ಮೈಸೂರು : ಅದಮ್ಯ ರಂಗಶಾಲೆಯ ವತಿಯಿಂದ ನಗರದ ಜಯಲಕ್ಷ್ಮೀಪರಂನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ನಾಟಕ ಪ್ರದರ್ಶನ’ ದಿನಾಂಕ 18-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಪಂಪ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಇವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಬಳಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ, “ಶಿಕ್ಷಣ ಉತ್ಪತ್ತಿಶೀಲ ಮತ್ತು ಸಂಗ್ರಹಶೀಲವಾಗಿರಬಾರದು. ಬದಲಿಗೆ ಸೃಜನಶೀಲವಾಗಿರಬೇಕು. ಆದ್ದರಿಂದ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಜೊತೆಗೆ ವಿಶ್ವಪ್ರಜ್ಞೆಯನ್ನೂ ಬೆಳೆಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಅಧ್ಯಾಪಕನೂ ಗೌರವ ತಪಸ್ವಿ ಆಗಬೇಕು. ಅದರಲ್ಲೂ ಅಧ್ಯಾಪಕ ಕಡೆಯವರೆಗೂ ವಿದ್ಯಾರ್ಥಿಯೇ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಬೋಧಿಸುವ ಎಲ್ಲಾ ವಿಚಾರಗಳನ್ನು ಸ್ವತಃ ತಮಗೆ ಅನ್ವಯಿಸಿಕೊಳ್ಳಬೇಕು. ಆತ್ಮಶ್ರೀಯನ್ನು ಉದ್ದೀಪನಗೊಳಿಸುವ, ವೃದ್ಧಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು. ಕುವೆಂಪು ಅವರು ಮಹಾಕವಿ, ವಿಶ್ವಕವಿ ಮಾತ್ರವಲ್ಲ. ಮೂಲತಃ ಶ್ರೇಷ್ಠ ಪ್ರಾಧ್ಯಾಪಕರು ಮತ್ತು ಶಿಕ್ಷಣ ತಜ್ಞರಾಗಿದ್ದರು. ಅವರ ಶೈಕ್ಷಣಿಕ ವಿಚಾರಗಳು ಸದಾಕಾಲಕ್ಕೂ ಮೌಲಿಕ. ಅವರು “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಬೇಕು. ಶಿಕ್ಷಣ ಸಂಯಮಪೂರ್ಣವಾದ ಸಮುಚಿತ ಬುದ್ಧಿಯನ್ನು ಬೆಳೆಸಬೇಕು” ಎನ್ನುತ್ತಿದ್ದರು ಎಂದು ಸ್ಮರಿಸಿದರು. ನಮ್ಮಲ್ಲಿ ಸಮನ್ವಯ ದೃಷ್ಟಿ ಇರಬೇಕು. ಅದಕ್ಕಾಗಿ ವಿಜ್ಞಾನ ಮತ್ತು ಕಲೆ ನಮ್ಮ ಕಣ್ಣುಗಳಾಗಿರಬೇಕೆಂದು ಕುವೆಂಪು ಹೇಳುತ್ತಿದ್ದರು. ವಿಜ್ಞಾನ ಲೌಕಿಕ ಅಭ್ಯುದಯದ ಸಾಧನವಾದರೆ, ಕಲೆ ಶ್ರೇಯಸ್ಸಿನ ಸಾಧನ. ವಿಜ್ಞಾನ ವಿದ್ಯಾರ್ಥಿಗಳು ಕಲೆಯನ್ನೂ ಕಲಾ ವಿದ್ಯಾರ್ಥಿಗಳು ವಿಜ್ಞಾನವನ್ನು ಅಭ್ಯಸಿಸಬೇಕು. ಅಂತಹ ಸಮನ್ವಯದ ಅಗತ್ಯವಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು ಮಾತನಾಡಿ, “ಅಲಕ್ಷಿತ ಸಮುದಾಯದ ಪ್ರತಿಭೆಗಳನ್ನು ಗುರುತಿಸುವ ಪ್ರೋತ್ಸಾಹಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಜಾಗೃತಿ ಮೂಡಿಸಿ, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಅದಮ್ಯ ರಂಗಶಾಲೆಯ ಕ್ರಿಯಾಶೀಲ ಕಾರ್ಯಕ್ಕೆ ಜನಮನ್ನಣೆ ಸಿಗಬೇಕು” ಎಂದರು.
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರುರು. ಮುಖ್ಯ ಅತಿಥಿಯಾಗಿ ದಿ ನೆಸ್ಟ್ ಟ್ರಸ್ಟಿನ ಅಧ್ಯಕ್ಷ ಲಯನ್ ಡಿ.ಎಸ್. ಸತೀಶ್ ಮಾತನಾಡಿದರು. ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಯುವ ಕವಿಗಳಾದ ಟಿ. ಲೋಕೇಶ್ ಹುಣಸೂರು, ಡಾ.ಬಿ. ಬಸವರಾಜು, ಎನ್. ನವೀನ್ ಕುಮಾರ್, ಸಿ.ಎಸ್. ರಾಘವೇಂದ್ರ, ಉಪನ್ಯಾಸಕಿ ಎಂ.ಆರ್. ಸಹನಾ ಉಪಸ್ಥಿತರಿದ್ದರು.
ಮೈಸೂರಿನ ಬಿ.ಜಿ.ಎಸ್. ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಆರ್.ಎಸ್. ನರಸೇಗೌಡ, ಮಹಾರಾಜ ಸ.ಪ. ಪೂ. ಕಾಲೇಜಿನ ಪ್ರಾಂಶುಪಾಲ ಎನ್. ಉದಯಶಂಕರ್, ಹಾಸನದ ಬಾಲಕಿಯರ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಜಿ.ಟಿ. ಅನ್ನಪೂರ್ಣ, ಹುಣಸೂರಿನ ಬಾಲಕಿಯರ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಎ. ರಾಮೇಗೌಡ, ನಂಜನಗೂಡಿನ ಬಾಲಕರ ಸ.ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಕೆ. ಮಾಲತಿ, ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ಸ.ಪ.ಪೂ. ಕಾಲೇಜಿನ ಲೋಕೇಶ ಬೆಕ್ಕಳಲೆ, ಮೈಸೂರಿನ ಸದ್ವಿದ್ಯಾ ಸಂಯುಕ್ತ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ಕೃ.ಪಾ. ಮಂಜುನಾಥ್, ಗೋಪಾಲಸ್ವಾಮಿ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ಜಿ.ಆರ್. ಶ್ರೀವತ್ಸ ಇವರುಗಳಿಗೆ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನದ ಬಳಿಕ ಅದಮ್ಯ ರಂಗಶಾಲೆಯ ಮಕ್ಕಳಿಂದ ಕೃಷ್ಣಮೂರ್ತಿ ಬಿಳಿಗೆರೆ ರಚನೆಯ ‘ಹುಯ್ಯೋ ಹುಯ್ಯೋ ಮಳೆರಾಯ’ ನಾಟಕ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.