ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಕನ್ನಡ ವಿಭಾಗ ಮತ್ತು ಕನ್ನಡ ಸಂಘ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸುವ ಇಂದಿರಾ ರತ್ನ ದತ್ತಿ ಪ್ರಶಸ್ತಿ ಪ್ರದಾನ, ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ಪತ್ರಿಕೆ ಬಿಡುಗಡೆ ಸಮಾರಂಭವು ದಿನಾಂಕ 24-11-2023 ರಂದು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎನ್. ವೆಂಕಟೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಕಿರುತೆರೆ ಕಲಾವಿದೆ ಮತ್ತು ಕಾರ್ಯಕ್ರಮ ನಿರೂಪಕಿಯಾದ ಶ್ರೀಮತಿ ಅಪರ್ಣಾ ವಸ್ತಾರೆ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯೋತ್ಸವದ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಆಶಯ ನುಡಿಗಳನ್ನಾಡಲಿದ್ದು, ಐಕ್ಯುಎಸಿ ಸಂಚಾಲಕರಾದ ಡಾ. ಎಂ. ಎಲ್. ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಕವಯತ್ರಿಯಾದ ಆರ್. ಹಂಸ ಇವರಿಗೆ 2023ನೇ ಸಾಲಿನ ಇಂದಿರಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಆರ್. ಹಂಸ
ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಆರ್. ಹಂಸ ಅವರು ವಿವಿಧ ಕನ್ನಡ ಸಂಘಟನೆಗಳಲ್ಲಿದ್ದವರು. ಜೊತೆಗೆ ಕನ್ನಡ ನಾಡು, ನುಡಿ, ನೆಲ, ಜಲ, ಗಡಿ, ಶಿಕ್ಷಣ, ಮಹಿಷಿ ವರದಿ, ನಂಜುಂಡಪ್ಪ ವರದಿ, ಬರಗೂರು ವರದಿ, ಕಾವೇರಿ ನೀರಿಗಾಗಿ, ಹೇಮಾವತಿ ನೀರಿಗಾಗಿ ಸತ್ಯಾಗ್ರಹ, ಶಿಕ್ಷಣ ಮತ್ತು ಗಡಿ ವಿಚಾರವಾಗಿ ಹೋರಾಟಗಳಲ್ಲಿ ಭಾಗವಹಿಸಿ ಬಂಧನಕ್ಕೂ ಒಳಗಾಗಿ ನಂತರ ಬಿಡುಗಡೆಗೊಂಡರು. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಬೃಹತ್ ಪ್ರತಿಭಟನೆ, 2011 ರಲ್ಲಿ ಅಣ್ಣಾ ಹಜಾರೆ ಬೆಂಬಲಿಸಿ ಭ್ರಷ್ಟಾಚಾರದ ವಿರುದ್ಧದ ಪಂಜಿನ ಮೆರವಣಿಗೆ ಪ್ರತಿಭಟನೆ, ಮಡೆಸ್ನಾನದ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘರ್ಷ ಸಮಿತಿ, ವೀರಸೇನಾನಿ ದಿ.ಮ. ರಾಮಮೂರ್ತಿ ಕನ್ನಡ ಬಳಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಮುಂತಾದ ಸಂಸ್ಥೆಗಳಲ್ಲಿದ್ದಾರೆ. ಅಲ್ಲದೆ ಕವಯಿತ್ರಿಯಾಗಿ, ಅಂಕಣಕಾರರಾಗಿ ಹೆಸರು ಮಾಡಿದ್ದಾರೆ. ತಳಿರು ತೋರಣ, ಚೈತ್ರದಂಗಳದಲ್ಲಿ, ನಿನ್ನೊಲುಮೆಯಲಿ, ಜೀವನದಿಯ ಹಾಡು, ಗೋಧೂಳಿ, ಅವಳ ಎದೆಯ ಹಕ್ಕಿ ಮುಂತಾದ ಕವನ ಸಂಕಲನ, ಪ್ರಾತಿನಿಧಿಕ 108 ಖ್ಯಾತ ಲೇಖಕಿಯರ ಕಥಾ ಸಂಕಲನ ಮಹಿಳಾ ಕಥಾ ಸಂಪದದ ಸಂಪಾದಕಿ, ಮಮತೆಯ ಅಂಗಳ ಕಥಾ ಸಂಕಲನ, ಚಿಣ್ಣರ ಚಿಲಿಪಿಲಿ ಕವನ ಸಂಕಲನ ಸೇರಿದಂತೆ ಮಕ್ಕಳ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಿವೆ.