ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಯೋಜಿಸಿದ ‘ಅರ್ಥಾಂಕುರ-5’ ಹೊಸ ತಲೆಮಾರಿನ ಅರ್ಥದಾರಿಗಳಿಗೆ ವೇದಿಕೆ ಕಾರ್ಯಕ್ರಮವು ದಿನಾಂಕ 19-11-2023 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳರನ್ನು ಗೌರವಿಸಿ ಮಾತನಾಡಿದ ಉಪನ್ಯಾಸಕ ಮತ್ತು ಅರ್ಥಧಾರಿಯಾದ ರಾಘವೇಂದ್ರ ತುಂಗ “ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರಿಂದ ಸ್ಥಾಪಿಸಲ್ಪಟ್ಟ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷ ಅಲೆಯನ್ನು ಸಮಗ್ರವಾಗಿ ಕಲಿತು, ಅಲ್ಲಿಯೇ ಸುದೀರ್ಘ ಕಾಲ ಕಲಾಸೇವೆಗೈದವರು. ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿ ಸ್ತ್ರೀವೇಷ, ಪುರುಷವೇಷ, ಪೋಷಕ ಪಾತ್ರದಲ್ಲಿ ರಂಜಿಸಿ ಪ್ರಸ್ತುತ ಜನಮಾನಸದಿಂದ ದೂರವಾದ ಗಂಡು ಹಾಗೂ ಹೆಣ್ಣು ಬಣ್ಣದ ವೇಷಗಳಲ್ಲದೇ ಪ್ರಾಣಿ ಪಕ್ಷಿ ಸ್ವಭಾವದ ವಿಶೇಷ ವೇಷ ನಿರ್ವಹಣೆಯಲ್ಲಿ ತನ್ನದೇ ಛಾಪು ಮೂಡಿಸಿ ಅಸಾಮಾನ್ಯ ಕಲಾವಿದರಾಗಿ ಗುರುತಿಸಿಕೊಂಡವರು. ಪರಂಪರೆಯ ವೇಷಭೂಷಣ ರಚನೆಯಲ್ಲಿ ಸಿದ್ಧ ಹಸ್ತರಾಗಿ ಪ್ರಸಾದನ ತಜ್ಞ ಎಂದು ಖ್ಯಾತರಾದ ಪರಂಪರೆಯ ಕಲಾವಿದ ಕೃಷ್ಣಮೂರ್ತಿ ಉರಾಳರನ್ನು ಗೌರವಿಸಿ ಸಂಸ್ಥೆ ಎತ್ತರಕ್ಕೇರಿದೆ. ಅನುಭವದಲ್ಲಿ ಹಿರಿತನಕ್ಕೆ ಪ್ರಶಸ್ತಿ ದೊರೆತಿರುವುದು ಪ್ರಶಂಸನೀಯ” ಎಂದು ಅಭಿನಂದನಾ ಮಾತುಗಳನ್ನಾಡಿದರು.
ವಿಶೇಷ ಅಭ್ಯಾಗತರಾಗಿ ಆಗಮಿಸಿದ ಅರ್ಥಧಾರಿ ಧನಂಜಯ ಛಾತ್ರ ಕಲ್ಸಂಕ ಮಾತನಾಡಿ “ಅರ್ಥಾಂಕುರ ಕಾರ್ಯಕ್ರಮವು ಕೇವಲ 5ನೇ ಅಧ್ಯಾಯದಲ್ಲಿಯೇ ಪ್ರಸಿದ್ಧಿಯನ್ನು ಹೊಂದಿದೆ. ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ ಕಾರ್ಯ ಈ ಕಾರ್ಯಕ್ರಮದಿಂದ ಆಗುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಯಕ್ಷಗಾನ ಪ್ರಪಂಚಕ್ಕೆ ಇನ್ನಷ್ಟು ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸುವ ಕಾರ್ಯ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ರಸರಂಗ ಕೋಟದ ಸುಧಾ ಕದ್ರಿಕಟ್ಟು, ಗೋಪಾಲ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು. ಕೀರ್ತನ್ ಮಿತ್ಯಂತ ಹಾಲಾಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ “ಸಂಜಯ ರಾಯಭಾರ” ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.