ನಾಟಕ: ಹೂವು
ಅಭಿನಯ: ಚಂದ್ರಶೇಖರ ಶಾಸ್ತ್ರಿ
ನಿರ್ದೇಶನ: ಸಾಸ್ವೆಹಳ್ಳಿ ಸತೀಶ್
ತಂಡ: ಹೊಂಗಿರಣ, ಶಿವಮೊಗ್ಗ
ಪ್ರದರ್ಶನ: ಹತ್ತನೆಯ ಪ್ರದರ್ಶನ, ಸಮುದಾಯ ಬೆಂಗಳೂರು
ʼ ಕಾರ್ನಾಡ್ ನೆನಪುʼ. ಕಾರ್ಯಕ್ರಮದಲ್ಲಿ
ಹೂವುʼ ಗಿರೀಶ್ ಕಾರ್ನಾಡ್ ರ ಏಕವ್ಯಕ್ತಿ ನಾಟ್ಕ. ಅವರು ಮೊದಲು ಇಂಗ್ಲಿಷ್ ನಲ್ಲಿ ಬರೆದು ಮತ್ತೆ ಕನ್ನಡಕ್ಕೆ ತಂದ ಮೊದಲ ನಾಟ್ಕ ಕೂಡ.
ಇಂಥದೊಂದು ಕೃತಿಯನ್ನು ಶಿವಮೊಗ್ಗದ ʼಹೊಂಗಿರಣʼ ತಂಡದವರು ರಂಗಕ್ಕೆ ತಂದಿದ್ದಾರೆ. ನಾಟ್ಕದ ನಿರ್ದೇಶಕರು ಸಾಸ್ವೆಹಳ್ಳಿ ಸತೀಶ್. ಅಭಿನಯ: ಚಂದ್ರಶೇಖರ ಶಾಸ್ತ್ರಿ.
ಚಿತ್ರದುರ್ಗದ ಗ್ರಾಮೀಣ ಭಾಗದ ಕಥೆಯನ್ನೆತ್ತಿಕೊಂಡು ಕಾರ್ನಾಡ್ ಈ ನಾಟ್ಕ ರಚಿಸಿದ್ದಾರೆ.
ಇದು, ದೈವ ಭಕ್ತಿ ಮತ್ತು ವೇಶ್ಯೆಯೊಬ್ಬಳ ಪ್ರೀತಿಯ ನಡುವೆ ಸಿಕ್ಕುಹಾಕಿಕೊಂಡ ಪೂಜಾರಿಯೊಬ್ಬನ ಕಥೆ. ಆತ ಹಳ್ಳಿಯ ಶಿವದೇವಾಲಯದ ಪೂಜಾರಿ. ಊರ ಗುಡಿಯಲ್ಲಿ ನಿಂತ ಲಿಂಗವನ್ನ ಪ್ರತಿದಿನವೂ ವಿಶಿಷ್ಟ ವಿನ್ಯಾಸಗಳಲ್ಲಿ ಹೂಗಳಿಂದ ಸಿಂಗರಿಸೋದ್ರಲ್ಲಿ ನಿಷ್ಣಾತ. ಪಾಳೇಗಾರರಿಂದಲೂ ಊರ ಜನರಿಂದಲೂ ತನ್ನ ಕಲಾವಂತಿಕೆಗಾಗಿ ಹೊಗಳಿಸಿಕೊಳ್ತಿದ್ದ ಈ ಪೂಜಾರಿ, ಒಂದು ಸಂಜೆ ಪ್ರಸಾದ ವಿತರಿಸೋ ಹೊತ್ತಿಗೆ ಅಚಾನಕ್ಕಾಗಿ ಚಂದ್ರಾವತಿಯೆಂಬ ವೇಶ್ಯೆಯೊಬ್ಬಳ ಎದೆಯ ಮಚ್ಚೆಯ ಚೆಲುವಿಗೆ ವಿಚಲಿತನಾಗಿ. ಆಕೆಯಲ್ಲಿ ಅನುರಕ್ತನಾಗ್ತಾನೆ. ದಿನಾ ಪೂಜೆಯಾದ್ಮೇಲೆ ಆಕೆಯ ಮನೆಗೆ ಆತನ ಭೇಟಿ ಶುರುವಾಗ್ತದೆ. ಆಕೆಯನ್ನ ಹೂಗಳಿಂದ ಸಿಂಗರಿಸಿ ಚಂದನೋಡುವದೂ, ಆಕೆ ಪುಳಕಿತಳಾಗೋದೂ, ಪ್ರೇಮಿಸೋದೂ ದಿನನಿತ್ಯದ ವ್ಯವಹಾರವಾಗ್ತದೆ.
