ಮೈಸೂರು : ಅಭ್ಯಾಸಿ ಟ್ರಸ್ಟ್, ಚಾಮರಾಜನಗರ ಪ್ರಸ್ತುತ ಪಡಿಸುವ ಚಾಮರಾಜನಗರ ಗ್ರಾಮೀಣ ಭಾಷೆ ಮತ್ತು ಬದುಕಿನ ರಂಗಪ್ರಸ್ತುತಿ ‘ಕಂಡಾಯದ ಕೋಳಿ’ ದಿನಾಂಕ 26-11-2023ರ ಭಾನುವಾರ ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಶ್ರೀ ಮಂಜು ಕೋಡಿಉಗನೆ ರಚಿಸಿರುವ ಈ ರಂಗ ಪ್ರಸ್ತುತಿಯ ಸಂಗೀತ ಮತ್ತು ನಿರ್ದೇಶನ ಕಿರಣ್ ಗಿರ್ಗಿ ಅವರದ್ದು, ಶಿವಮಲ್ಲು ದೇಶಳ್ಳಿ ಮತ್ತು ಮಧು ಸೋಹನ್ ಸಂಗೀತದಲ್ಲಿ ಸಹಕರಿಸಲಿದ್ದು, ಎಸ್.ಜಿ. ಮಹಾಲಿಂಗ ಗಿರ್ಗಿ ಹಾಗೂ ಕೆ.ಪಿ. ರೇವತಿ ಶರ್ಮ ಗಾಯನದಲ್ಲಿ ಸಹಕರಿಸಲಿದ್ದಾರೆ. ರಂಗ ಪರಿಕರಗಳನ್ನು ಹರೀಶ್ ಸ್ಪಾಟ್ ಡಿಸೈನರ್ ಸಂಯೋಜಿಸಲಿದ್ದು, ಪ್ರಸಾಧನದಲ್ಲಿ ರಂಗನಾಥ ವಿ. ಮತ್ತು ಬೆಳಕಿನಲ್ಲಿ ಶಿವು ಗುಂಡ್ಲುಪೇಟೆ ಸಹಕರಿಸಲಿದ್ದಾರೆ.
ರಂಗದ ಮೇಲೆ ಕಾಳೀರನಾಗಿ ಕಿರಣ್ ಗಿರ್ಗಿ, ಕುಂಟಗಿರಿಯಾಗಿ ಮಹೇಶಪ್ಪ ಕಟ್ನವಾಡಿ, ಚಾಮಿಯಾಗಿ ವಿಜಿ, ಕೆಂಪಿಯಾಗಿ ನಂದಿನಿ ರವಿಕುಮಾರ್, ಸುಟ್ಟಣ್ಣ, ತಮಡಿ ಮತ್ತು ಮುರುಗೇಶನಾಗಿ ರಿದಂ ರಾಮಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಲೆ ನಟರಾಜ್, ಪುಟ್ಟಣ್ಣ ಮತ್ತು ಪೊಲೀಸ್ ಪೇದೆ ಪಾತ್ರದಲ್ಲಿ ಸುರೇಶ್ ಕೋಳಿಪಾಳ್ಯ, ಡಾಕ್ಟರ್ ಆಗಿ ರವಿತೇಜ್, ವಿದ್ಯಾರ್ಥಿ ಮೇಘ ಪಾತ್ರದಲ್ಲಿ ಅಭಿಷೇಕ್ ಆರ್. ಎಂ., ಕುಳವಾಡಿ ಮತ್ತು ಸುಂದ್ರಪ್ಪನಾಗಿ ಲೋಕೇಶ್ ನಲ್ಲೂರು, ಅಡಬಿಟ್ಟಿ ಸಿದ್ಧನಾಗಿ ಚಿನ್ನದಾಸಪ್ಪ, ಮೆಂಬರ್ ಶೇಖರನಾಗಿ ಪ್ರಶಾಂತ್ / ಮುದ್ದುರಾಜ್, ಪಕಾಸಿಯಾಗಿ ಶರತ್ ಎಂ. ಗಿರ್ಗಿ, ಪಕಾಸಿ ಸ್ನೇಹಿತರಾಗಿ ಹಿಮಾಂಶು, ವಚನ್ ಶೈವ ಹರ್ಷಿತ್, ಅರ್ಜುನ್ ಸುಕೃತ್, ಯುವನ್ ದೊರೆ ಮೋಹಿತ್ ಓಂಕಾರ್, ಬೆಳ್ಳಕ್ಕಿಗಳಾಗಿ ಅನ್ವಿತ, ಶ್ರೇಯಾ, ಅದ್ವಿತಾ ಶಶಿಧರ್, ಪೂರ್ವಿಕ, ಲೇಖನ, ಸುಸ್ಮಿತ ಮತ್ತು ವಿಸ್ಮಿತ ಪಾತ್ರವಹಿಸಲಿದ್ದಾರೆ.
