ನನ್ನನ್ನೂ ಸೇರಿ ನಾವಿದ್ದದ್ದು ಎಂಟು ಜನ. ನಾನು ಮತ್ತು ಏಳು ಮಕ್ಕಳು. ಮಗನ ಅಪಾರ್ಟಮೆಂಟಿನ ಹುಡುಗರು. ಎಲ್ಲ ಇಂಗ್ಲಿಷ್ ಓದುವವರು. ಅವರಲ್ಲಿ ಒಬ್ಬ ಗುಜರಾತಿ, ಒಬ್ಬ ಮರಾಠಿ, ಒಬ್ಬ ಮಲೆಯಾಳಿ, ಒಬ್ಬ ಬಂಗಾಲಿ. ಮೂವರು ಕನ್ನಡದವರು. ನಾವೆಲ್ಲ ಸೇರಿ ಕನ್ನಡ ರಾಜ್ಯೋತ್ಸವಕ್ಕಾಗಿ ಒಂದು ಕನ್ನಡ ಮಕ್ಕಳ ನಾಟ್ಕ ಆಡಬೇಕಿತ್ತು. ನಮಗೆ ಇದ್ದಿದ್ದು ಮೂರೇ ಸಂಜೆಗಳು. ಇದೊಂಥರಾ ಸವಾಲು. ನಾವದನ್ನ ಸ್ವೀಕರಿಸಿಯೇಬಿಟ್ಟೆವು.
ಇಂಥ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದವರು ಡಾ. ಆರ್ ವಿ. ಭಂಡಾರಿ. ಮೂವತ್ತೈದು ವರ್ಷಗಳ ಹಿಂದೆ ಶಿರಸಿಯಲ್ಲಿ ಆಡಿಸಿದ ಅವರ ‘ ಬೆಕ್ಕು ಮತ್ತು ರೊಟ್ಟಿ’ ನಾಟ್ಕ ನೆನಪಾಯ್ತು. ಸರಳ ಸಂಭಾಷಣೆಯ ಹಾಡು ಕುಣಿತಗಳ ನಾಟ್ಕ ಅದು.
ಆರ್. ವಿ. ಭಂಡಾರಿಯವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದವರು. ಮಕ್ಕಳಿಗಾಗಿಯೇ ನಾಟಕಗಳನ್ನ ಬರೆದ ಮೊದಲಿಗರಲ್ಲೊಬ್ಬರು. ಪ್ರಸಿದ್ಧವಾದ ಬೆಕ್ಕು- ಬೆಣ್ಣೆಯ ಕತೆಯನ್ನ ಆಧರಿಸಿದ ನಾಟಕ ಇದು. ಅಡುಗೆ ಮನೆಯಿಂದ ರೊಟ್ಟಿಯನ್ನು ಕದ್ದ ಕರಿಬೆಕ್ಕು, ಬಿಳಿಬೆಕ್ಕುಗಳು ಹಂಚಿಕೊಂಡು ತಿನ್ನೋದನ್ನು ಬಿಟ್ಟು ಇಡಿಯ ರೊಟ್ಟಿಗಾಗಿ ಜಗಳವಾಡ್ತವೆ. ಇವುಗಳ ಜಗಳ ಕಂಡ ಮಂಗಣ್ಣ ರೊಟ್ಟಿಯನ್ನ ಎಗರಿಸುವ ಉಪಾಯ ಮಾಡ್ತದೆ. ತಕ್ಕಡಿ ಹಿಡಕೊಂಡು ಬರ್ತದೆ. ಸಮಪಾಲು ಮಾಡೋ ಹೆಳೆಯಲ್ಲಿ ಚೂರು ಚೂರು ರೊಟ್ಟಿ ತಿಂತಾ,ತಿಂತಾ ಇಡೀ ರೊಟ್ಟಿಯನ್ನೇ ಮುಕ್ಕಿಬಿಡ್ತದೆ. ಹೀಗೆ ತಮ್ಮತಮ್ಮಲ್ಲೇ ಜಗಳವಾಡಿ ಅವು ತಮ್ಮ ರೊಟ್ಟಿಯನ್ನ ಕಳೆದುಕೊಳ್ತವೆ.
ಇಬ್ಬರ ಜಗಳದಿಂದ ಮೂರನೆಯವನಿಗೆ ಲಾಭವಾಗ್ತದೆ. ಹಂಚಿ ತಿನ್ನುವ, ತಮ್ಮ ತಮ್ಮಲ್ಲಿ ಜಗಳ ಮಾಡದಿರುವ ಉದಾತ್ತ ಉದ್ದೇಶದ ಈ ನಾಟಕದ ಚಿಕ್ಕ ಚಿಕ್ಕ ಸಂಭಾಷಣೆಗಳ ಅರ್ಥ ಹೇಳುತ್ತ ಹೋದ ಹಾಗೆ ಚುರುಕಾದ ಮಕ್ಕಳು ಬೇಗ ಬೇಗ ಕನ್ನಡ ಮಾತು, ಹಾಡು ಕಲಿತರು. ಚಿನಕುರುಳಿ ಮಕ್ಕಳಿಗೆ ನಡೆ, ಕುಣಿತಗಳು ಕಷ್ಟವೆನಿಸಲೇ ಇಲ್ಲ. ಮೂರೇ ದಿನದಲ್ಲಿ ಎಲ್ರೂ ಬೆರಗಾಗೋ ಹಾಗೆ ನಾಟ್ಕ ಆಡೇಬಿಟ್ಟರು.
ಮಕ್ಕಳು ಕನ್ನಡ ಸಂಭಾಷಣೆ ಹೇಳ್ತಾ, ಹಾಡು ಹಾಡ್ತಾ ಕುಣೀತಾ ಚಪ್ಪಾಳೆ ಗಿಟ್ಟಿಸ್ತಿದ್ರೆ ಸ್ಟೇಜ್ ಪಕ್ಕ ಆತಂಕದಿಂದ ನಿಂತಿದ್ದ ಬೇರೆ ಬೇರೆ ಭಾಷೆ ಮಾತನಾಡುವ ಅಮ್ಮಂದಿರ ಮುಖ ನೋಡ್ಬೇಕಿತ್ತು !
- ಕಿರಣ್ ಭಟ್ ಹೊನ್ನಾವರ, ವಿಮರ್ಶಕರು