ದಿನಾ ಸಿಂಗರಿಸುವ ʼಅಸಡ್ಡಾಳವಾದ ಬೋಳಾದ ಆಕಾರದʼ ಲಿಂಗದ ಮೈಗಿಂತ ಉಬ್ಬು ತಗ್ಗುಗಳಿಂದ ಚೆಲುವಾದ ಚಂದ್ರಾವತಿಯ ಮೈಯನ್ನು ಸಿಂಗರಿಸೋದ್ರಲ್ಲೇ ಆತ ರೋಮಾಂಚಿತನಾಗ್ತಾ ಹೋಗ್ತಾನೆ.ಹೀಗಿರೋವಾಗ ಪ್ರತಿದಿನವೂ ಪೂಜೆ ಶುರು ಮಾಡುವಂತೆ ಸೂಚಿಸೋ ಕಹಳೆ ಒಂದು ಸಂಜೆ ಮೊಳಗೋದೇ ಇಲ್ಲ. ಪಾಳೇಗಾರನೂ ಬರೋದಿಲ್ಲ. ಮಧ್ಯರಾತ್ರಿಯ ವರೆಗೂ ಕಾದ ಪೂಜಾರಿ ಪೂಜೆ ಮುಗಿಸಿ ಹೂಗಳನ್ನು ಕಟ್ಕೊಂಡು ಚಂದ್ರಾವತಿಯ ಮನೆಗೆ ಒಡ್ತಾನೆ. ಇನ್ನೇನು ಆಕೆಯ ಸಿಂಗಾರ ಮುಗೀಬೇಕು ಅನ್ನೋದ್ರೊಳಗೆಅಚಾನಕ್ಕಾಗಿ ಕಹಳೆ ಧ್ವನಿ ಕೇಳ್ತದೆ. ಗಡಿಬಿಡಿಗೆ ಬಿದ್ದ ಪೂಜಾರಿ ಆಕೆಯನ್ನ ಸಿಂಗರಿಸಿದ ಹೂಗಳನ್ನೆಲ್ಲ ಬಡಬಡನೆ ಕಿತ್ತು, ಗಂಟು ಕಟ್ಕೊಂಡು ಗುಡಿಗೆ ಓಡ್ತಾನೆ. ಮತ್ತೊಮ್ಮೆ ಲಿಂಗದ ಸಿಂಗಾರ ಮಾಡ್ತಾನೆ. ಆದರೆ ಈಗ ಪಾಳೇಗಾರನಿಗೆ ಪ್ರಸಾದದಲ್ಲಿ ಹೂವಿನ ಜೊತೆ ಕೂದಲೊಂದು ಸಿಕ್ಕಿಬಿಡ್ತದೆ. ʼಲಿಂಗಕ್ಕೂ ಕೂದಲು ಬಂದಿದೆʼ ಎನ್ನೋ ಮಾತುಗಳಿಂದ ವಿಚಲಿತನಾದ ಪೂಜಾರಿ. “ಹೌದು. ಲಿಂಗಕ್ಕೆ ಕೂದಲು ಬಂದಿದೆ” ಅಂತ ಸಮರ್ಥನೆ ಮಾಡ್ಕೋತಾನೆ. ʼಹದಿನೈದು ದಿನಗಳ ನಂತರ ಪರೀಕ್ಷೆʼ ಅಂತ ತೀರ್ಮಾನವಾಗ್ತದೆ. ಪೂಜಾರಿ ಹದಿನೈದೂ ದಿನ ಹಗಲು ರಾತ್ರಿ ಪ್ರಾರ್ಥನೆ ಮಾಡ್ತಾನೆ. ಪರೀಕ್ಷೆಯ ದಿನ. ಕೂದಲಿನ ಪರೀಕ್ಷೆ. ಪಾಳೇಗಾರನ ಭಟನೊಬ್ಬ ಲಿಂಗದ ಹಿಂದೆ ಹೋಗಿ ಕೈಹಾಕಿ ನೋಡಿದರೆ, ಲಿಂಗದ ತಲೆಯಲ್ಲಿ ಕೂದಲು! ಅಲೆ ಅಲೆ ಬರುವ ಹಾಗೆ ಕೇಶರಾಶಿ. ʼಅಂಟಿಸಿದಂತ ಕೂದಲಾಗಿರಬೇಕು” ಅಂತ ಜೋರಾಗಿ ಎಳೆದ್ರೆ ಕೈಯೆಲ್ಲ ರಕ್ತಮಯ. ಗುಡಿಯಲ್ಲಿ ಪವಾಡವೊಂದು ನಡೆದುಹೋಗಿದೆ. ಪೂಜಾರಿ ತಲೆದಂಡದಿಂದ ಪಾರಾಗಿದ್ದಾನೆ.