ಟಿಕೆಟ್ ದರ ರೂ.125 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 7259537777, 9480468327, 7411491077
ನಾಟಕದ ಕುರಿತು : ಕಂಡಾಯದ ಕೋಳಿ
ಸಾಹಿತಿ ಮಂಜು ಕೋಡಿಉಗನೆ ಅವರ ‘ಬೆಟ್ಟ ಬೇಗೆ’ ಕಥಾ ಸಂಕಲನದ ‘ಚಾಮಿಯ ಕೋಳಿಯೂ ಮಂಟೇಸ್ವಾಮಿ ಕಂಡಾಯವೂ’ ಕತೆಯನ್ನಾಧರಿಸಿದ ರಂಗ ಪ್ರಯೋಗವೇ ‘ಕಂಡಾಯದ ಕೋಳಿ’ ನಾಟಕ. ಚಾಮರಾಜನಗರ ಗಡಿಭಾಗದ ಜನಪದರ ನಿತ್ಯದ ಬದುಕು ಆರಂಭವಾಗುವುದು ದೈವಸ್ವರೂಪಿ ಸಂತರೆನಿಸಿರುವ ಮಲೆ ಮಾದಯ್ಯ ಮತ್ತು ಮಂಟೇಲಿಂಗಯ್ಯರ ಮೇಲಿನ ಭಕ್ತಿ ನಮನಗಳ ಮೂಲಕವೇ. ಈ ದೇವರುಗಳ ಹೆಸರಿನಲ್ಲಿ ಎಳ್ಳಮಾವಾಸೆ, ಕಾರುಣ್ಣಿಮೆ, ಮಹಾಲಯ ಅಮಾವಾಸೆ, ದೀವಳಿಗೆ ಸೇವೆ, ಶಿವರಾತ್ರಿ ಸೇವೆ, ಜಾತ್ರೆಗಳು, ತೇರು, ಕೊಂಡೋತ್ಸವ, ಕಂಡಾಯದ ಮೆರವಣಿಗೆ ಉಗಾದಿ ಉತ್ಸವಗಳು ಪ್ರತಿ ಹಳ್ಳಿಗಳ ಸಾಕ್ಷಿಪ್ರಜ್ಞೆಯಂತೆ ನಿರಂತರವಾಗಿ ನಡೆಯುತ್ತಿರುತ್ತವೆ. ಇಂತಹ ಉತ್ಸವಗಳು ಜನಪದರ ಬದುಕಿನ ಒಂದು ಭಾಗವಾಗಿ ಸಮಾವೇಶಗೊಳ್ಳುವ ಸಂದರ್ಭಗಳಲ್ಲಿ ಸಂಭವಿಸುವ ಘಟನೆಗಳ ಕಲೆತ ಕಥಾವಸ್ತು ಈ ನಾಟಕದಲ್ಲಿದೆ.
ಕಂಡಾಯಕ್ಕೆ ಒಪ್ಪಿಸಲು ಬಿಟ್ಟಿದ್ದ ಚಾಮಿಯ ಕೋಳಿಯನ್ನು ಕದ್ದು ಮಾರಿ ಕುಡಿದ ಆಕೆಯ ಗಂಡ ಕಾಳೀರನಿಗೆ ಕಠಿಣ ದೇವರು ಮಂಟೇಲಿಂಗಯ್ಯನಿಂದ ಗಂಡಾಂತರ ಒದಗಿ ಬರುವ ನಂಬಿಕೆ ಹೆಚ್ಚಿ ದೇವರ ಹಾರಕ್ಕೆ ಒಲುವಾರ ಮಾಡಿದ ತಪ್ಪಿಗೆ ತಪ್ಪುಕಾಣಿಕೆ ಕಟ್ಟಿ ಪಾಪ ನಿವೇದನೆ ಮಾಡಿಕೊಳ್ಳುತ್ತಾಳೆ. ಆದರೂ ಕುಂಟಗಿರಿಯ ಕಾಳೀರನ ಮೇಲೆ ಜಗಳ ಕಾದು ಕಂಟಕ ಒದಗಿ ಬರುತ್ತದೆ. ಸಣ್ಣ ಕಾರಣವೊಂದು ಗಂಭೀರ ಸಂಘರ್ಷಕ್ಕೆ ನೆಪವಾಗುತ್ತ ಇಡೀ ಸಮಾಜವನ್ನು ಆವರಿಸಿಕೊಂಡು ಬದುಕಿನ ದಿಕ್ಕನ್ನು ದುರಂತದೆಡೆಗೆ ಸೆಳೆದು ಬೀಸಾಡಬಲ್ಲದು. ಅಂತಹ ದುರಂತಗಳ ಸರಮಾಲೆ ದಲಿತ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಕೆಲವು ವಿಸಂಗತಿಗಳ ಹಿಡಿದಿಟ್ಟು ಕಡೆದಿರುವ ಕತೆಯೇ ‘ಕಂಡಾಯದ ಕೋಳಿ’.
ನಾಟಕಕಾರ ಮಂಜು ಕೋಡಿಉಗನೆ :
ಸಿ. ಮಂಜುನಾಥ ಪ್ರಸನ್ನ ಅವರ ಹುಟ್ಟೂರು ಚಾಮರಾಜನಗರ ತಾಲೂಕಿನ ಕೋಡಿಉಗನೆ ಗ್ರಾಮ. ಮಂಜು ಕೋಡಿಉಗನೆ ಕಾವ್ಯನಾಮದೊಂದಿಗೆ ಗುರುತಿಸಿಕೊಂಡಿರುವ ಇವರು ಕವಿ, ಕಥೆಗಾರರು ಹಾಗೂ ಕಾದಂಬರಿಗಾರರು. ಇವರು 1991ರಲ್ಲಿ ಎಂ.ಎ. ಕನ್ನಡ ಪದವಿ ಪಡೆದು 1993ರಲ್ಲಿ ಕನ್ನಡ ಉಪನ್ಯಾಸಕರಾಗಿ ಕೊಡಗು ಜಿಲ್ಲೆಯಲ್ಲಿ ವೃತ್ತಿ ಆರಂಭಿಸಿದರು. ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ದಶಕಗಳ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿನಯದಿಂದಲೇ ಗುರುತಿಸಿಕೊಂಡಿರುವ ಮಂಜು ‘ಮಾರಿಕೋಳಿ’, ‘ನಾನು ಮಲ್ಲಿಗೆ ಮತ್ತು ದೇವರು’ ಎಂಬ ಕವನ ಸಂಕಲನಗಳನ್ನು, ‘ನೆಲದ ಜೀವ’, ‘ಬೆಟ್ಟ ಬೇಗೆ’ ಎಂಬ ಕಥಾ ಸಂಕಲನಗಳನ್ನು ಹಾಗೂ ‘ಶೂದ್ರ ಸಂವಾದ’ ಎನ್ನುವ ವಿಮರ್ಶಾ ಸಂಕಲನವನ್ನು ರಚಿಸಿದ್ದಾರೆ. ಇವರು ಹೊಸದಾಗಿ ರಚಿಸಿರುವ ‘ಚಪ್ಪೋಡು’ ಹೆಸರಿನ ಕಾದಂಬರಿಯು ಲೋಕಾರ್ಪಣೆಗೊಂಡು ಜನಮನ್ನಣೆ ಗಳಿಸಿದೆ. ಪ್ರವೃತ್ತಿಯಲ್ಲಿ ಇವರು ಸಾಹಿತಿಗಳಾಗಿರುವಂತೆಯೇ ರಂಗ ನಟರೂ ಹೌದು. ಪಿ.ಲಂಕೇಶರ ‘ಸಂಕ್ರಾಂತಿ’, ಹೆಚ್.ಎಸ್. ಶಿವಪ್ರಕಾಶರ ‘ಮಂಟೇಸ್ವಾಮಿ ಕಥಾ ಪ್ರಸಂಗ’, ‘ಕುರುಕ್ಷೇತ್ರ’ ಹಾಗೂ ‘ತ್ರಿಜನ್ಮ ಮೋಕ್ಷ’ ನಾಟಕಗಳಲ್ಲಿ ಅಭಿನಯಿಸಿರುವ ಅನುಭವಿಗಳು. ಇದಲ್ಲದೆ ಇವರು ‘ಜೋಳಿಗೆ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ ನಾಡಿನ ಹಲವಾರು ಕವಿ, ಸಾಹಿತಿಗಳ ಪುಸ್ತಕಗಳನ್ನು ಹೊರತಂದಿದ್ದಾರೆ. ಒಟ್ಟಾರೆ ಇವರದು ಬಹುಮುಖಿ ವ್ಯಕ್ತಿತ್ವ. 2012ರಲ್ಲಿ ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದ ಇವರು 2013ರಲ್ಲಿ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದರು. 2019ರಲ್ಲಿ ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹಾಗೂ 2020ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವರು. ಇವರ ‘ನಾನು ಮಲ್ಲಿಗೆ ಮತ್ತು ದೇವರು’ ಕವನ ಸಂಕಲನದ “ಬುದ್ಧ” ಕವಿತೆಯು 2019ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮತ್ತು ಬಿ.