ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ದತ್ತಿನಿಧಿ ಸಮಿತಿ ಮಂಗಳೂರು ಇದರ ಸಹಯೋಗದಲ್ಲಿ ಹಾಗೂ 20ನೇ ವರ್ಷದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26-11-2023 ರಂದು ನಗರದ ಪುರಭವನದಲ್ಲಿ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಶಿವರಾಜ್ ತಂಗಡಗಿ ಇವರು ವಿಶುಕುಮಾರ್ ಅವರ ಹೆಸರಿನಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಾಧ್ಯಾಪಕಿ ಅಕ್ಷಯ ಆರ್. ಶೆಟ್ಟಿ ಅವರಿಗೆ ವಿಶುಕುಮಾರ್ ಸಾಹಿತ್ಯ ಪುರಸ್ಕಾರ, ಪತ್ರಕರ್ತ ಭರತ್ ರಾಜ್ ಸನಿಲ್ ಅವರಿಗೆ ವಿಶುಕುಮಾರ್ ಪತ್ರಿಕೋದ್ಯಮ ಪುರಸ್ಕಾರ, ನಾಟಕ ಕಲಾವಿದ ರಕ್ಷಿತ್ ಗಾಣಿಗ ಅವರಿಗೆ ವಿಶುಕುಮಾರ್ ನಾಟಕ ಪುರಸ್ಕಾರ, ಬಂಟ್ವಾಳ ತುಡರ್ ಸೇವಾ ಟ್ರಸ್ಟ್ ಗೆ ವಿಶುಕುಮಾರ್ ಸಂಘಟನಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಈ ವೇಳೆ ಕನ್ನಡ ಶಾಲಾ ಮಕ್ಕಳ ಜಾನಪದ ನೃತ್ಯ ಸ್ಪರ್ಧೆ, ಕನ್ನಡ ಮಾಧ್ಯಮ ಶಾಲಾ ಶಿಕ್ಷಕರ ಜಾನಪದ ಗೀತೆ ಸ್ಪರ್ಧೆ, ಯುವವಾಹಿನಿ ಅಂತರ್ ಘಟಕ ಸ್ತಬ್ಧಚಿತ್ರ ಸ್ಪರ್ಧೆಗಳು ನಡೆಯಲಿವೆ.
ಇದೇ ಸಂದರ್ಭದಲ್ಲಿ ವಿಶುಕುಮಾರ್ ಪ್ರಶಸ್ತಿಯನ್ನು ಕರ್ನಾಟಕ ರತ್ನ. ಡಾ. ಪುನೀತ್ ರಾಜಕುಮಾರ್ (ಮರಣೋತ್ತರ) ಇವರಿಗೆ ನೀಡಿ ಗೌರವಿಸಲಾಗುವುದು. ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಘಂಟೆ6.00 ರಿಂದ ಬಿತ್ತ್ ಲ್ದ ಉಳ್ಳಾಲ್ದಿ ಅಪ್ಪೆ ಭಗವತಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.