೌರಮ್ಮನವರು ಬರೆದ ಪುಸ್ತಕಗಳು ಇಂದು ಓದುಗರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಹತ್ತನೇ ಶತಮಾನದ ಕವಿ ನಾಗವರ್ಮ 15ನೇ ಶತಮಾನದ ಜೈನ ಕವಿ ದೇವಪ್ಪ ರೆ.ಫಾ.ಕಿಟಲ್ ಅನಂತರ ಪಂಜೆ ಮಂಗೇಶರಾಯರು, ಭಾರತೀಸುತರು, ಗೌರಮ್ಮ, ಡಿ.ಎನ್.ಕೃಷ್ಣಯ್ಯನವರು ಕೊಡಗಿನಲ್ಲಿ ಬೆಳೆಸಿದ ಕನ್ನಡ ಸಾಹಿತ್ಯ ಚಿಗುರೊಡೆದು, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಇದೀಗ ಸಮೃದ್ಧ ಗೊಳ್ಳುತ್ತಿದೆ. ಕೊಡಗು ಸಸ್ಯ ಶ್ಯಾಮಲೆಯ ನಾಡಾಗಿದ್ದು, ಪ್ರವಾಸೋದ್ಯಮದ ಬೆಳವಣಿಗೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಬೇಕಾಗಿದೆ. ಸುಂದರ ಪರಿಸರದ ನಾಡಿನಲ್ಲಿ ಸಾಹಿತ್ಯ ರಚನೆಗೆ ಇಂಬು ನೀಡುವ ಕೆಲಸಗಳಾಗಬೇಕಾಗಿದೆ.” ಎಂದು ಅಭಿಪ್ರಾಯಪಟ್ಟರು.
ಬಿ.ಆರ್. ಸಾಯಿನಾಥ್ ದತ್ತಿ ಉಪನ್ಯಾಸದಲ್ಲಿ ಭಾಗಿಯಾದ ಕವಯಿತ್ರಿ ಕೆ.ಜಿ. ರಮ್ಯ ಮಾತನಾಡಿ, “ಸುವರ್ಣ ಕರ್ನಾಟಕ 50ರ ಸಂಭ್ರಮದಲ್ಲಿ ಶಾಲೆಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ದತ್ತಿ ರೂಪದಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ಸಾಹಿತ್ಯದ ಪರಿಚಯ ಮಾಡಲು ಒಳ್ಳೆಯ ವೇದಿಕೆಯಾಗಿದೆ. ಕಾವ್ಯ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಅನ್ಯತೆಯನ್ನು ಹೋಗಲಾಡಿಸಿ ಅನನ್ಯತೆಯಿಂದ ಕಾವ್ಯಗಳ ರಚನೆ ಆಗಬೇಕಾಗಿದೆ. ಮಾನವೀಯತೆ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯತ್ವವನ್ನು ಬೆಳೆಸುವ ಜವಾಬ್ದಾರಿ ಕವಿಗಳ ಮೇಲಿದೆ ಎಂದು ಕಾಳಜಿಯ ಮಾತುಗಳನ್ನು ಆಡಿದರು.
ತ್ರಿಭಾಷಾ ಸಾಹಿತಿ ದಿ.ಬೇಬಿ ಚೋಂದಮ್ಮ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಕೊಡವ ಭಾಷಾ ಸಾಹಿತ್ಯದಲ್ಲಿ ಪ್ರವೀಣರಾಗಿದ್ದರು. ಕೊಡಗಿನಲ್ಲಿ ಮಹಿಳಾ ಸಾಹಿತಿಗಳ ವಿಚಾರ ಪ್ರಸ್ತಾಪಿಸುವುದಾದಲ್ಲಿ ಕೊಡಗಿನಲ್ಲಿ ಮಹಿಳಾ ಲೇಖಕಿಯರಲ್ಲಿ ಇಪ್ಪತ್ತು ಮಂದಿ ಕೃತಿಕಾರರ ಕೃತಿಗಳಿಗೆ ಗೌರಮ್ಮ ದತ್ತಿ ಪ್ರಶಸ್ತಿ ಲಭಿಸಿರುವುದು ಮಹಿಳಾ ಸಾಹಿತಿಗಳ ಬೆಳವಣಿಗೆಗೆ ಅದ್ಭುತ ಕೊಡುಗೆಯಾಗಿದೆ. ಜಿಲ್ಲೆಯಲ್ಲಿ ಕೃತಿಕಾರರಾಗಿ ಸಾಕಷ್ಟು ಮಹಿಳೆಯರು ತಮ್ಮ ಲೇಖನಗಳ ಮೂಲಕ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ” ಎಂದು ಸಾಹಿತಿ ಗೌರಮ್ಮ ಮಾದಮ್ಮಯ್ಯ ಹೇಳಿದರು.
ದಿ.ಬೇಬಿ ಚೋಂದಮ್ಮ ಅವರ ಪುತ್ರ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, “ತಮ್ಮ ತಾಯಿಯವರು ಶಿಕ್ಷಕಿಯಾಗಿ, ಬಹುಭಾಷಾ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಾಕಾಲ ದುಡಿದವರು” ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, “ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಕನ್ನಡದ ಆಸಕ್ತಿ ಮೂಡಿದರೆ ಮುಂದಕ್ಕೆ ಅವರು ಕನ್ನಡದ ಕಟ್ಟಾಳುಗಳಾಗಿ ಭಾಷೆಯನ್ನು ಬೆಳೆಸಲು ಸಾಧ್ಯ” ಎಂದರು. ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮಾತನಾಡಿ, “ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಓದಬೇಕು. ಇಂದಿನ ದತ್ತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಾಹಿತ್ಯದ ತಿಳುವಳಿಕೆಯನ್ನು ನೀಡುವ ವೇದಿಕೆ ಆಗಿದೆ” ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ, ತಾಲೂಕು ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್, ತಾಲೂಕು ಗೌರವ ಕಾರ್ಯದರ್ಶಿ ರಿಶಿತ್ ಮಾದಯ್ಯ, ತಾಲೂಕು ಗೌರವ ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ, ಶಾಲಾ ಮುಖ್ಯೋಪಾಧ್ಯಾಯರಾದ ನೀತಾ ಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೆಚ್.ಎಸ್. ಹೇಮಾವತಿ, ಕಸಾಪದ ವ್ಯವಸ್ಥಾಪಕಿ ರೇಣುಕಾ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್. ಸ೦ಪತ್ ಕುಮಾರ್ ಸ್ವಾಗತಿಸಿ, ಶಿಕ್ಷಕರಾದ ಭವಾನಿಶಂಕರ್ ಕಾರ್ಯಕ್ರಮವನ್ನು ನಿರೂಪಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ವ೦ದಿಸಿದರು.