ಪೂಜಾರಿಯನ್ನ ಪಾಳೆಯಗಾರರೂ ಜನರೂ ಸಿಕ್ಕಾಪಟ್ಟೆ ಕೊಂಡಾಡ್ತಾರೆ. ರಾತ್ರಿ ಬೆಳಗಾಗೋದ್ರೊಳಗೆ ಆತ ಪವಾಡಪುರುಷನಾಗಿಬಿಡ್ತಾನೆ ಆದರೆ ʼತಾನು ತಪ್ಪು ಮಾಡಿದಾಗಲೂ ದೇವರೇಕೆ ತನ್ನನ್ನು ಉಳಿಸಿದ?ʼ ಎಂದು ಆತ ಗಲಿಬಿಲಿಗೊಳ್ತಾನೆ. “ಕೇವಲ ನಿನ್ನ ಭಕ್ತ ಎಂಬ ಕಾರಣಕ್ಕಾಗಿ ಅದನ್ನೇ ಕರಾರುವಾಕ್ಕಾಗಿ ಗ್ರಹಿಸಿ ಅದರಂತೇ ನನ್ನ ಜೀವನ ರೂಪಿಸಿಕೊಳ್ಳುವದು ನನಗೆ ಅಸಮ್ಮತ” ಎನ್ನುತ್ತ ತನ್ನ ಮೇಲೆ ಬಂದ ಆ ಅನಪೇಕ್ಷಿತ ಅನುಗ್ರಹದ ಭಾರವನ್ನು ತಾಳಲಾರದೇ ಪೂಜಾರಿ ಆತ್ಮಹತ್ಯೆ ಮಾಡಿಕೊಳ್ತಾನೆ.
ನಾಟಕದ ಮೂಲದಲ್ಲಿ ಭಕ್ತಿ, ಪ್ರೀತಿ, ದೇವರು, ನ್ಯಾಯ, ಕ್ಷಮೆಯಂಥ ವಿಷಯಗಳನ್ನ ಚರ್ಚಿಸುವ ಕಾರ್ನಾಡ್, ಗರ್ಭಗುಡಿ ಪ್ರವೇಶಿಸಲಾರದ ವೇಶ್ಯೆ, ಪ್ರೀತಿಯಿಂದ ವಂಚಿತಳಾದ ಪೂಜಾರಿಯ ಪತ್ನಿಯ ವಿಷಯ ಬಂದಾಗ ಸಾಮಾಜಿಕ ಅಸಮಾನತೆ, ಮಹಿಳಾ ಅಸಮಾನತೆಯ ಮೇಲೂ ಬೆಳಕು ಚೆಲ್ಲುತ್ತಾರೆ. ಪ್ರೀತಿ, ಭಕ್ತಿಗಳ ನಡುವಿನ ತೆಳುವಾದ ಗೆರೆ ಇಲ್ಲೂ ಇದೆ. ಕೊನೆಗೆ ನಡೆವ ಪವಾಡವೂ ಹಾಗೇ. ಸಂಪೂರ್ಣ ನಾಟಕೀಯ. ನಾಟಕದ ಮುಖ್ಯ ಹಂತದಲ್ಲಿ ʼಊರು ಬಿಟ್ಟು ಮರೆಯಾದಳುʼ ಎನಿಸಿಕೊಳ್ಳುವ ಚಂದ್ರಾವತಿ ಪ್ರೀತಿಯ ಬಲದಿಂದಲೇ ಲಿಂಗವಾಗಿ ರೂಪಾಂತರಗೊಂಡು ಪೂಜಾರಿಯನ್ನು ಉಳಿಸಿದಳೇ?
