ಬೆಳಗಾವಿ : ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಐಕ್ಯೂಎಸಿ ಕನ್ನಡ ವಿಭಾಗ ಮತ್ತು ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಸಹಯೋಗದೊಂದಿಗೆ ಡಾ. ಡಿ.ಎಸ್. ಕರ್ಕಿ ಅವರ 116ನೇ ಜಯಂತ್ಯುತ್ಸವ ಪ್ರಯುಕ್ತ ‘ಕನ್ನಡದ ದೀಪ ಡಾ. ಡಿ.ಎಸ್. ಕರ್ಕಿ’ ಎಂಬ ವಿಷಯದ ಕುರಿತು ದಿನಾಂಕ 22-11-2023ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿ.ವಿ. ಮಾಲ್ಯಮಾಪನ ಕುಲಸಚಿವೆ ಹಾಗೂ ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮೀ ತಿರ್ಲಾಪೂರ ಅವರು “ವಿದ್ಯಾ ಸಂಪತ್ತಿನಿಂದ ದೊಡ್ಡ ಹುದ್ದೆಗೆ ಏರಿದರೂ ಸಾಹಿತಿ ಡಾ. ಡಿ.ಎಸ್. ಕರ್ಕಿ ಅವರಿಗೆ ಹಮ್ಮು ಬಿಮ್ಮು ಇದ್ದಿರಲಿಲ್ಲ. ಪ್ರಾಚಾರ್ಯರು, ಉಪನ್ಯಾಸಕರಾದವರು ಹೇಗಿರಬೇಕು ಎನ್ನುವುದನ್ನು ಸರಳತೆಯಿಂದ ತೋರಿಸಿಕೊಟ್ಟಿದ್ದರು. ಅಂತಹ ಮಹಾನ್ ವ್ಯಕ್ತಿಗಳ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿ ಎತ್ತರಕ್ಕೆ ಬೆಳೆಯಬೇಕು” ಎಂದು ಡಾ. ಡಿ.ಎಸ್. ಕರ್ಕಿ ಅವರ ಜೀವನ ಮೌಲ್ಯಗಳನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಾವಣಗೆರೆ ವಿ.ವಿ. ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಷಿ ಅವರು ಡಾ. ಡಿ.ಎಸ್. ಕರ್ಕಿ ಅವರ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಡಾ. ಡಿ.ಎಸ್. ಕರ್ಕಿ ಅವರು ರಚಿಸಿದ ‘ಹಚ್ಚೇವು ಕನ್ನಡದ ದೀಪ’ ಹಾಡಿಗೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಖುಷಿ ಮತ್ತು ಐಶ್ವರ್ಯಾ ಭರತನಾಟ್ಯ ನೃತ್ಯ ಪ್ರದರ್ಶನ ಮಾಡಿದರು. ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಅಂತರ್ ಕಾಲೇಜು ಸಮೂಹ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯರಾದ ಡಾ. ಜೆ.ಎಸ್. ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್. ಬನ್ನೂರ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಮಹಾದೇವಿ ಸಿ. ಹುಣಶೀಬೀಜ ಅತಿಥಿಗಳನ್ನು ಪರಿಚಯಿಸಿದರು. ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಅಧ್ಯಕ್ಷ ಡಾ. ರಮೇಶ ಕರ್ಕಿ ವಂದಿಸಿ, ವಿದ್ಯಾರ್ಥಿನಿಯರಾದ ಸಂಯುಕ್ತಾ ಮತ್ತು ಅಭಿನಯ ನಿರೂಪಿಸಿದರು.