ಸಿ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ‘ಬೆಟ್ಟ ಬೇಗೆ’ ಕಥಾ ಸಂಕಲನದ ‘ಬೆಟ್ಟ ಬೇಗೆ’ ಕಥೆಯು ಮೈಸೂರು ವಿಶ್ವವಿದ್ಯಾಲಯದ ಈ ಸಾಲಿನ ದ್ವಿತೀಯ ಬಿ.ಎಸ್ಸಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆಯಾಗಿದೆ. ‘ಓ ಭೀಮ ಅಂಬೇಡ್ಕರ’ ಕವಿತೆ ಹಾಡಾಗಿದೆ. ‘ಕಂಡಾಯದ ಕೋಳಿ’ಯು ಇವರ ಮೊದಲ ನಾಟಕ ಕೃತಿಯಾಗಿದ್ದು, ಸದ್ಯದಲ್ಲೇ ಪುಸ್ತಕವಾಗಿ ಅಚ್ಚಾಗಲಿದೆ.
ನಿರ್ದೇಶಕ ಕಿರಣ್ ಗಿರ್ಗಿ
ಚಾಮರಾಜನಗರ ಜಿಲ್ಲೆ ಸಿದ್ದಯ್ಯನಪುರ ಗ್ರಾಮದವರಾದ ಕಿರಣ್ ಗಿರ್ಗಿ ಸೃಜನಶೀಲ ರಂಗ ನಿರ್ದೇಶಕ, ನಟ, ಸಂಗೀತ ಸಂಯೋಜಕ ಹಾಗೂ ಕವಿ. ‘ನ್ಯಾಣ’ ಕವಿತೆಗಳು ಇವರ ಚೊಚ್ಚಲ ಸಾಹಿತ್ಯ ಕೃತಿ. ಕಿರಣ್ ಕುಮಾರ್ ಎಸ್.ಕೆ. ಎಂಬುದು ಇವರ ಮೂಲ ಹೆಸರಾಗಿದ್ದರೂ ಕಿರಣ್ ಗಿರ್ಗಿ ಅಂತಲೇ ಚಿರಪರಿಚಿತರು. ಶಿಕ್ಷಣದಲ್ಲಿ ಡಿಪ್ಲೋಮಾ (ಡಿ.ಎಡ್.) ವಿದ್ಯಾರ್ಹತೆ ಹೊಂದಿದ ಇವರು ಮೈಸೂರಿನ “ಭಾರತೀಯ ರಂಗ ಶಿಕ್ಷಣ ಕೇಂದ್ರ ರಂಗಾಯಣ”ದ ರಂಗ ಅಭ್ಯಾಸಿಯಾಗಿ ‘ಡಿಪ್ಲೊಮಾ ಇನ್ ಥಿಯೇಟರ್ ಎಜುಕೇಷನ್’ ಕೋರ್ಸ್ ಮುಗಿಸಿ ರಂಗಾಯಣದ ಕಿರಿಯ ಕಲಾವಿದರಾಗಿ, ತಂತ್ರಜ್ಞರಾಗಿ ಕೆಲಸ ನಿರ್ವಹಿಸಿದ್ದಾರೆ. ‘ಕೋಳಿ ಎಸ್ತು’, ‘ಚಿರತೆ ಬಂತು ಚಿರತೆ’, ‘ಧರೆಗೆ ದೊಡ್ಡವರು ಮಂಟೇಸ್ವಾಮಿ – ಬಂಡಾಯದೊಡೆಯ’ ‘ಭಗದಜ್ಜುಕೀಯಂ’, ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರಿಮ್’,’ ಹ…!!!’, ‘ವೆನಿಸ್ಸಿನ ವ್ಯಾಪಾರ’, ‘ಗೊಂಬೆ’, ‘ಸದ್ಯಕ್ಕಿದು ಹುಚ್ಚರ ಸಂತೆ’, ‘ಕಂಸಾಯಣ’, ‘ರತ್ನ ಮಾಂಗಲ್ಯ’, ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಪ್ರಶಂಸೆಗಳಿಸಿದ್ದಾರೆ. ‘ರಂಗಶಂಕರ ಬೆಂಗಳೂರು’ ಆಯೋಜಿಸಿದ್ದ ‘ರಂಗ ನಿರ್ದೇಶನ ತರಬೇತಿ’ಯನ್ನು ಪಡೆದಿರುವ ಇವರು, ‘ಜೋಕುಮಾರಸ್ವಾಮಿ’, ‘ಕಂಡಾಯದ ಕೋಳಿ’,’ ಮಧ್ಯಮ ವ್ಯಾಯೋಗ’, ‘ದ ಪೇಯಿಂಗ್ ಗೆಸ್ಟ್’, ‘ವಿದೂಷಕ’, ‘ಕತ್ತೆ ಮತ್ತು ಧರ್ಮ’, ‘ಕುದುರೆ ಮೊಟ್ಟೆ’, ‘ನಾಳೆ ಬನ್ನಿ’, ‘ಶ್ರೀ ಕೃಷ್ಣ ಗಾರುಡಿ’, ‘ಒಗಟಿನ ರಾಣಿ’,’ ಗಿಡ್ಡ ಟೇಲರನ ಸಾಹಸಗಳು’, ‘ಕುಣಿ ಕುಣಿ ನವಿಲೇ’, ‘ಬೆಟ್ಟಕ್ಕೆ ಚಳಿಯಾದರೆ’, ‘ಪುಣ್ಯಕೋಟಿ’, ‘ಪ್ಲಾಸ್ಟಿಕ್ ರಾಕ್ಷಸ’, ‘ಬಾ ಬಾ ಮಳೆರಾಯ’, ‘ಸ್ನೇಹದ ಬಲ’, ಮುಂತಾದ ನಾಟಕಗಳು ಇವರ ನಿರ್ದೇಶನದಲ್ಲಿ ಪ್ರಯೋಗಗೊಂಡಿವೆ. ಮೈಸೂರಿನ ಅರಿವು ಶಾಲೆಯಲ್ಲಿ, ಚಾಮರಾಜನಗರದ ಎಂ.ಸಿ.ಎಸ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಕರಾಗಿ ಹಾಗೂ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ನ ಸಂಸ್ಥಾಪಿತ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ವಿವಿಧ ಯೋಜನೆಗಳನ್ನು ರೂಪಿಸಿ, ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಚಾಮರಾಜನಗರದ ‘ದೀನಬಂಧು ಶಾಲೆ’ಯಲ್ಲಿ ಶಿಕ್ಷಕ ವೃತ್ತಿ ಮುಂದುವರೆಸುವುದರ ಜೊತೆಗೆ ‘ಅಭ್ಯಾಸಿ ಟ್ರಸ್ಟ್’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಸಾಹಿತ್ಯ, ರಂಗಭೂಮಿ, ಸಂಗೀತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೈಸೂರಿನ ‘ನಿನಾದ ಸಂಗೀತ ಶಾಲೆ’ಯಲ್ಲಿ ಸಂಗೀತ ನಿರ್ದೇಶಕರಾದ ಎ.ಎಸ್. ಪ್ರಸನ್ನಕುಮಾರ್ ಅವರಿಂದ ‘ಮ್ಯೂಸಿಕಲ್ ಕೀಬೋರ್ಡ್ ವಾದನ’ ತರಬೇತಿ ಪಡೆದಿದ್ದು, ತಾವು ನಿರ್ದೇಶಿಸಿದ ನಾಟಕಗಳಿಗೆ ಮತ್ತು ಚಾಮರಾಜನಗರ ಜಿಲ್ಲೆಯ ಕವಿಗಳ ಆಯ್ದ ಕವಿತೆಗಳಿಗೆ ಸಂಗೀತ ಸಂಯೋಜಿಸಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಇವರ ರಂಗಭೂಮಿ, ಸಾಹಿತ್ಯ, ಸಂಗೀತ ಕ್ಷೇತ್ರದ ಸೇವೆಯನ್ನು ಗುರುತಿಸಿ ‘ಚಾಮರಾಜನಗರ ಜಿಲ್ಲೆಯ ಹೆಮ್ಮೆಯ ಕನ್ನಡಿಗರು’ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯು 2020 ನವೆಂಬರ್ ತಿಂಗಳಿನಲ್ಲಿ ಕಿರಣ್ ಗಿರ್ಗಿ ಅವರನ್ನು ಗೌರವಿಸಿದೆ.