ಇಂಥ ಹಲವಾರು ಪ್ರಶ್ನೆಗಳನ್ನೆತ್ತಬಲ್ಲ ಸಂಕೀರ್ಣವಾದ ಈ ನಾಟಕವನ್ನೆತ್ತಿಕೊಂಡು ಆಡಿದ್ದಕ್ಕೆ ʼ ಹೊಂಗಿರಣʼ ಕ್ಕೆ ಅಭಿನಂದನೆಗಳು ಸಲ್ಲುತ್ತವೆ. ನಾಟ್ಕ ನಿರೂಪಣಾ ಶೈಲಿಯಲ್ಲಿದೆ. ಪೂಜಾರಿಯೇ ತನ್ನ ಕಥೆ ಹೇಳುತ್ತಾನೆ. ಜೊತೆ ಜೊತೆಗೇ ಬೇರೆ ಬೇರೆ ಪಾತ್ರಗಳನ್ನೂ ಅಭಿನಯಿಸುತ್ತಾ ಹೋಗುತ್ತಾನೆ. ನಿರೂಪಕನೂ ಆಗುತ್ತ ಭಾವಾಂತರಗಳನ್ನ ನಿರ್ವಹಿಸುತ್ತ, ಪಾತ್ರಗಳನ್ನೂ ಆವಾಹಿಸಿಕೊಳ್ಳುತ್ತ ಅಭಿನಯಿಸೋದು ಸವಾಲೇ ಸೈ. ಚಂದ್ರಶೇಖರ ಶಾಸ್ತ್ರಿ ಈ ಸವಾಲನ್ನು ಸುಲಭವಾಗಿ ಗೆದ್ದಿದ್ದಾರೆ. ಚಂದ್ರಾವತಿಯ ರೆಕಾರ್ಡೆಡ್ ಮಾತುಗಳನ್ನ ಹೊರತುಪಡಿಸಿದರೆ ಉಳಿದೆಲ್ಲ ಮಾತುಗಳನ್ನ ಅವರೇ ನಿಭಾಯಿಸುತ್ತಾರೆ. ಜೊತೆಗೆ ಅವುಗಳನ್ನು ಅಷ್ಟೇ ಪ್ರಭಾವಶಾಲಿಯಾಗಿಯೂ ದಾಟಿಸುತ್ತಾರೆ.
ವೇದಿಕೆಯ ಮಧ್ಯದಲ್ಲೊಂದು ಶಿವಾಲಯ. ಆಳೆತ್ತರದ ಶಿವಲಿಂಗ. ಆಚೀಚೆಯ ಕಂಬಗಳು. ರಂಗದ ಬಲ ಮೂಲೆಯಲ್ಲಿ ಚಂದ್ರಾವತಿಯ ಮನೆಯನ್ನು ಸೂಚಿಸುವಂತೆ ಪುಟ್ಟ ರತ್ನಗಂಬಳಿ, ಹಿಂದೊಂದು ಸಣ್ಣ ಗೋಡೆಯಂಥ ನಿರ್ಮಿತಿಯನ್ನ ವಿನ್ಯಾಸಗೊಳಿಸಿಕೊಳ್ಳುವದರೊಂದಿಗೆ ಪಾತ್ರದ ಬೀಸು ಬೀಸಾದ ಚಲನೆಗಳಿಗೆ ಬೇಕಾದ ವಿಶಾಲ ಅವಕಾಶ ಇಟ್ಟುಕೊಳ್ಳುವಲ್ಲಿ ಜಾಣತನವಿದೆ. ಮತ್ತು ಇಂಥ ಅವಕಾಶವನ್ನ ಅಷ್ಟೇ ಚೆನ್ನಾಗಿ ಶಾಸ್ತ್ರಿಯವರು ಬಳಸಿಕೊಳ್ಳುತ್ತಾರೆ. ಅಭಿನಯ ವೈವಿಧ್ಯದಲ್ಲೂ ಅವರಿಗೆ ಮೆಚ್ಚುಗೆಗಳು ಸಲ್ಲುತ್ತವೆ.
ಮಾತುಗಳನ್ನೂ ಮೀರಿ ಕೆಲವೆಡೆ ಜೋರಾಗಿ ಕೇಳುವ ಸಂಗೀತದ ಭಾಗಗಳನ್ನ ಹೊರತುಪಡಿಸಿದರೆ ಸಂಗೀತ ಚೆನ್ನಾಗಿದೆ. ಬೆಳಕು ಪೂರಕವಾಗಿದೆ.
ಅಪರೂಪಕ್ಕೆ ರಂಗದ ಮೇಲೆ ಕಾಣಸಿಗುವ ನಾಟಕ ಇದು. ಮಾತಿನ ನಾಟಕ. ಅದರೂ ಇದನ್ನ ಸಮರ್ಥವಾಗಿ ರಂಗನಾಟಕವಾಗಿಸಿದ್ದಕ್ಕೆ ಅಭಿನಂದನೆಗಳು ಸಲ್ಲುತ್ತವೆ.
– ಕಿರಣ ಭಟ್, ಹೊನ್ನಾವರ.
ವಿಮರ್ಶಕರು