ಧಾರವಾಡ : ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇದರ ‘ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ 2023’ವು ದಿನಾಂಕ 29-11-2023ರಂದು ಸಂಜೆ ಗಂಟೆ 5.30ಕ್ಕೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದರು ಚಿತ್ರಕಲಾ ಪ್ರಾತ್ಯಕ್ಷಿಕೆಯನ್ನು ದಿನಾಂಕ 28-11-2023ರಂದು ಬೆಳಿಗ್ಗೆ ಗಂಟೆ 11ಕ್ಕೆ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ನೀಡಲಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಭಾರತ ಸರ್ಕಾರದ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಇವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಎಸ್. ಲಾಡ್ ಇವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಹಿರಿಯ ಕಲಾವಿದ ಶ್ರೀ ಎಂ.ಆರ್. ಬಾಳಿಕಾಯಿ ಅವರ ಜೀವಮಾನ ಸಾಧನೆಗಾಗಿ ‘ಕುಂಚ ಕಲಾ ತಪಸ್ವಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಈ ಪುರಸ್ಕಾರವು ನಗದು ಒಂದು ಲಕ್ಷ ಒಳಗೊಂಡಿದೆ. ಬಾಳಿಕಾಯಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದವರಾಗಿದ್ದು ಸದ್ಯ ಧಾರವಾಡದಲ್ಲಿ ನೆಲೆಸಿದ್ದಾರೆ. ಹುಬ್ಬಳ್ಳಿಯ ಡಾ. ಚಂದ್ರಕಾಂತ ಡಿ. ಜೆಟ್ಟಣ್ಣವರ ಅವರನ್ನು ‘ಕುಂಚ ಕಲಾಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ನಗದು ರೂ.50,000/-ಒಳಗೊಂಡಿದೆ. ಚಂದ್ರಕಾಂತ ಅವರು ಮೂಲತಃ ಗದಗದವರು. ಧಾರವಾಡದ ಡಾ. ಬಸವರಾಜ ಎಸ್. ಕಲೆಗಾರ ಹಾಗೂ ಪುಣೆಯ ಶ್ರೀಮತಿ ಸುರಭಿ ಕಾಂಚನಾ ಗುಲ್ವೇಲ್ಕರ್ ಅವರ ಕಲಾ ಸಾಧನೆಗಾಗಿ ‘ಯುವ ಕುಂಚ ಕಲಾಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ನಗದು ರೂ.25,000/- ಒಳಗೊಂಡಿದೆ. ಬಸವರಾಜ ಅವರು ಮೂಲತಃ ಯಾದಗಿರಿಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದವರು.
ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ಅವರ ಪರಿಚಯ :
ನಾಡಿನ ಹಿರಿಯ ಕಲಾಚೇತನ ಶ್ರೀ ದಾನಪ್ಪ ವೀರಭದ್ರಪ್ಪ ಹಾಲಭಾವಿಯವರು 1907 ನವೆಂಬರ್ 29ರಂದು ಧಾರವಾಡದಲ್ಲಿ ಜನಿಸಿದರು. ಇವರು ದಕ್ಷ ನ್ಯಾಯಾಧೀಶರಾಗಿದ್ದ ಶ್ರೀಯುತ ವೀರಭದ್ರಪ್ಪ ಮತ್ತು ಶ್ರೀಮತಿ ಚನ್ನಬಸವ್ವನವರ ಸುಪುತ್ರರು. ಚಿಕ್ಕಂದಿನಿಂದಲೂ ಚಿತ್ರಕಲೆಯ ಗೀಳು ಹಚ್ಚಿಕೊಂಡಿದ್ದ ಶ್ರೀ ಡಿ.ವ್ಹಿ. ಹಾಲಭಾವಿಯವರು ಮುಂಬಯಿಯ ಪ್ರತಿಷ್ಠಿತ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟಿನಲ್ಲಿ ಉನ್ನತ ಚಿತ್ರಕಲಾ ವ್ಯಾಸಂಗ ಮಾಡಿದವರು. ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರಕಲಾ ಶಾಲೆಗಳಿಲ್ಲದ ಕಾರಣ, ದೂರದ ಮುಂಬಯಿಗೆ ವ್ಯಾಸಂಗಕ್ಕೆ ಹೋಗುವ ತೊಂದರೆಯನ್ನು ಮನಗಂಡು, ಧಾರವಾಡದಲ್ಲಿ ಒಂದು ಚಿತ್ರಕಲಾ ಶಾಲೆಯನ್ನು ಪ್ರಾರಂಭಿಸಲೇಬೇಕೆಂಬ ಛಲದಿಂದ 1935ರಲ್ಲಿ ಚಿತ್ರಕಲಾ ಶಾಲೆಯನ್ನು ತಂದೆಯ ಸಹಾಯದಿಂದ ಪ್ರಾರಂಭಿಸಿದರು. ಚಿತ್ರಕಲೆಯ ಬಗ್ಗೆ ಆಗ ಜನರಲ್ಲಿ ಎಳ್ಳಷ್ಟೂ ಅರಿವಿಲ್ಲದಿದ್ದ ಕಾಲದಲ್ಲಿ ಕಲೆ ಹಾಗೂ ಕಲಾ ಶಿಕ್ಷಣವನ್ನು ಬೆಳೆಸಿ, ಉಳಿಸುವುದಕ್ಕೆ ಚಿತ್ರಕಲಾ ಶಾಲೆಯನ್ನು ನಡೆಸಲು ಬಹಳಷ್ಟು ತೊಂದರೆಯನ್ನು ಇವರು ಎದುರಿಸಿದರು. ಇಂದು ಈ ಸಂಸ್ಥೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಸಾವಿರಾರು ಚಿತ್ರಕಲಾ ಶಿಕ್ಷಕರನ್ನು, ಶ್ರೇಷ್ಠ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿಗೆ ಪಾತ್ರವಾಗಿದೆ. ರಾಜ್ಯದಲ್ಲಿ ನಂತರ ಸ್ಥಾಪನೆಗೊಂಡ ಚಿತ್ರಕಲಾ ಶಾಲೆಗಳಿಗೆ ‘ಹಾಲಭಾವಿ ಸ್ಕೂಲ್ ಆಫ್ ಆರ್ಟ’ ಮಾತೃ ಸಂಸ್ಥೆಯೆಂಬುದು ಹೆಮ್ಮೆಯ ಸಂಗತಿ.
ಶ್ರೀಯುತರು ರಚಿಸಿದ ವಿವಿಧ ಮಾಧ್ಯಮದ, ವಿವಿಧ ವಿಷಯಗಳ ಕಲಾಕೃತಿಗಳು ದೇಶ, ವಿದೇಶಗಳಲ್ಲಿ ಸಂಗ್ರಹಗೊಂಡಿವೆ. ದಿಲ್ಲಿಯ ರಾಷ್ಟ್ರಪತಿ ಭವನದ ಗುಮ್ಮಟಗಳ ಮೇಲೆ ಚಿತ್ರ ರಚಿಸಿದ ಕಲಾವಿದರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರು ಮಾಡಿದ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯದ ಚಿತ್ರಕಲೆಯ ಅತ್ಯುನ್ನತ ಪ್ರಶಸ್ತಿಯಾದ ಕೆ. ವೆಂಕಟಪ್ಪ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿದೆ. ಶ್ರೀಯುತರು ಒಬ್ಬ ಶ್ರೇಷ್ಠ ಕಲಾವಿದ, ಕಲಾ ಶಿಕ್ಷಕನೆಂದು ಗುರುತಿಸಿಕೊಳ್ಳುವುದಲ್ಲದೆ, ಫೋಟೋಗ್ರಾಫಿ, ಸಂಗೀತ, ನೃತ್ಯಗಳಲ್ಲಿ ತರಬೇತಿ ಶಾಲೆಗಳನ್ನು ನಡೆಸುವುದರ ಜೊತೆಗೆ ಸಾಹಿತ್ಯ, ಭಾಷೆ-ಬರವಣಿಗೆಯಲ್ಲೂ ವಿಶೇಷ ಆಸಕ್ತಿ ಹೊಂದಿದ್ದರು. ಕಲಾವಿದರ ಹಾಗೂ ಕಲೆಯ ಕುರಿತು ಆನೇಕ ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಕಲೆಯ ಬೆಳವಣಿಗೆಗೆ ಪ್ರಥಮ ಚಿತ್ರಕಲಾ ಪತ್ರಿಕೆ ‘ಆರ್ಟಗಿಲ್ಡ್’ನ್ನು ಇವರು ಪ್ರಕಟಿಸಿದ್ದಾರೆ.
ಶ್ರೀಯುತರು 1997 ಡಿಸೆಂಬರ್ 26ರಂದು ದೈವಾಧೀನರಾದರು. ತಮ್ಮ ಕೊನೆಯ ಉಸಿರಿನವರೆಗೂ ಕಲಾ ಸೇವೆಯನ್ನು ಮಾಡಿದ ಕಲಾ ತಪಸ್ವಿ. ಇವರು ಮಾಡಿದ ಕಲಾಸೇವೆಗಾಗಿ ಕರ್ನಾಟಕ ಸರಕಾರ ಧಾರವಾಡದಲ್ಲಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟನ್ನು 2012ರಲ್ಲಿ ಸ್ಥಾಪಿಸಿ, ಚಿತ್ರಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದೆ.