ಉಡುಪಿ : ಬೆಂಗಳೂರಿನ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ಲೇಖಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ದಿನಾಂಕ 30-12-2023ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆಯುವ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಡಾ. ತಲ್ಲೂರು ಶಿವರಾಮ ಶೆಟ್ಟಿ ರಂಗಭೂಮಿ ಉಡುಪಿ ಇದರ ಅಧ್ಯಕ್ಷರು ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿಯ ಜಿಲ್ಲಾಧ್ಯಕ್ಷರಾಗಿದ್ದಾರೆ. ತಮ್ಮದೇ ಆದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಕಲೆಯ ಉಳಿವು ಬೆಳವಣಿಗೆಗಾಗಿ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನಪದ ವೈಭವ ಕಾರ್ಯಕ್ರಮ ಹಮ್ಮಿಕೊಂಡು ಜಾನಪದ ಕಲೆಗಳ ಪ್ರದರ್ಶನದ ಜೊತೆಗೆ ಸಾಧಕ ಜಾನಪದ ಕಲಾವಿದರಿಗೆ, ಜಾನಪದ ಸಂಘಟಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಡೆಸಿದ್ದಾರೆ. ತಲ್ಲೂರು ಕನಕಾ ಅಣ್ಯಯ್ಯ ಶೆಟ್ಟಿ ಪ್ರಶಸ್ತಿ ಸ್ಥಾಪಿಸಿ ಪ್ರತೀ ವರ್ಷ ಪ್ರಸಿದ್ಧ ಯಕ್ಷಗಾನ ವಿದ್ವಾಂಸರನ್ನು ಗುರುತಿಸಿ ಯಕ್ಷ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಂಸ್ಕಾರ ಬೆಳೆಸುವ ಆಶಯದೊಂದಿಗೆ 200ಕ್ಕೂ ಅಧಿಕ ಶಾಲೆಗಳಿಗೆ 28 ಸಾವಿರಕ್ಕೂ ಹೆಚ್ಚು ಪುಸ್ತಕ ವಿತರಿಸಿದ್ದಾರೆ. ಅವರ ಕಲಾಸಂಚಯ – ‘ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ಪುಸ್ತಕ ಬಹುಮಾನ, 2021ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರದ ಡಾಕ್ಟರೇಟ್ ನೀಡಿ ಗೌರವಿಸಿದೆ.